ಅ.17ರಂದು ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ, ಭಾರತ್‌ ಜೋಡೋ ಯಾತ್ರೆಗೆ 1 ದಿನದ ಬ್ರೇಕ್‌, ದಿಲ್ಲಿಗೆ ಹೋಗುವ ಬದಲು ಬೆಂಗಳೂರಲ್ಲೇ ಮತ ಹಾಕಲಿದ್ದಾರೆ ರಾಹುಲ್‌ ಗಾಂಧಿ

ಎಸ್‌.ಗಿರೀಶ್‌ ಬಾಬು

ಬೆಂಗಳೂರು(ಸೆ.25):  ಗಾಂಧಿ ಕುಟುಂಬಕ್ಕೆ ಹೊರತಾದವರೂ ಸ್ಪರ್ಧಿಸುತ್ತಿರುವ ಎಐಸಿಸಿ ಅಧ್ಯಕ್ಷ ಚುನಾವಣೆಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸ್ಥಾಪಿತವಾಗುವ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾವಣೆ ಮಾಡಲಿದ್ದಾರೆ. ಇದಕ್ಕಾಗಿ ಭಾರತ್‌ ಜೋಡೋ ಯಾತ್ರೆಗೆ ಒಂದು ದಿನದ ತಾತ್ಕಲಿಕ ಬ್ರೇಕ್‌ ಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ತೀವ್ರ ಕುತೂಹಲ ಕೆರಳಿಸಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಅಕ್ಟೋಬರ್‌ 17ರಂದು ನಡೆಯಲಿದೆ. ಭಾರತ್‌ ಜೋಡೋ ಯಾತ್ರೆ ನಡೆಸಿರುವ ರಾಹುಲ್‌ ಗಾಂಧಿ ಅವರು ಈ ಅವಧಿಯಲ್ಲಿ ಕರ್ನಾಟಕದಲ್ಲಿರುತ್ತಾರೆ. ಹೀಗಾಗಿ ಚುನಾವಣೆಗೆ ಮತದಾನ ಮಾಡಲು ಯಾತ್ರೆಗೆ ಬ್ರೇಕ್‌ ಬೀಳಲಿದೆ. ಇನ್ನು ಮತದಾನಕ್ಕಾಗಿ ದೂರದ ದೆಹಲಿಗೆ ಹೋಗುವುದಕ್ಕಿಂತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸ್ಥಾಪಿತವಾಗುವ ಮತಗಟ್ಟೆಯಲ್ಲೇ ತಮ್ಮ ಹಕ್ಕು ಚಲಾಯಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ದೇಶ ರಕ್ಷಣೆಗಾಗಿ ರಾಹುಲ್‌ ಗಾಂಧಿಯಿಂದ ಭಾರತ್‌ ಜೋಡೋ ಯಾತ್ರೆ: ಬಿ.ಕೆ.ಹರಿಪ್ರಸಾದ್‌

ಇದಕ್ಕಾಗಿ ಪಾದಯಾತ್ರೆ ಸ್ಥಳದಿಂದ ವಾಹನದಲ್ಲಿ ಬೆಂಗಳೂರಿಗೆ ಬಂದು ಮತದಾನ ನಡೆಸಿ ನಂತರ ಮತ್ತೆ ಪಾದಯಾತ್ರೆಯ ತಾಣಕ್ಕೆ ಹಿಂತಿರುಗಿ ಭಾರತ್‌ ಜೋಡೋ ಯಾತ್ರೆಯನ್ನು ಮುಂದುವರೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮತಗಟ್ಟೆಸ್ಥಾಪಿಸುವ ಹಾಗೂ ರಾಹುಲ್‌ ಗಾಂಧಿ ಅವರ ಮತದಾನಕ್ಕೆ ಪೂರಕವಾದಂತಹ ವ್ಯವಸ್ಥೆ ರೂಪಿಸುವ ಬಗ್ಗೆ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್‌ ತಂಡದ ಪ್ರಮುಖ ಸದಸ್ಯರು ಪಾಲ್ಗೊಂಡಿದ್ದರು.

22 ಕೋಟಿ ರು. ವೆಚ್ಚದ ಕೆಪಿಸಿಸಿ ಕಟ್ಟಡ ಉದ್ಘಾಟನೆ:

ರಾಹುಲ್‌ ಗಾಂಧಿ ಅವರ ಮತದಾನಕ್ಕೆ ಆಗಮಿಸುವ ದಿನದಂದೇ (ಅಕ್ಟೋಬರ್‌ 17) ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯ ಪಕ್ಕದಲ್ಲೇ ಸುಮಾರು 22 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೃಹತ್‌ ಆಡಿಟೋರಿಯಂ ಒಳಗೊಂಡ ಕೆಪಿಸಿಸಿ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಸಲು ಕೆಪಿಸಿಸಿ ನಾಯಕತ್ವ ಚಿಂತಿಸಿದೆ. ರಾಹುಲ್‌ ಗಾಂಧಿ ಅವರಿಂದ ಈ ಕಟ್ಟಡ ಉದ್ಘಾಟನೆ ನೆರವೇರಿಸಿ 1200 ಮಂದಿ ಆಸೀನರಾಗಬಹುದಾದ ಹೊಸ ಸಭಾಂಗಣದಲ್ಲಿ ಸಭೆಯೊಂದನ್ನು ನಡೆಸುವ ಉದ್ದೇಶವೂ ಇದೆ ಎಂದು ಮೂಲಗಳು ತಿಳಿಸಿವೆ.

ಕಟ್ಟಡದಲ್ಲಿ ಏನೇನಿದೆ?

ಕೆಪಿಸಿಸಿ ಮುಖ್ಯ ಕಚೇರಿ ಪಕ್ಕದಲ್ಲೇ ಇರುವ ಕಾಂಗ್ರೆಸ್‌ಗೆ ಸೇರಿದ ನಿವೇಶನದಲ್ಲಿ ಮೂರು ಅಂತಸ್ತಿನ ಬೃಹತ್‌ ಕಟ್ಟಡ ನಿರ್ಮಾಣ ಕಾರ್ಯ 2014ರಲ್ಲಿ ಆರಂಭಗೊಂಡಿದ್ದು, ಇದೀಗ ಪೂರ್ಣಗೊಳ್ಳುವ ಹಂತ ಮುಟ್ಟಿದೆ. ಈ ಕಟ್ಟಡದಲ್ಲಿ ಎರಡು ಕೆಳ ಅಂತಸ್ತುಗಳನ್ನು ಸಂಪೂರ್ಣವಾಗಿ ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ. ಮೊದಲ ಹಾಗೂ ಎರಡನೇ ಅಂತಸ್ತಿನಲ್ಲಿ ಬೃಹತ್‌ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದ್ದು, 1200 ಮಂದಿ ಒಮ್ಮೆಗೆ ಕೂರಬಹುದಾದಂತಹ ಸಭಾಂಗಣವಿದು. ಮೂರನೇ ಅಂತಸ್ತಿನಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರ ಕಚೇರಿಗಳಿಗೆ ಜಾಗ ಮೀಸಲಿರಿಸಲಾಗಿದೆ. ಟೆರೇಸ್‌ನಲ್ಲಿ ಕ್ಯಾಂಟೀನ್‌ ಸ್ಥಾಪನೆ ಮಾಡುವ ಉದ್ದೇಶವನ್ನು ಕೆಪಿಸಿಸಿ ಹೊಂದಿದೆ.