Asianet Suvarna News Asianet Suvarna News

ರಾಹುಲ್‌ ಸಂಚಾರ ಕಾಂಗ್ರೆಸ್‌ನಲ್ಲಿ ಸೃಷ್ಟಿಸುವುದೇ ಸಂಚಲನ?

ಕೈ ಪಾಳಯಕ್ಕೆ ಜಿಲ್ಲೆಯೊಳಗೆ ಬಲ ತಂದುಕೊಡುವ ನಿರೀಕ್ಷೆ, ಎರಡು ಚುನಾವಣಾ ಗೆಲುವಿನಿಂದ ಭರವಸೆ ಸೃಷ್ಟಿ

Rahul Gandhi Bharat Jodo Yatra' Creating Movement in the Congress
Author
First Published Oct 1, 2022, 3:30 AM IST

ಮಂಡ್ಯ ಮಂಜುನಾಥ

ಮಂಡ್ಯ(ಅ.01):  ಭಾರತ್‌ ಜೋಡೋ ಯಾತ್ರೆಯೊಂದಿಗೆ ಜಿಲ್ಲೆಯೊಳಗೆ ಕಾಂಗ್ರೆಸ್‌ ಯುವರಾಜ ರಾಹುಲ್‌ಗಾಂಧಿ ನಡೆಸಲಿರುವ ಸಂಚಾರ ಹೊಸ ಸಂಚಲನ ಸೃಷ್ಟಿಸಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಜಿಲ್ಲೆಯೊಳಗೆ ರಾಹುಲ್‌ ಗಾಂಧಿ ನಡೆಸುತ್ತಿರುವ ಮೊದಲ ಪಾದಯಾತ್ರೆ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಗೆಲುವಿನ ಬಲ ತಂದುಕೊಡಲಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ವಿಧಾನಪರಿಷತ್‌ನ ಎರಡು ಚುನಾವಣೆಗಳಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್‌ಗೆ 2023ರ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ.

ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ನಾಯಕತ್ವದಲ್ಲಿ ಜಿಲ್ಲೆಯೊಳಗೆ ಕಾಂಗ್ರೆಸ್‌ ಹೊಸ ಚೈತನ್ಯಶಕ್ತಿಯೊಂದಿಗೆ ಪುಟಿದೆದ್ದಿದೆ. ಕೈ ಪಾಳಯದ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದು, 2023ರ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ.

ಭಾರತ್‌ ಜೋಡೋ ಪಾದಯಾತ್ರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ; ವಿ.ಎಸ್.ಉಗ್ರಪ್ಪ

ಬದಲಾವಣೆಯ ಗಾಳಿ: 

ಜಿಲ್ಲೆಯೊಳಗೆ ಬದಲಾವಣೆಯ ಗಾಳಿ ಬೀಸಿರುವುದನ್ನು ಕಾಂಗ್ರೆಸ್ಸಿಗರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ವಿಧಾನಪರಿಷತ್‌ ಚುನಾವಣೆಗಳಲ್ಲಿನ ಗೆಲುವು ಅದನ್ನು ಸಾಕ್ಷೀಕರಿಸಿದೆ. ಅಸ್ತಿತ್ವವೇ ಇಲ್ಲದ ಜಿಲ್ಲೆಯೊಳಗೆ ವಿಧಾನಪರಿಷತ್‌ ಸ್ಥಾನಗಳಲ್ಲಿ ಜಯ ಸಾಧಿಸುವುದರೊಂದಿಗೆ ನೆಲೆ ಕಂಡುಕೊಂಡಿರುವ ಕಾಂಗ್ರೆಸ್‌ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಇದೇ ಗೆಲುವಿನ ಅಲೆಯೊಂದಿಗೆ ಇನ್ನಷ್ಟುಭದ್ರವಾಗಿ ಜಿಲ್ಲೆಯೊಳಗೆ ನೆಲೆಯೂರುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಮೂರು ದಿನಗಳ ಕಾಲ ಸಂಚರಿಸಲಿರುವ ರಾಹುಲ್‌ ಗಾಂಧಿ ಜೋಡೋ ಪಾದಯಾತ್ರೆಯ ಮೂಲಕ ಜಿಲ್ಲೆಯೊಳಗೆ ಹೊಸ ಅಲೆ ಎಬ್ಬಿಸುವುದಕ್ಕೆ ಹಾಗೂ ಜನರ ಮನಸ್ಸನ್ನು ಕಾಂಗ್ರೆಸ್‌ನತ್ತ ಸೆಳೆಯುವುದಕ್ಕೆ ಕಾಂಗ್ರೆಸ್‌ ನಾಯಕರು ಇನ್ನಿಲ್ಲದ ರಣತಂತ್ರ ರೂಪಿಸಿದ್ದಾರೆ. ಈಗ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಸೃಷ್ಟಿಯಾಗುವಂತೆ ಮಾಡಲು ಕಸರತ್ತು ಆರಂಭಿಸಿದ್ದಾರೆ.

