ಆಪರೇಷನ್ ಕಮಲ ಆಡಿಯೋ ಪ್ರಕರಣ, DYSP ನೇತೃತ್ವದಲ್ಲಿ ತನಿಖೆ ಶುರು
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆ ಶುರುವಾಗಿದ್ದು, ಇಂದು ಆಪರೇಷನ್ ಕಮಲ ನಡೆದಿರುವ ಸ್ಥಳ ಪರಿಶೀಲನೆ ನಡೆಯಿತು.
ರಾಯಚೂರು, [ಫೆ.19]: ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆ ಶುರುವಾಗಿದೆ.
ಇಂದು [ಮಂಗಳವಾರ] ಡಿವೈಎಸ್ ಪಿ ಹರೀಶ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ದೂರುದಾರ ಶರಣಗೌಡ ಕಂದಕೂರ ಅವರನ್ನು ದೇವದುರ್ಗಕ್ಕೆ ಕರೆಸಿ ವಿಚಾರಣೆ ನಡೆಸಿದರು.
ಆಡಿಯೋ ಬಾಂಬ್ ಕೇಸ್: ಯಡಿಯೂರಪ್ಪಗೆ ಬಿಗ್ ರಿಲೀಫ್
ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಕಂದಕೂರು ವಿಚಾರಣೆ ವೇಳೆ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡರು. ಬಳಿಕ ಆಪರೇಷನ್ ಬಗ್ಗೆ ಚರ್ಚೆ ನಡೆದಿದ್ದ ರಾಯಚೂರು ಜಿಲ್ಲೆ ದೇವದುರ್ಗದ ಐಬಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಕಳೆದ ಫೆ. 13ರಂದು ಶರಣಗೌಡ ಕಂದಕೂರ ದೇವದುರ್ಗ ಪೊಲೀಸ್ ಠಾಣೆಯಲ್ಲಿ ನಾಲ್ವರ ದೂರು ನೀಡಿದ್ದರು. ಆರೋಪಿ ನಂ.1 ಯಡಿಯೂರಪ್ಪ, ಆರೋಪಿ ನಂ. 2 ದೇವದುರ್ಗ ಶಾಸಕ ಶಿವನಗೌಡ ನಾಯಕ್ , ಆರೋಪಿ ನಂ.3 ಹಾಸನ ಶಾಸಕ ಪ್ರೀತಂಗೌಡ , ಆರೋಪಿ ನಂ.4 ಪತ್ರಕರ್ತ ಮರಂಕಲ್ ವಿರುದ್ಧ IPC- 1860, U/S- 120B, 504, 34 ಅಡಿ ಎಫ್ ಐಆರ್ ದಾಖಲಿಸಿದ್ದರು.
ದೇವದುರ್ಗದ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಅಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆದಿತ್ತು. ಶರಣಗೌಡ ಕಂದಕೂರ ಅವರನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಬಿಜೆಪಿಗೆ ಬರುವಂತೆ ಆಮಿಷವೊಡ್ಡಿದ್ದರು.
ಆದ್ರೆ ಇದನೆಲ್ಲ ಶರಣಗೌಡ ಅವರು ಫೋನ್ ನಲ್ಲಿ ರೇಕಾರ್ಡ್ ಮಾಡಿಕೊಂಡು ಸಿಎಂ ಕುಮಾರಸ್ವಾಮಿ ಅವರಿಗೆ ತಂದು ನೀಡಿದ್ದರು. ಬಳಿಕ ರಾಜ್ಯ ಬಜೆಟ್ ದಿನದಂದು [ಫೆ.8] ಕುಮಾರಸ್ವಾಮಿ ಅವರು ದಿಢೀರ್ ಸುದ್ದಿಗೋಷ್ಠಿ ನಡೆಸಿ ಆಪರೇಷನ್ ಕಮಲದ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು.
ಈ ಆಡಿಯೋ ರಾಷ್ಟ್ರ ಮಟ್ಟದಲ್ಲೂ ಚರ್ಚೆಯಾಗಿತ್ತು. ಅಲ್ಲದೇ ಈ ಕ್ಲಿಪ್ ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ.ಗೆ ಬುಕ್ ಮಾಡಲಾಗಿದೆ ಅಂತೆಲ್ಲ ಹೇಳಲಾಗಿದೆ.
ಇದ್ರಿಂದ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪದಲ್ಲಿ ಚರ್ಚೆಗೆ ಇಟ್ಟರು. ನಂತರ ಈ ಪ್ರಕರಣ ತನಿಖೆಯಾಗಲೇಬೇಕು. ಸತ್ಯ ಹೊರಬರಬೇಕು ಎಂದು SITಗೆ ಆದೇಶಿಸಿದ್ದರು. ಆದ್ರೆ ಇದಕ್ಕೆ ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿತ್ತು.
ಇನ್ನು ಈ ಪ್ರಕರಣದ ನಾಲ್ವರು ಆರೋಪಿಗಳಿಗೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.