ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಪಕ್ಷದ ಏಜೆಂಟ್ ಎಚ್.ಡಿ.ರೇವಣ್ಣ ಅವರಿಗೆ ಯಾಮಾರಿಸಿ ಬಿಜೆಪಿಗೆ ಮತ ಹಾಕಿದ್ದಾರೆ.
ಬೆಂಗಳೂರು (ಜೂ.11): ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಪಕ್ಷದ ಏಜೆಂಟ್ ಎಚ್.ಡಿ.ರೇವಣ್ಣ ಅವರಿಗೆ ಯಾಮಾರಿಸಿ ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ, ಶ್ರೀನಿವಾಸ್ ಮಾತ್ರ ತಾವು ಯಾವುದೇ ಅಡ್ಡ ಮತದಾನ ಮಾಡಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. ಒಂದಲ್ಲ, ಸಾವಿರ ಸಲ ಬೇಕಾದರೂ, ಎಲ್ಲಿ ಕರೆದು ಕೇಳಿದರೂ ಜೆಡಿಎಸ್‌ಗೇ ಮತ ಹಾಕಿದ್ದೇನೆ ಎಂದು ಹೇಳುತ್ತೇನೆ ಎಂದಿದ್ದಾರೆ. ಶುಕ್ರವಾರ ಬೆಳಗ್ಗೆ ನೇರವಾಗಿ ವಿಧಾನಸೌಧಕ್ಕೆ ಬಂದ ಶ್ರೀನಿವಾಸ್ ಅವರು ಮತ ಚಲಾಯಿಸಿದರು.
ಈ ವೇಳೆ ಬಿಜೆಪಿಯ ಲೆಹರ್‌ಸಿಂಗ್ ಅವರಿಗೆ ಮತ ಹಾಕಿದ್ದರೂ, ಅದು ಗೊತ್ತಾಗದಂತೆ ಅದರ ಮೇಲೆ ಬೆರಳು ಇಟ್ಟು ಜೆಡಿಎಸ್ ಏಜೆಂಟ್ ಎಚ್.ಡಿ.ರೇವಣ್ಣ ಅವರಿಗೆ ಯಾರಿಗೂ ಹಾಕಿಲ್ಲವೆಂಬಂತೆ ತೋರಿಸಿ ಮತಪೆಟ್ಟಿಗೆಗೆ ಹಾಕಿದ್ದಾರೆ. ಮತಪತ್ರದಲ್ಲಿ ಯಾವುದೇ ಗುರುತು ಮಾಡದೆ ಖಾಲಿ ಹಾಕಿದ್ದಾರೆ ಎಂದು ಜೆಡಿಎಸ್ ವರಿಷ್ಠರು ಭಾವಿಸಿದ್ದಾರೆ. ಮತ ಚಲಾಯಿಸಿದ ಬಳಿಕ ಶ್ರೀನಿವಾಸ್ ಅವರು ಜೆಡಿಎಸ್‌ಗೆ ಮತ ಹಾಕಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಖಾಲಿ ಮತಪತ್ರ ನೀಡಿಲ್ಲ.
ಜೆಡಿಎಸ್‌ಗೇ ಮತ ಹಾಕ್ಬೇಕು ಅಂತ ಅಂದ್ಕೊಂಡಿದ್ದೇನೆ, ಕೊನೆ ಕ್ಷಣದಲ್ಲಿ ಏನ್ ಬೇಕಾದ್ರೂ ಆಗಬಹುದು: ಗುಬ್ಬಿ ಶಾಸಕ
ನಾನು ಮತ ಹಾಕಿದ್ದೇನೋ ಅಥವಾ ಇಲ್ಲವೋ ಎಂಬುದು ಮತ ಎಣಿಕೆ ಬಳಿಕ ಗೊತ್ತಾಗಲಿದೆ. ಒಂದು ವೇಳೆ ನಾನು ಖಾಲಿ ಮತ ಪತ್ರ ನೀಡಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಎಸೆದರು. ಶ್ರೀನಿವಾಸ್ ನಡೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು. ಬಳಿಕವೂ ಸ್ಪಷ್ಟನೆ ನೀಡಿದ ಶ್ರೀನಿವಾಸ್, ಜೆಡಿಎಸ್‌ಗೆ ಮತ ಹಾಕಿದ್ದೇನೆ ಎಂದರು. ನಂತರ ರಾತ್ರಿಯ ವೇಳೆಗೆ ಅವರು ಬಿಜೆಪಿಗೆ ಮತ ಹಾಕಿರುವುದು ಬಹಿರಂಗವಾಯಿತು. ಆದರೂ ಶ್ರೀನಿವಾಸ್ ತಾವು ಜೆಡಿಎಸ್‌ಗೇ ಮತ ಹಾಕಿದ್ದೇನೆ ಎಂದು ಪುನರುಚ್ಚರಿಸಿದರು.