ಬಿಜೆಪಿಯನ್ನು ಕಡೆಗಣಿಸುವಂತಿಲ್ಲ: ಜಿಲ್ಲೆಯೊಳಗೆ ಕಾಂಗ್ರೆಸ್‌ಗೆ ಜೆಡಿಎಸ್‌ ಸಾಂಪ್ರದಾಯಿಕ ಎದುರಾಳಿಯಾಗಿತ್ತು. ಇದುವರೆಗೂ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಕೂಡ ಪ್ರವರ್ಧಮಾನಕ್ಕೆ ಬರಲಾರಂಭಿಸಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ರಾಷ್ಟ್ರೀಯ ನಾಯಕರು ಅನೇಕ ತಂತ್ರಗಳನ್ನು ರೂಪಿಸುತ್ತಿರುವುದರಿಂದ ಬಿಜೆಪಿಯನ್ನು ಕಾಂಗ್ರೆಸ್ಸಿಗರು ಸುಲಭವಾಗಿ ಕಡೆಗಣಿಸುವಂತಿಲ್ಲ. ಮುಂದಿನ ಚುನಾವಣೆಯಲ್ಲಿ ಹಲವೆಡೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿರುವುದರಿಂದ ಕಾಂಗ್ರೆಸ್‌ ಪಕ್ಷವನ್ನು ಗಟ್ಟಿಯಾಗಿ ನೆಲೆ ನಿಲ್ಲಿಸುವುದಕ್ಕೆ ತೀವ್ರ ಶ್ರಮಪಡುವುದು ಅಗತ್ಯ-ಅನಿವಾರ್ಯವೂ ಆಗಿದೆ.

ಸಮರ್ಥ ಅಭ್ಯರ್ಥಿಗಳ ಕೊರತೆ: ಕಾಂಗ್ರೆಸ್‌ಗೆ ಕೆಲವು ತಾಲೂಕುಗಳಲ್ಲಿ ಸಮರ್ಥವಾದ ಅಭ್ಯರ್ಥಿಗಳಿಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಕೆ.ಆರ್‌.ಪೇಟೆ, ಮದ್ದೂರು, ಮೇಲುಕೋಟೆ, ಮಂಡ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್‌ ಹೆಣಗಾಡುತ್ತಿದೆ. ಈ ಕ್ಷೇತ್ರಗಳಿಗೆ ಸಮರ್ಥರನ್ನು ತರುವುದಕ್ಕೆ ಕಾಂಗ್ರೆಸ್‌ ತೀವ್ರ ಶೋಧ ನಡೆಸುತ್ತಿದೆ.

ಕಾಂಗ್ರೆಸ್‌ ಅಸ್ತಿತ್ವ ಮರು ಸ್ಥಾಪಿಸುವುದೇ?: 2018ರ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಧೂಳೀಪಟವಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್‌ ಏಕಮೇವ ಚಕ್ರಾಧಿಪತ್ಯ ಸ್ಥಾಪಿಸಿತ್ತು. ಈಗ ಕಳೆದುಹೋಗಿರುವ ಅಸ್ತಿತ್ವವನ್ನು ಕ್ಷೇತ್ರಗಳಲ್ಲಿ ಮರುಸ್ಥಾಪಿಸಬೇಕಿದೆ. ಅನ್ಯ ಪಕ್ಷಗಳ ಮುಖ ಮಾಡಿರುವ ಜನರನ್ನು ಮತ್ತೆ ಕಾಂಗ್ರೆಸ್‌ನತ್ತ ತಿರುಗಿನೋಡುವಂತೆ ಮಾಡಬೇಕಿದೆ. ಆ ಹಿನ್ನೆಲ್ಲೆಯಲ್ಲಿ ರಾಹುಲ್‌ ಸಂಚಾರ ಎಷ್ಟರಮಟ್ಟಿಗೆ ಜನರ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಹೆಚ್ಚುವಂತೆ ಮಾಡಿದೆ.

ರಾಹುಲ್‌ ಪಾದಯಾತ್ರೆ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲಕ್ಕೆ ಸೀಮಿತವಾಗಲಿದೆಯಾದರೂ ಅದರ ಪ್ರಭಾವ ಜಿಲ್ಲೆಗೆ ಹರಡುವಂತೆ ಮಾಡುವುದಕ್ಕೆ ಕಾಂಗ್ರೆಸ್ಸಿಗರು ಕಾರ್ಯಯೋಜನೆ ರೂಪಿಸಿಕೊಂಡು ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಜಿಲ್ಲೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಈಗ ರಾಹುಲ್‌ ಪಾದಯಾತ್ರೆಯೊಂದಿಗೆ ಜಿಲ್ಲೆಯೊಳಗೆ ಕಾಂಗ್ರೆಸ್‌ ವರ್ಚಸ್ಸನ್ನು ಹೆಚ್ಚಿಸುವಂತೆ ಮಾಡುವ ಗುರಿಯನ್ನಿಟ್ಟುಕೊಂಡು ಕೈ ನಾಯಕರು ಮುನ್ನಡೆಯುತ್ತಿದ್ದಾರೆ.

