Rajhya Sabha Elections 2022 Live: ರಾಜ್ಯಸಭೆ ಚುನಾವಣೆ ಬಹುತೇಕ ಅಂತ್ಯಗೊಂಡಿದ್ದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಕಿತ್ತಾಟದಿಂದ ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಗೆಲುವಿಗೆ ಕಾರಣವಾಗಿದೆ. ಎರಡನೇ ಪ್ರಾಶಸ್ತ್ಯದ ಮತಗಳು ಹೆಚ್ಚು ಪಡೆದ ಹಿನ್ನೆಲೆಯಲ್ಲಿ ಲೆಹರ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಬೆಂಗಳೂರು (ಜೂ 10): ಕರ್ನಾಟಕದ ನಾಲ್ಕು ರಾಜ್ಯಸಭಾ ಅಭ್ಯರ್ಥಿಗಳನ್ನು ಆರಿಸಲು ಚುನಾವಣೆ ಆರಂಭವಾಗಲಿದ್ದು, ನಾಲ್ಕು ಜೆಡಿಎಸ್ ಶಾಸಕರ ನಡೆ ಮೇಲೆ ನಾಲ್ಕನೇ ಅಭ್ಯರ್ಥಿ ಯಾರಾಗಬಹುದೆಂಬ ಕುತೂಹಲ ಹೆಚ್ಚಿಸಿದೆ. ಅತೀವ ಕುತೂಹಲ ಹೆಚ್ಚಿಸಿದ ರಾಜಸಭೆಯ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗೆ ಏಷ್ಯಾನೆಟ್‌ನ್ಯೂಸ್.ಕಾಮ್‌ಗೆ ಲಾಗಿನ್ ಆಗಿರಿ. 

ಶುಕ್ರವಾರ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 5ಗಂಟೆಗೆ ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳ ಗೆಲುವಿಗೆ ಕನಿಷ್ಠ ಮೊದಲ ಪ್ರಾಶಸ್ತ್ಯದ 45 ಮತಗಳ ಅಗತ್ಯ ಇದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಬಲ 122, ಕಾಂಗ್ರೆಸ್‌ ಶಾಸಕರ ಸಂಖ್ಯೆ 70 ಮತ್ತು ಜೆಡಿಎಸ್‌ನ ಬಲ 32 ಇದೆ. ಬಿಜೆಪಿ ಎರಡು ಮತ್ತು ಕಾಂಗ್ರೆಸ್‌ ಒಂದು ಸ್ಥಾನವನ್ನು ಸುಲಭವಾಗಿ ಜಯಗಳಿಸಲಿದೆ. ಜೆಡಿಎಸ್‌ನ ಕುಪೇಂದ್ರರೆಡ್ಡಿಗೆ ಸಂಖ್ಯಾಬಲದ ಕೊರತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಎರಡನೇ ಪ್ರಾಶಸ್ತ್ಯ ಮತ ಚಲಾವಣೆಯ ಅವಕಾಶ ಸಿಗಲಿದೆ.

ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್‌ಗೆ ಒಂದು ಸ್ಥಾನ ಖಚಿತವಾಗಿವೆ. ಬಿಜೆಪಿಯ ನಿರ್ಮಲಾ ಸೀತಾರಾಮನ್‌ (Nirmala Sitharaman), ಜಗ್ಗೇಶ್‌ (Jaggesh) ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್‌ (Jairam Ramesh) ಅವರ ಗೆಲುವು ಖಚಿತವಾಗಿದೆ. ನಾಲ್ಕನೇ ಸ್ಥಾನಕ್ಕಾಗಿ ಬಿಜೆಪಿಯಿಂದ ಲೆಹರ್‌ ಸಿಂಗ್‌ ಸಿರೋಯ, ಕಾಂಗ್ರೆಸ್‌ನಿಂದ ಮನ್ಸೂರ್‌ ಅಲಿ ಖಾನ್‌ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕನೇ ಸ್ಥಾನದ್ದೇ ಕುತೂಹಲ