ರಾಹುಕಾಲ ಬಳಿಕ ಜೆಡಿಎಸ್ ಶಾಸಕರ ಮತದಾನ: ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮತದಾನ ಆರಂಭಗೊಂಡಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಬೆಳಗ್ಗೆ ಮತದಾನ ಮಾಡಿದರು. ಜೆಡಿಎಸ್ ಸದಸ್ಯರು ಬಸ್‌ನಲ್ಲಿ ವಿಧಾನಸೌಧಕ್ಕೆ ಬಂದಾಗ ರಾಹುಕಾಲ ಸಮೀಪಿಸಿತ್ತು. ಹೀಗಾಗಿ ರೇವಣ್ಣ ಸಲಹೆ ಮೇರೆಗೆ ವಿಧಾನಸೌಧಕ್ಕೆ ಬಂದ ಶಾಸಕರು ಪಕ್ಷದ ಕಚೇರಿಯಲ್ಲಿ ರಾಹುಕಾಲ ಕಳೆಯುವವರೆಗೆ ಕಾಲ ಕಳೆದರು. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ರಾಹುಕಾಲ ಇದ್ದು, ಅದು ಮುಗಿದ ಬಳಿಕ ಎಲ್ಲರೂ ಒಟ್ಟಾಗಿ ಬಂದು ಮತ ಚಲಾಯಿಸಿದರು.
ಗುಬ್ಬಿ ವಿಧಾನಸಭಾ ಅಖಾಡದಲ್ಲಿ ಮೆಗಾ ಟೆಸ್ಟ್ , ಮನವೊಲಿಕೆ ಕುಮಾರಸ್ವಾಮಿ ಕಸರತ್ತು
ಎಸ್.ಆರ್.ಶ್ರೀನಿವಾಸ್, ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಮತ್ತು ಜಿ.ಟಿ.ದೇವೇಗೌಡ ಅವರು ನೇರವಾಗಿ ವಿಧಾನಸೌಧಕ್ಕೆ ಪ್ರತ್ಯೇಕವಾಗಿ ಬಂದರು. ಶ್ರೀನಿವಾಸ ಗೌಡ ಅವರು ಪ್ರತ್ಯೇಕವಾಗಿ ಬಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಗೆ ತೆರಳಿ ಅಲ್ಲಿಂದ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದರು. ನಂತರ ಮತ್ತೆ ಸಿದ್ದರಾಮಯ್ಯ ಕಚೇರಿಗೆ ತೆರಳಿ ಸ್ವಲ್ಪಕಾಲ ಚರ್ಚೆ ನಡೆಸಿ ನಂತರ ಹಿಂತಿರುಗಿದರು. ಗುಬ್ಬಿಯ ಶ್ರೀನಿವಾಸ ಅವರು ವಿಧಾನಸೌಧಕ್ಕೆ ಬಂದು ನೇರವಾಗಿ ಮತದಾನ ಕೇಂದ್ರಕ್ಕೆ ತೆರಳಿ ಬಿಜೆಪಿಗೆ ಮತ ಹಾಕಿ ಹಿಂತಿರುಗಿದರು.
