* ಒಂದೇ ಏಟಿಗೆ 3 ಹಕ್ಕಿ ಹೊಡೆದ ಪ್ರತಿಪಕ್ಷದ ನಾಯಕ* ಸಂದಿಗ್ಧ ಸ್ಥಿತಿಯ ಲಾಭ ಪಡೆಯುತ್ತಿದ್ದ ಜೆಡಿಎಸ್‌ಗೆ ಮರ್ಮಾಘಾತ* ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಮಾತೇ ಅಂತಿಮ ಎಂಬ ಸಂದೇಶ ರವಾನೆ* ಜೆಡಿಎಸ್‌ನೊಳಗಿನ ಬಿರುಕು ಬಟಾಬಯಲು ಮಾಡುವಲ್ಲಿ ಯಶಸ್ವಿ

ಎಸ್‌. ಗಿರೀಶ್‌ಬಾಬು

ಬೆಂಗಳೂರು(ಜೂ,11): ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿರಬಹುದು. ಆದರೆ, ಈ ನೆಪದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯೋಗಿಸಿದ ತಂತ್ರಗಾರಿಕೆ ಪಕ್ಕಾ ಫಲಿಸಿದೆ.

ರಾಜ್ಯ ರಾಜಕಾರಣದಲ್ಲಿ ಯಾವಾಗೆಲ್ಲ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆಯೋ ಆಗೆಲ್ಲ ಲಾಭ ಗಿಟ್ಟಿಸುತ್ತಿದ್ದ ಜೆಡಿಎಸ್‌ಗೆ ಈ ಬಾರಿ ಮರ್ಮಾಘಾತ ನೀಡಿದ್ದರ ಜತೆಗೆ ಕಾಂಗ್ರೆಸ್‌ ಪಕ್ಷದೊಳಗೂ ತಮ್ಮ ಮಾತೇ ಅಂತಿಮ ಎಂಬ ಸ್ಪಷ್ಟಸಂದೇಶ ರವಾನೆಯಾಗುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

2023ರ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆಗೆ ಲಗ್ಗೆಯಿಟ್ಟರೆ ಮಾತ್ರ ಗದ್ದುಗೆ ಹಿಡಿಯಲು ಬೇಕಾದ ಸಂಖ್ಯೆ ತನಗೆ ದೊರೆಯಲು ಸಾಧ್ಯ ಎಂಬ ಭಾವನೆ ಕಾಂಗ್ರೆಸ್‌ ವಲಯದಲ್ಲಿದೆ. ಜೆಡಿಎಸ್‌ ಭದ್ರಕೋಟೆಗೆ ನುಗ್ಗಬೇಕು ಎಂದರೆ ಮೊದಲು ಆ ಪಕ್ಷದೊಂದಿಗೆ ಚುನಾವಣೆ ಮುನ್ನ ಯಾವುದೇ ರೀತಿಯ ಮೈತ್ರಿಯಿಲ್ಲ ಎಂಬ ಸ್ಪಷ್ಟಸಂದೇಶ ರವಾನೆಯಾಗಬೇಕಿತ್ತು. ಜತೆಗೆ, ಜೆಡಿಎಸ್‌ನೊಳಗೆ ಬಿರುಕು ಅಧಿಕೃತವಾಗಿ ಹೊರಬರಬೇಕಿತ್ತು. ಇವೆಲ್ಲವನ್ನು ಈ ಒಂದು ನಡೆಯಿಂದ ಸಾಧ್ಯವಾಗಿಸಿದ್ದಾರೆ ಸಿದ್ದರಾಮಯ್ಯ.

ಮೌನ ರಾಜಕಾರಣ!:

ರಾಜ್ಯ ರಾಜಕಾರಣದಲ್ಲಿ ಯಾವಾಗ ಅಂಕಿ-ಸಂಖ್ಯೆ ಆಟ ಆರಂಭವಾದರೂ ಜೆಡಿಎಸ್‌ ಅದರ ಲಾಭ ಗಿಟ್ಟಿಸುತ್ತಿತ್ತು. ರಾಜ್ಯಸಭೆ ಚುನಾವಣೆಯ ಮೂರನೇ ಸ್ಥಾನದ ಬಗ್ಗೆಯೂ ಅಂತಹುದೇ ಸ್ಥಿತಿ ನಿರ್ಮಾಣವಾದಾಗ ಜೆಡಿಎಸ್‌ ಸಹಜವಾಗಿಯೇ ಲಾಭ ಪಡೆಯಲು ಮುಂದಾಗಿತ್ತು. ದೇವೇಗೌಡರೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತನಾಡಿದ್ದರು. ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರು. ಈ ಹಂತದಲ್ಲಿ ಕಾಂಗ್ರೆಸ್‌ ಎರಡನೇ ಅಭ್ಯರ್ಥಿ ಅದೂ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದು ಸಾಧಿಸಿದರು ಸಿದ್ದರಾಮಯ್ಯ.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಪ್ರಭಾವ ಬೀರಿಸಲು ಜೆಡಿಎಸ್‌ ವರಿಷ್ಠರು ಯತ್ನಿಸಿದರು. ಆದರೆ, ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡರೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಆಗುವ ಲಾಭವೇನು ಎಂದು ಹೈಕಮಾಂಡ್‌ಗೆ ಮನದಟ್ಟು ಮಾಡಿದ್ದ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಹೈಕಮಾಂಡ್‌ ಏನಾದರೂ ಜೆಡಿಎಸ್‌ ಪರ ನಿಂತರೆ ತಾವು ‘ಮೌನ’ ವಹಿಸುವುದಾಗಿ ನೇರವಾಗಿ ತಿಳಿಸಿದ್ದರು ಎನ್ನುತ್ತವೆ ಮೂಲಗಳು.