ಜೆಡಿಎಸ್ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ:
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಇತ್ತೀಚೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕಾರಣ ಅಡ್ಡ ಮತದಾನದ ಆತಂಕ ಮೂಡಿತ್ತು. ಆದರೆ, ಜಿಡಿಎಸ್‌ನಿಂದ ಅಂತರ ಕಾಯ್ದುಕೊಂಡ ನಾಲ್ವರು ಜೆಡಿಎಸ್ ಶಾಸಕರಲ್ಲಿ ತುಮಕೂರು ಗ್ರಾಮಾಂತರದ ಉಮಾಶಂಕರ್, ಅರಸಿಕೆರೆಯ ಶಿವರಾಮೇಗೌಡ ಮತ್ತು ಅರಕಲುಗೋಡು ಶಾಸಕ ಎ.ಟಿ.ರಾಮಸ್ವಾಮಿ ಮನವೊಲಿಸುವಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಶಸ್ವಿಯಾಗಿದ್ದು, ನಾಲ್ಕನೇ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಆದರೆ, ಕೋಲಾರ ಶಾಸಕ ಜೆಡಿಎಸ್ ಶ್ರೀನಿವಾಸ ಗೌಡರ ನಡೆ ಇನ್ನೂ ನಿಗೂಢವಾಗಿದೆ. 

ಈಗಾಗಲೇ ಕಾಂಗ್ರೆಸ್ ದೋಣಿಯಲ್ಲಿ ಒಂದು ಕಾಲು ಇಟ್ಟಿರುವ ಚಾಮುಂಡೇಶ್ವರಿ (Chamundeshwari) MLA ಜಿ.ಟಿ.ದೇವೇಗೌಡ (G T DeveGowda) ಮಾತ್ರ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ಪಕ್ಷದ ಹಿರಿಯರು ಹಾಗೂ ಕ್ಷೇತ್ರದ ಕಾರ್ಯಕರ್ತರ ಆಶಯದಂತೆ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. 

245 ಸದಸ್ಯ ಬಲ ಹೊಂದಿರುವ ರಾಜ್ಯಸಭೆಯಲ್ಲಿ 233 ಚುನಾಯಿತ ಮತ್ತು 12 ನಾಮನಿರ್ದೇಶಿತ ಸದಸ್ಯರೂ ಸೇರಿದ್ದಾರೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 233 ಸದಸ್ಯರನ್ನು ಆಯ್ಕೆ ಮಾಡಿದರೆ, ಉಳಿದ 12 ಅಭ್ಯರ್ಥಿಗಳನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ.

ಯಾರು ಲೆಹರ್ ಸಿಂಗ್?: 
ಬಿಜೆಪಿ ಅಭ್ಯರ್ಥಿಗಳಾದ ನಿರ್ಮಲಾ ಸೀತರಾಮನ್ ಮತ್ತು ಸ್ಯಾಂಡಲ್‌ವುಡ್ ನಟ ಜಗ್ದೇಶ್ ಗೆಲ್ಲೋದು ಖಚಿತ. ಆದರೆ, ಮೂರನೇ ಅಭ್ಯರ್ಥಿಯಾಗಿ ಬಿಜೆಪಿ ಲೆಹರ್ ಸಿಂಗ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಜಗಳದಲ್ಲಿ ಇವರು ಗೆಲ್ಲುವ ನಿರೀಕ್ಷೆ ಇದೆ. 

ರಾಜ್ಯಸಭೆ ಚುನಾವಣೆ: ಸಿದ್ದು ಲೆಕ್ಕಚಾರದವೇ ಬೇರೆ

ರಾಜಸ್ಥಾನ (Rajasthan) ಮೂಲದವರು. ದಿಲ್ಲಿಯಲ್ಲಿ ಪ್ರಭಾವಿ ಆಗಿದ್ದ ಅನಂತಕುಮಾರ್‌ ದೂರವಾದ ಮೇಲೆ ದಿಲ್ಲಿ ಸಂಪರ್ಕಕ್ಕಾಗಿ ಯಡಿಯೂರಪ್ಪ ಬಳಸಿದ್ದು ಈ ಲೆಹರ್ ಸಿಂಗ್ ಅವರನ್ನು. ರಾಜಸ್ಥಾನದ ರಾಜಸಮುಂದ ಜಿಲ್ಲೆಯ ಕುಮಾರಿಯಾದಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಸಿಂಗ್‌ ಅವೆನ್ಯೂ ರೋಡ್‌ನಲ್ಲಿ ಸಣ್ಣ ವ್ಯಾಪಾರಿಯಾಗಿದ್ದರು. ಬೆಂಗಳೂರಿಗೆ ಬರುತ್ತಿದ್ದ ದಿಲ್ಲಿ ನಾಯಕರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಬಿಜೆಪಿ ಪ್ರೊಟೋಕಾಲ್‌ ತಂಡದಲ್ಲಿದ್ದರು. ನೋಡನೋಡುತ್ತಲೇ ಲೆಹರ್‌ ಹಿಂದಿ ಬಾರದ ಯಡಿಯೂರಪ್ಪಗೆ ದಿಲ್ಲಿ ವ್ಯವಹಾರಗಳಲ್ಲಿ ನೆರವಾಗುತ್ತಿದ್ದರು. ಇತ್ತೀಚೆಗೆ ನಾನು ಯಡಿಯೂರಪ್ಪರಿಂದ ದೂರ ಇದ್ದೇನೆ ಎಂದು ಲೆಹರ್ ಸಿಂಗ್ ಹೇಳಿಕೊಳ್ಳುತ್ತಿದ್ದರು. ಈಗ ಏಕಾಏಕಿ ಟಿಕೆಟ್‌ ಪಡೆದಿದ್ದಾರೆ. 


