ಸತತ ಎರಡು ದಿನಗಳ ಕಾಲ ಕರಾವಳಿ ಹಾಗೂ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿರುವ ರಾಹುಲ್‌ ಗಾಂಧಿ. 

ಬೆಂಗಳೂರು(ಏ.27): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರು ಗುರುವಾರ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ಸತತ ಎರಡು ದಿನಗಳ ಕಾಲ ಕರಾವಳಿ ಹಾಗೂ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಗುರುವಾರ ಮಧ್ಯಾಹ್ನ 2.45 ಗಂಟೆಗೆ ವಿಶೇಷ ವಿಮಾನದ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಬಳಿಕ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳಲಿದ್ದಾರೆ. ಸಂಜೆ 5 ಗಂಟೆಗೆ ಮೀನುಗಾರರ ಜತೆ ಸಂವಾದ ನಡೆಸಲಿರುವ ಅವರು ಬಳಿಕ ಮಂಗಳೂರಿಗೆ ತೆರಳಲಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಬೃಹತ್‌ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಕರಾವಳಿ ಭಾಗದ ಸಮಸ್ಯೆ, ಮೀನುಗಾರರ ಸಮಸ್ಯೆ, ಕಾನೂನು ಸುವ್ಯವಸ್ಥೆ ವೈಫಲ್ಯದ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ.

NewsHour ಕಿತ್ತೂರು ಕರ್ನಾಟಕದಲ್ಲಿ ರಾಹುಲ್ ಅಬ್ಬರ, ಲಿಂಗಾಯತ ಮತಬೇಟೆ!

ಮಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ ಕಲಬುರಗಿಯಿಂದ ಚಿಂಚೋಳಿ ಕ್ಷೇತ್ರಕ್ಕೆ ತೆರಳಿ ಸುಲೇಪೇಟದಲ್ಲಿ ಬೃಹತ್‌ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿಜಯನಗರಕ್ಕೆ ತೆರಳಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಲಿದ್ದಾರೆ. ಹೆಲಿಕಾಪ್ಟರ್‌ ಮೂಲಕ ಕುಷ್ಟಗಿ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸಲಿರುವ ಅವರು ಬಳಿಕ ದೆಹಲಿಗೆ ವಾಪಸ್ಸಾಗಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.