Asianet Suvarna News Asianet Suvarna News

ಹಾವೇರಿ ಉಸ್ತುವಾರಿ ಮಾಡುವ ಸಿಎಂ ಭರವಸೆ ನೀಡಿದ್ದಾರೆ: ಶಂಕರ್‌

ರೈತರು ತಾವು ಹಮ್ಮಿಕೊಂಡಿರುವ ಹೋರಾಟವನ್ನು ಕೈ ಬಿಡಬೇಕು| ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುವುದು ಸರಿಯಲ್ಲ| ರೈತರ ಸಮಸ್ಯೆ ಪರಿಹರಿಸಲು ತಾವು ಹಾಗೂ ಕೃಷಿ ಸಚಿವರು ಒಟ್ಟಾಗಿ ಕೆಲಸ ಮಾಡುತ್ತೇವೆ|ತೋಟಗಾರಿಕೆ ಅವಲಂಬಿತ ರೈತರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರೈತರು ಮತ್ತು ಸರ್ಕಾರದ ಮಧ್ಯ ಉತ್ತಮ ಸಂಬಂಧವಿಟ್ಟುಕೊಂಡು ಇಲಾಖೆ ಕೆಲಸ ಮಾಡಲಿದೆ: ಸಚಿವ ಆರ್‌. ಶಂಕರ್‌| 

R Shankar Talks Over Haveri District Incharge Minister Post grg
Author
Bengaluru, First Published Jan 26, 2021, 1:07 PM IST

ಬೆಂಗಳೂರು(ಜ.26): ನನಗೆ ಹಾವೇರಿ ಜಿಲ್ಲಾ ಉಸ್ತುವಾರಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್‌. ಶಂಕರ್‌ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಗಳ ಬಳಿ ಜನರ ಮಧ್ಯ ಕೆಲಸ ಮಾಡುವ ಖಾತೆ ಕೊಡಿ ಎಂದು ಕೇಳಿದ್ದೆ. ಖಾತೆ ಬದಲಾವಣೆ ಸರಿಯಲ್ಲ ಎಂದು ಹೇಳಿದೆ. ಅದಕ್ಕೆ ಮುಖ್ಯಮಂತ್ರಿಗಳು ಸ್ವಲ್ಪ ದಿನ ಕೆಲಸ ಮಾಡು ಎಂದು ಹೇಳಿದ್ದಾರೆ. ಜೊತೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ’ ಎಂದರು.

ಯಾರದ್ದೋ ಮಾತು ಕೇಳಬೇಡಿ: 

ಇದೇ ವೇಳೆ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ರೈತರು ತಾವು ಹಮ್ಮಿಕೊಂಡಿರುವ ಹೋರಾಟವನ್ನು ಕೈ ಬಿಡಬೇಕು. ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುವುದು ಸರಿಯಲ್ಲ. ರೈತರ ಸಮಸ್ಯೆ ಪರಿಹರಿಸಲು ತಾವು ಹಾಗೂ ಕೃಷಿ ಸಚಿವರು ಒಟ್ಟಾಗಿ ಕೆಲಸ ಮಾಡುತ್ತೇವೆ. ತೋಟಗಾರಿಕೆ ಅವಲಂಬಿತ ರೈತರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರೈತರು ಮತ್ತು ಸರ್ಕಾರದ ಮಧ್ಯ ಉತ್ತಮ ಸಂಬಂಧವಿಟ್ಟುಕೊಂಡು ಇಲಾಖೆ ಕೆಲಸ ಮಾಡಲಿದೆ ಎಂದರು.

ಭುಗಿಲೆದ್ದ ಖಾತೆ ಅಸಮಾಧಾನ: ಸಿಎಂ ಕೊಟ್ಟ ಈ ಒಂದು ಭರವಸೆಯಿಂದ ಶಂಕರ್ ಕೂಲ್

ಈಗಾಗಲೇ ಬೆಳೆಗಳ ಮಾರಾಟ, ಸಂಗ್ರಹಣೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಸಭೆ ಮಾಡಿದ್ದೇನೆ. ರೇಷ್ಮೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ, ರೇಷ್ಮೆ ಬೆಳೆಗಾರರ ಸಂಕಷ್ಟ, ಸಮಸ್ಯೆಗಳನ್ನು ಅರಿತಿದ್ದೇನೆ. ‘ಕೃಷಿ ದೇವೋಭವ’ ಆಗುವಂತೆ ನಾವು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಯೋಜನೆಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ರೈತರ ಆದಾಯ ದ್ವಿಗುಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ. ಕೇಂದ್ರದ ಜೊತೆ ಸಂಪರ್ಕದಲ್ಲಿದ್ದು, ಅಲ್ಲಿಂದ ಸಹ ಹೆಚ್ಚಿನ ಅನುದಾನ ಪಡೆದು ಅಭಿವೃದ್ಧಿ ಕೆಲಸ ಮಾಡುವುದಾಗಿ ಸಚಿವರು ವಿವರಿಸಿದರು.

ಕೊರೋನಾ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ತೋಟಗಾರಿಕೆ ಕಡೆ ಮುಖ ಮಾಡುತ್ತಿರುವುದರಿಂದ ಇದಕ್ಕೆ ಹೆಚ್ಚಿನ ಉತ್ತೇಜನ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಗ್ಗಟ್ಟಾಗಿ ಇದ್ದೇವೆ:

ಹಿರಿಯ ಮುಖಂಡ ಎಚ್‌. ವಿಶ್ವನಾಥ್‌ ಅವರು ತಾವು ಏಕಾಂಕಿಯಾಗಿರುವುದಾಗಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್‌. ಶಂಕರ್‌, ತಾವು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಮುಂದೆಯೂ ಮಾತನಾಡುವುದಿಲ್ಲ. ವಿಶ್ವನಾಥ್‌ ಅವರು ತಮ್ಮ ರಾಜಕೀಯ ಗುರುಗಳು. ಅವರ ಮೇಲೆ ತಮಗೆ ಗೌರವವಿದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗುತ್ತದೆ. ಮುಂಬೈ ಟೀಂನಲ್ಲಿ ಮೊದಲು ಸೇರಿಕೊಂಡವನು ನಾನು ಮತ್ತು ರಮೇಶ್‌ ಜಾರಕಿಹೊಳಿ. ನಾವೆಲ್ಲ ಒಟ್ಟಾಗಿ ಇದ್ದೇವೆ ಎಂದರು.
 

Follow Us:
Download App:
  • android
  • ios