ಮತದಾನಕ್ಕೆ ಆಗಮಿಸಿದ ಜಾರಕಿಹೊಳಿ:
ವಿವಿಧ ಕಾರಣಗಳಿಂದ ಅಂತರ ಕಾಯ್ದುಕೊಂಡಿರುವ ಗೋಕಾಖ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮತದಾನಕ್ಕೆ ಬರ್ತಾರೋ, ಇಲ್ಲವೋ ಎಂಬ ಬಗ್ಗೆ ಗೊಂದಲವಿತ್ತು. ಆದರೆ, ಕೊನೆಗೂ ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜಾರಕಿಹೊಳಿ ಜೊತೆ ಲಿಂಬಾವಾಳಿ ಹಾಗೂ ಮಹೇಶ್ ಕುಮ್ಮಟಳ್ಳಿ ಆಗಮಿಸಿ ಮತ ಚಲಾಯಿಸಿದ್ದಾರೆ. 

ಶರತ್ ಬಚ್ಚೇಗೌಡರಿಗೆ ಗಾಳ ಹಾಕಿದ ಬಿಜೆಪಿ:
ಬಿಜೆಪಿ ವಿರುದ್ಧ ಬಂಡಾಯವೆದ್ದು ಹೊಸಕೋಟೆ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಗೆಲವು ಸಾಧಿಸಿದ್ದ ಶರತ್ ಬಚ್ಚೇಗೌಡ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಗಾಳ ಹಾಕಿದ್ದು, ಬಿಜೆಪಿಗೆ ಮತ ಹಾಕುವ ನಿರೀಕ್ಷೆ ಇದೆ. 

ಮೊದಲ ಅಡ್ಡ ಮತದಾನ:
ನಿರೀಕ್ಷೆಯಂತೆ ಕೋಲಾರ ಜೆಡಿಎಸ್ ಶಾಸಕ (Kolar JDS MLA) ಶ್ರೀನಿವಾಸಗೊಡರಿಂದ ಮೊದಲ ಅಡ್ಡ ಮತದಾನ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಅವರು ಮತ ಚಲಾಯಿಸಿದ್ದಾರೆ. 

ಜಗ್ಗೇಶ್ ಗೆಲವು ಅಧಿಕೃತ ಘೋಷಣೆ ಬಾಕಿ:
ನಿರೀಕ್ಷೆಯಂತೆ ಸ್ಯಾಂಡಲ‌ವುಡ್ ನಟ ಜಗ್ಗೇಶ್‌ಗೆ ಮೊದಲ ಪ್ರಾಶಸ್ತ್ಯದ 44 ಮತಗಳು ಸಿಕ್ಕಿದ್ದು, ಎರಡನ್ ಪ್ರಾಶಸ್ತ್ಯದ 33 ಮತಗಳು ಸಿಕ್ಕಿವೆ. ಬಿಜೆಪಿ ಅಭ್ಯರ್ಥಿಗಳಾದ ನಿರ್ಮಲಾ ಸೀತರಾಮನ್ ಮತ್ತು ಜಗ್ಗೇಶ್ ಗೆಲುವಿನ ಅಧಿಕೃತ ಘೋಷಣೆ ಬಾಕಿ ಇದೆ.