ಸಿದ್ದರಾಮಯ್ಯ ಅವರ ಈ ಪಟ್ಟಿಗೆ ಹೈಕಮಾಂಡ್‌ ಬಳಿ ಉತ್ತರವಿಲ್ಲದ ಕಾರಣ ದೇವೇಗೌಡರ ಖರ್ಗೆ ಅಸ್ತ್ರ ವಿಫಲವಾಯಿತು. ಇದರಿಂದ ಹೈಕಮಾಂಡ್‌ನಲ್ಲಿ ಶಿವಕುಮಾರ್‌ ಹಾಗೂ ಖರ್ಗೆ ಅವರಿಗಿಂತ ಸಿದ್ದರಾಮಯ್ಯ ಅವರ ಮಾತಿಗೆ ಹೆಚ್ಚು ಬೆಲೆ ಎಂಬ ಸಂದೇಶ ರವಾನೆಯಾಗುವಂತಾಯ್ತು.

ಜೆಡಿಎಸ್‌ಗೆ ಆಘಾತ:

ಈ ಚುನಾವಣೆಯಲ್ಲಿ ಜೆಡಿಎಸ್‌ನ ಐವರು ಶಾಸಕರು ಅಡ್ಡ ಮತದಾನ ಮಾಡುವ ನಿರೀಕ್ಷೆಯನ್ನು ಕಾಂಗ್ರೆಸ್‌ ಹೊಂದಿತ್ತು. ಗುಬ್ಬಿಯ ಎಸ್‌.ಆರ್‌.ಶ್ರೀನಿವಾಸ್‌, ಅರಸೀಕೆರೆಯ ಕೆ.ಎಂ. ಶಿವಲಿಂಗೇಗೌಡ, ಕೋಲಾರದ ಶೀನಿವಾಸ ಗೌಡ, ಚಾಮುಂಡೇಶ್ವರಿಯ ಜಿ.ಟಿ.ದೇವೇಗೌಡ ಮತ್ತು ನಾಗಠಾಣದ ದೇವಾನಂದ ಚವ್ಹಾಣ್‌ ಅವರ ಬಗ್ಗೆ ಈ ನಿರೀಕ್ಷೆಯಿತ್ತು.

ಆದರೆ, ಕೋಲಾರದ ಶ್ರೀನಿವಾಸಗೌಡ ಮಾತ್ರ ಸ್ಪಷ್ಟಅಡ್ಡ ಮತದಾನ ಮಾಡಿದ್ದರೆ, ಗುಬ್ಬಿಯ ಎಸ್‌.ಆರ್‌. ಶ್ರೀನಿವಾಸ್‌ ಅವರ ಮತ ಅಸಿಂಧುವಾಗಿದ್ದು ಬಿಟ್ಟರೆ ಉಳಿದವರಾರ‍ಯರು ಅಡ್ಡ ಮತದಾನ ಮಾಡಿಲ್ಲ. ಆದರೆ, ಮತದಾನಕ್ಕೂ ಮುನ್ನ ಶಿವಲಿಂಗೇಗೌಡ, ಜಿ.ಟಿ. ದೇವೇಗೌಡ ಹಾಗೂ ಶ್ರೀನಿವಾಸ್‌ ಅವರು ಬಹಿರಂಗವಾಗಿಯೇ ಪಕ್ಷದ ನಾಯಕತ್ವದ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇದರಿಂದ ಜೆಡಿಎಸ್‌ ನಾಯಕತ್ವದ ಬಗ್ಗೆ ಆ ಪಕ್ಷದ ಶಾಸಕರು ಅದರಲ್ಲೂ ಒಕ್ಕಲಿಗ ಶಾಸಕರಿಗೆ ಸಮಾಧಾನವಿಲ್ಲ. ಅವರನ್ನು ಜೆಡಿಎಸ್‌ ಉತ್ತಮವಾಗಿ ನಡೆಸಿಕೊಂಡಿಲ್ಲ ಮತ್ತು ಈ ಒಕ್ಕಲಿಗ ಶಾಸಕರು ಕಾಂಗ್ರೆಸ್‌ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಹೊಂದಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಹಿಂದುತ್ವದ ಅಜೆಂಡಾ ಹಾಗೂ ಕೇಂದ್ರದ ನಾಯಕತ್ವದ ತಂತ್ರಗಾರಿಕೆಯಿಂದ ತನ್ನ ಭದ್ರಕೋಟೆಯನ್ನು ಕಾಯ್ದುಕೊಳ್ಳುವ ಲಕ್ಷಣಗಳಿವೆ ಎಂದು ಆಂತರಿಕ ಸರ್ವೇಗಳು ಹೇಳಿವೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್‌ ಸ್ಕೋರ್‌ ಮಾಡಬೇಕಿರುವುದು ಹಳೆ ಮೈಸೂರು ಅಂದರೆ ಜೆಡಿಎಸ್‌ ಶಕ್ತಿವಲಯದಲ್ಲಿ. ಹೀಗಾಗಿ, ಜೆಡಿಎಸ್‌ ದುರ್ಬಲಗೊಂಡಿದೆ ಎಂಬ ಸಂದೇಶ ರವಾನೆಯಾದರೆ ಅದರ ಲಾಭ ಕಾಂಗ್ರೆಸ್ಸಿಗೆ ಆಗುತ್ತದೆ. ಈ ದಿಸೆಯಲ್ಲಿ ರಾಜ್ಯಸಭೆ ಚುನಾವಣೆ ಒಂದು ಹೆಜ್ಜೆ ಎಂದೇ ಸಿದ್ದರಾಮಯ್ಯ ಆಪ್ತರ ಅಂಬೋಣ.