* ಸಿದ್ದು, ಡಿಕೆಶಿ ಮಧ್ಯೆ ಹೊಂದಾಣಿಕೆಗೆ ಸುನಿಲ್ ಕಳುಹಿಸಿದ ರಾಹುಲ್‌ ಗಾಂಧಿ* ಕಾಂಗ್ರೆಸ್‌ ರಣತಂತ್ರಕ್ಕೆ ಕನ್ನುಗೋಲು* 2014ರ ಚುನಾವಣೆಯಲ್ಲಿ ಮೋದಿ ಪರ ಕೆಲಸ ಮಾಡಿದ್ದ ಸುನಿಲ್‌

ಬೆಂಗಳೂರು(ಏ.22): ಮುಂದಿನ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ರಣತಂತ್ರ ರೂಪಿಸಲು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಸುನಿಲ್‌ ಕನ್ನುಗೋಲು ಎಂಬ ರಾಜಕೀಯ ತಂತ್ರಜ್ಞನನ್ನು ರಾಜ್ಯಕ್ಕೆ ಕಳುಹಿಸಿದ್ದು, ಈ ತಂತ್ರಗಾರನ ತಂಡದ ಸಲಹೆಯ ಮೇರೆಗೆ ಕಾಂಗ್ರೆಸ್‌ ಸದ್ಯ ಭ್ರಷ್ಟಾಚಾರ ಹಾಗೂ ಕಮಿಷನ್‌ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದೆ.

ರಾಜ್ಯದ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಹೊಂದಾಣಿಕೆ ಮೂಡಿಸುವ ಮುಖ್ಯ ಗುರಿಯೊಂದಿಗೆ ರಾಜ್ಯಕ್ಕೆ ಆಗಮಿಸಿರುವ ಸುನಿಲ್‌ ಕನ್ನುಗೋಲು ಅವರು ಮುಂದಿನ ಚುನಾವಣೆಯು ಕಾಂಗ್ರೆಸ್‌ ವರ್ಸಸ್‌ ಮೋದಿ ಎಂದಾಗದೆ ಕಾಂಗ್ರೆಸ್‌ ವರ್ಸಸ್‌ ಬೊಮ್ಮಾಯಿ ಆಗುವಂತೆ ಮಾಡಬೇಕು ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.

ಮೂಲತಃ ಬಳ್ಳಾರಿಯವರಾದ ಸುನಿಲ್‌ 2014ರಲ್ಲಿ ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ತಂಡದಲ್ಲಿದ್ದರು. ಅನಂತರ ಅವರ ತಂಡದಿಂದ ಹೊರಬಂದಿದ್ದ ಸುನಿಲ್‌ ತಮ್ಮದೇ ಆದ ಸಂಸ್ಥೆ ಸ್ಥಾಪಿಸಿ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ರೂಪಿಸುವ ಕಾರ್ಯ ಆರಂಭಿಸಿದ್ದರು. ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಪರ ತಂತ್ರಗಾರಿಕೆ ನಡೆಸಿದ್ದ ಅವರು ಇತ್ತೀಚೆಗೆ ನಡೆದ ಪಂಜಾಬ್‌ ಚುನಾವಣೆಯಲ್ಲಿ ಅಕಾಲಿದಳದ ಪರ ಚುನಾವಣಾ ತಂತ್ರಗಾರಿಕೆ ಮಾಡಿದ್ದರು.

ಪ್ರಸ್ತುತ ತಮ್ಮ ತಂಡದೊಂದಿಗೆ ಬೆಂಗಳೂರಿನಲ್ಲಿ ಕಚೇರಿ ತೆರೆದಿರುವ ಸುನಿಲ್‌ ಕನ್ನುಗೋಲು ರಾಜ್ಯದ ಎಲ್ಲ ಪ್ರಮುಖ ನಾಯಕರೊಂದಿಗೆ ಒಂದು ಸುತ್ತು ಮಾತುಕತೆ ಪೂರ್ಣಗೊಳಿಸಿದ್ದಾರೆ. ಬಿಜೆಪಿಯು ಹಿಂದುತ್ವದ ವಿಚಾರವನ್ನು ಮುಂದು ಮಾಡಿದಾಗ ಈ ಬಗ್ಗೆ ಹೆಚ್ಚು ಹೇಳಿಕೆ ನೀಡದಂತೆ ರಾಜ್ಯ ನಾಯಕರಿಗೆ ಸಲಹೆ ನೀಡಿರುವ ಸುನಿಲ್‌ ಅವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಮುಖ್ಯ ವಿಷಯವಾಗಿಸಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ವರ್ಸಸ್‌ ನರೇಂದ್ರ ಮೋದಿ ಎನ್ನುವ ವಾತಾವರಣ ನಿರ್ಮಾಣವಾಗದಂತೆ ತಡೆದು, ಕಾಂಗ್ರೆಸ್‌ ವರ್ಸಸ್‌ ಬೊಮ್ಮಾಯಿ ಎಂಬಂತಹ ವಾತಾವರಣ ರೂಪಿಸಬೇಕು ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಯಾರು ಇವರು?

- ರಾಜಕೀಯ ತಂತ್ರಜ್ಞ ಸುನಿಲ್‌ ಕನ್ನುಗೋಲು ಮೂಲತಃ ಬಳ್ಳಾರಿಯವರು

- 2014ರಲ್ಲಿ ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌ ತಂಡದಲ್ಲಿದ್ದರು

- ಬಳಿಕ ಪ್ರಶಾಂತ್‌ ತಂಡದಿಂದ ಹೊರಬಂದು ಪ್ರತ್ಯೇಕ ತಂಡ ಸ್ಥಾಪಿಸಿದ್ದರು

- ಉತ್ತರಾಖಂಡ, ಹಿಮಾಚಲದಲ್ಲಿ ಬಿಜೆಪಿ ಪರ ತಂತ್ರಗಾರಿಕೆ ರೂಪಿಸಿದ್ದರು

- ಪಂಜಾಬ್‌ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಸಲಹೆ ಮಾಡಿದ್ದರು