ಅಸಿಂಧು ಮತ ಚಲಾಯಿಸಿದ ಗುಬ್ಬಿ ಶ್ರೀನಿವಾಸ್‌:

ಜೆಡಿಎಸ್‌ನ ಶಾಸಕ ಗುಬ್ಬಿ ಶ್ರೀನಿವಾಸ್‌ ಅಸಿಂಧು ಮತವನ್ನು ಹಾಕಿದ್ದಾರೆ. ಅಂದರೆ ಅವರ ಮತ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಆದರೆ ಈ ಬಗ್ಗೆ ಪ್ರಶ್ನೆ ಕೇಳಿದಾಗ, ಜೆಡಿಎಸ್‌ಗೆ ಮತ ಹಾಕಿದ್ದೀನಿ ಎಂದು ಹೇಳಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌ಡಿ ಕುಮಾರಸ್ವಾಮಿ ಗುಬ್ಬಿ ಶ್ರೀನಿವಾಸ್‌ ಮೇಲೆ ಕೆಂಡಾಮಂಡಲವಾಗಿದ್ದಾರೆ. 

ಅಡ್ಡ ಮತದಾನಕ್ಕೆ ಎಚ್‌ಡಿಕೆ ಅಸಮಾಧಾನ:

ಕೋಲಾರದ ಶ್ರೀನಿವಾಸ ಗೌಡ ಅವರು ಅಡ್ಡ ಮತದಾನ ಮಾಡಿ ಕಾಂಗ್ರೆಸ್‌ನ ಮನ್ಸೂರ್‌ ಅಲಿ ಖಾನ್‌ಗೆ ಮತ ಹಾಕಿದ್ದಾರೆ. ಇದಕ್ಕೆ ಕೋಪಗೊಂಡಿರುವ ಕುಮಾರಸ್ವಾಮಿ, ಮಾನ ಮರ್ಯಾದೆ ಇದ್ದರೆ ಶ್ರೀನಿವಾಸ್‌ ಗೌಡ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಕೋಲಾರದ ಜನ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದಾರೆ, ಶ್ರೀನಿವಾಸ್‌ ಗೌಡ ಜೆಡಿಎಸ್‌ ವಿರುದ್ಧ ಹೋಗುವ ಮೂಲಕ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಗುಡುಗಿದ್ದಾರೆ. 

ಜೆಡಿಎಸ್‌ಗೆ ಮತಹಾಕಿದ ಜಿಟಿ ದೇವೇಗೌಡ:

ನಾನು ಜೆಡಿಎಸ್‌ ಪಕ್ಷದಿಂದ ಗೆದ್ದಿದ್ದೇನೆ. ಅಸಮಾಧಾನವಿದೆ, ಆದರೆ ನಾನು ಜೆಡಿಎಸ್‌ ಅಭ್ಯರ್ಥಿಗೇ ಮತ ಹಾಕುತ್ತೇನೆ ಎಂದು ಹೇಳಿದ ಜಿಟಿ ದೇವೇಗೌಡ ಅವರು, ನಂತರ ಜೆಡಿಎಸ್‌ ಅಭ್ಯರ್ಥಿಗೇ ಮತ ಹಾಕಿದ್ದಾರೆ.

ಬಿಜೆಪಿ ಮೂರು ಅಭ್ಯರ್ಥಿಗಳಿಗೆ ಜಯ:

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಡಿದಾಟದಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಲೆಕ್ಕಾಚಾರ ತಲೆಕೆಳಗಾಗಿದೆ. ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಮತ್ತು ಜೆಡಿಎಸ್‌ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ. 

ಖಾಲಿ ಬ್ಯಾಲಟ್‌ ಪತ್ರ ತೋರಿಸಿದ್ರೆ ರಾಜೀನಾಮೆ; ಗುಬ್ಬಿ ಶ್ರೀನಿವಾಸ್‌:

ಗುಬ್ಬಿ ಶ್ರೀನಿವಾಸ್‌ ಅಸಿಂಧು ಮತದಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಖಾಲಿ ಬ್ಯಾಲಟ್‌ ಪೇಪರ್‌ ತೋರಿಸಿದರೆ ನಾನೇ ಖುದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ನಾನು ಜೆಡಿಎಸ್‌ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಮತ ನೀಡಿದ್ದೇನೆ ಎಂದು ಹೇಳಿದ್ದಾರೆ. 

ರಾಜ್ಯ ಸಭೆ ಮತ ಲೆಕ್ಕ:

ಬಿಜೆಪಿ ಅಭ್ಯರ್ಥಿಗಳು

ನಿರ್ಮಲಾ ಸೀತಾರಾಮನ್ 
ಮೊದಲ ಪ್ರಾಶಸ್ತ್ಯ ಮತಗಳು - 46

ಜಗ್ಗೇಶ್..
ಮೊದಲ ಪ್ರಾಶಸ್ತ್ಯ ಮತಗಳು - 44
ಎರಡನೇ ಪ್ರಾಶಸ್ತ್ಯದ ಮತಗಳು - 32

ಲೇಹರ್ ಸಿಂಗ್ :
ಮೊದಲ ಪ್ರಾಶಸ್ತ್ಯ ಮತಗಳು - 32
ಎರಡನೇ ಪ್ರಾಶಸ್ತ್ಯ ಮತಗಳು - 90..

