Union Minister HD Kumaraswamy: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಇಂದು ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಗುರುವಾರದ ಸುದ್ದಿಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಬೆಂಗಳೂರು ಸೆಂಟ್ರಲ್ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದಿದ್ದಾರೆ. ಇದೀಗ ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಂದು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ.
ಇದು ಕಿಡಿಗೇಡಿ ಪಿತೂರಿ ಎಂದ ಹೆಚ್‌ಡಿಕೆ
ಚುನಾವಣೆ ಆಯೋಗದ ಮೇಲೆ ಸುಳ್ಳಿನ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ (Benefit of the doubt) ಪಡೆಯುವ ಕಿಡಿಗೇಡಿ ಪಿತೂರಿ. ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ. ಮತಗಳ್ಳತನಕ್ಕೆ ಒಂದೇ ಮದ್ದು. ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ. ಕೇಂದ್ರೀಯ ಚುನಾವಣೆ ಆಯೋಗಕ್ಕೆ ನನ್ನ ಮನವಿ ಅಥವಾ ಒತ್ತಾಯ ಇಷ್ಟೇ; ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಹೆಚ್‌ಡಿ ಕುಮಾರಸ್ವಾಮಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ
ಸಂಖ್ಯೆಗಳು ಸುಳ್ಳು ಹೇಳುವುದಿಲ್ಲ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 1,00,250 ಮತಗಳನ್ನು ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಹೇಗೆ ಕಳವು ಮಾಡಲಾಗಿದೆ ಎಂದು ನಮ್ಮ ತನಿಖೆ ಬಹಿರಂಗಪಡಿಸಿದೆ. ಈ ಭಾರಿ ಚುನಾವಣಾ ವಂಚನೆಯ ವಿವರಗಳು ಆಘಾತಕಾರಿಯಾಗಿವೆ: ಸಾವಿರಾರು ನಕಲಿ ಹೆಸರುಗಳು, ನಕಲಿ ವಿಳಾಸಗಳು ಮತ್ತು ಮತದಾರರ ನಮೂನೆಗಳ ದುರುಪಯೋಗ. ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ನಾವು ಇದಕ್ಕೆ ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿದ್ದು ಹೀಗೆ
ಇನ್ನು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕಾಂಗ್ರೆಸ್ ಮತಗಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಅಧಿಕಾರ ಇದ್ದದ್ದು ಕಾಂಗ್ರೆಸ್ ಸರ್ಕಾರ. ಚುನಾವಣಾ ಆಯೋಗ ಕೂಡ ರಾಜ್ಯ ಸರ್ಕಾರದ ಅಧಿಕಾರಿಗಳನ್ನೇ ತೆಗೆದುಕೊಂಡು ಕಾರ್ಯನಿರ್ವಹಿಸಿರುವುದು. ಆಧಾರ್ ಲಿಂಕ್ ಮೂಲಕ ಮತದಾರರ ಪಟ್ಟಿ ತಯಾರಿಸಿದರೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ SIR ಗೆ ವಿರೋಧಿಸುತ್ತದೆ ಹಾದಿ ಬೀದಿಯಲ್ಲಿ ಚುನಾವಣಾ ಅಕ್ರಮ ನಡೆದಿದೆ ಎನ್ನುತ್ತದೆ ಎಂದು ಪಿ.ಸಿ.ಮೋಹನ್ ಹೇಳಿದ್ದಾರೆ.