ಚಲುವರಾಯಸ್ವಾಮಿ ನಾಯಕತ್ವಕ್ಕೆ ಹೊಸ ಶಕ್ತಿ

ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಜಿಲ್ಲೆಯೊಳಗೆ ಕಾಂಗ್ರೆಸ್‌ನ ಅತಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ವಿಧಾನಪರಿಷತ್‌ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವಿನ ಪ್ರಮುಖ ಸೂತ್ರಧಾರಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಹೊಸ ಶಕ್ತಿಯನ್ನು ತುಂಬಿಕೊಂಡು ಮುನ್ನಡೆಯುತ್ತಿದೆ.

ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಬದಲಾವಣೆ ಗಾಳಿ: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್‌ ಜೋಡೋ ಯಾತ್ರೆಗೆ ಪಕ್ಷದ ಎಲ್ಲರನ್ನು ಸಂಘಟಿಸಿಕೊಂಡು ಪಾದಯಾತ್ರೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಎಲ್ಲರೂ ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಎಲ್ಲಿಯೂ ಅಪಸ್ವರ, ಭಿನ್ನಮತಗಳು ಎದುರಾಗದಂತೆ ಮೂಲ-ಹೊಸ ಕಾಂಗ್ರೆಸ್ಸಿಗರೆಂಬ ಭಾವನೆ ಮೂಡುವಂತೆ ಮಾಡದೆ ಒಗ್ಗಟ್ಟಿನಿಂದ ಕರೆದೊಯ್ಯುತ್ತಾ ಪಕ್ಷವನ್ನು ಸಂಘಟಿಸುತ್ತಾ ಬರುತ್ತಿದ್ದಾರೆ.

ಜೆಡಿಎಸ್‌ ಶಾಸಕರ ಅಸಮರ್ಥ ಕಾರ್ಯನಿರ್ವಹಣೆ, ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡುತ್ತಾ ಅವರನ್ನು ಕಾಂಗ್ರೆಸ್‌ನತ್ತ ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿರುವ ಎನ್‌.ಚಲುವರಾಯಸ್ವಾಮಿ ಅವರು, ಚುನಾವಣೆ ವೇಳೆಗೆ ಪಕ್ಷಕ್ಕೆ ಇನ್ನಷ್ಟುಚೈತನ್ಯಶಕ್ತಿಯನ್ನು ತುಂಬುವ ಉತ್ಸಾಹದಲ್ಲಿ ಮುನ್ನಡೆಯುತ್ತಿದ್ದಾರೆ.

2018ರ ಚುನಾವಣೆ ಬಳಿಕ ಜೆಡಿಎಸ್‌ ಲೋಕಸಭೆ ಸಾರ್ವತ್ರಿಕ ಚುನಾವಣೆ, ಕೆ.ಆರ್‌.ಪೇಟೆ ಉಪ ಚುನಾವಣೆ ಹಾಗೂ 2 ವಿಧಾನಪರಿಷತ್‌ ಚುನಾವಣೆಗಳಲ್ಲಿ ಸೋಲನುಭವಿಸುವುದರೊಂದಿಗೆ ಜಿಲ್ಲೆಯೊಳಗೆ ದುರ್ಬಲವಾಗಿರುವಂತೆ ಕಂಡುಬರುತ್ತಿದೆ. ಈ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್‌ಗೆ ಸೋಲುಣಿಸುವುದರಲ್ಲಿ ಚಲುವರಾಯಸ್ವಾಮಿ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಜೆಡಿಎಸ್‌ ವರ್ಚಸ್ಸು ಕ್ಷೀಣಿಸಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಕಾಂಗ್ರೆಸ್‌ ಪ್ರಾಬಲ್ಯ ವೃದ್ಧಿಸುವುದಕ್ಕೆ ಬಳಸಿಕೊಳ್ಳಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಚಲುವರಾಯಸ್ವಾಮಿ ಪಕ್ಷ ಸಂಘಟನೆಯ ಹೋರಾಟಕ್ಕೆ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸೇರಿದಂತೆ ಹಲವರು ಸಾಥ್‌ ನೀಡಿದ್ದಾರೆ.
 

Follow Us:
Download App:
  • android
  • ios