ಕಾಂಗ್ರೆಸ್ ಅಭ್ಯರ್ಥಿಗಳು:

ಜೈರಾಮ್ ರಮೇಶ್ 
ಮೊದಲ ಪ್ರಾಶಸ್ತ್ಯ ಮತಗಳು - 46
ಎರಡನೇ ಪ್ರಾಶಸ್ತ್ಯ ಮತಗಳು - 25

ಮನ್ಸೂರ್ ಅಲಿ ಖಾನ್ 
ಮೊದಲ ಪ್ರಾಶಸ್ತ್ಯ ಮತಗಳು - 25
ಎರಡನೇ ಪ್ರಾಶಸ್ತ್ಯ ಮತಗಳು - 46

ಜೆಡಿಎಸ್ ಅಭ್ಯರ್ಥಿ:
ಕುಪೇಂದ್ರ ರೆಡ್ಡಿ:
ಮೊದಲ ಪ್ರಾಶಸ್ತ್ಯ ಮತಗಳು - 31 
(ಗುಬ್ಬಿ ಶಾಸಕ ಶ್ರೀನಿವಾಸ್ ಮತ ಸೇರಿ 31.)
ಶ್ರೀನಿವಾಸ್ ಅವರ ಮತ ಅಸಿಂಧುವಾದರೆ 30..
ಎರಡನೇ ಪ್ರಾಶಸ್ತ್ಯದ ಮತಗಳು - 0

ರೇವಣ್ಣ ಮತ ಅಸಿಂಧುಗೊಳಿಸುವಂತೆ ಕಾಂಗ್ರೆಸ್‌ ದೂರು:

ಎಚ್‌ಡಿ ರೇವಣ್ಣ ಇಂದು ಮತದಾನದ ವೇಳೆ ತಮ್ಮ ಬ್ಯಾಲಟ್‌ ಪತ್ರವನ್ನು ಮೊದಲು ಡಿಕೆ ಶಿವಕುಮಾರ್‌ ಅವರಿಗೆ ತೋರಿಸಿ ನಂತರ ಅವರ ಪಕ್ಷದ ಏಜೆಂಟ್‌ಗೆ ತೋರಿಸಿದ್ದರು. ಇದನ್ನು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಪ್ರಶ್ನಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸಬೇಕು ಎಂದು ದೂರು ನೀಡಲಾಗಿದೆ.

ರೇವಣ್ಣ ಮತ ಅಸಿಂಧುವಲ್ಲ:

ರೇವಣ್ಣ ಅವರ ಮತ ಅಸಿಂಧುವಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ. ರೇವಣ್ಣ ಚುನಾವಣಾ ನಿಯಮಗಳನ್ನು ಮೀರಿಲ್ಲ, ಆದ್ದರಿಂದ ಅವರ ಮತ ಅಸಿಂಧುವಲ್ಲ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಸ್ಪಷ್ಟನೆ ನೀಡಿದ್ದಾರೆ.

ಮತ ಎಣಿಕೆ ಆರಂಭ:

ರೇವಣ್ಣ ಅವರ ಮತ ಸಿಂಧುವೋ ಅಸಿಂಧುವೋ ಎಂಬುದನ್ನು ದೆಹಲಿ ಚುನಾವಣಾ ಆಯೋಗವೇ ಈಗ ನಿರ್ಧರಿಸಿದ್ದು, ಸಿಂಧು ಎಂದು ಸ್ಪಷ್ಟನೆ ನೀಡಿದೆ. ಇದರ ಬೆನ್ನಲ್ಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕೆಲವೇ ನಿಮಿಷಗಳಲ್ಲಿ ಅಧಿಕೃತ ಫಲಿತಾಂಶ ಹೊರಬೀಳಲಿದೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಮತ್ತು ಲೆಹರ್‌ ಸಿಂಗ್‌ ಗೆಲ್ಲುವುದು ಬಹುತೇಕ ಖಚಿತ. ಇತ್ತ ಕಾಂಗ್ರೆಸ್‌ನ ಜೈರಾಂ ರಮೇಶ್‌ ಕೂಡ ಗೆಲ್ಲುವುದು ನಿಶ್ಚಿತ.