ಪಂಜಾಬ್(ಆ. 23) ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿರುವ ಹೊತ್ತಿನಲ್ಲೇ  ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್   ಗಾಂಧಿ ಫ್ಯಾಮಿಲಿಗೆ ಬೆಂಬಲಿಸುವ ಮಾತುಗಳನ್ನು ಆಡಿದ್ದಾರೆ.

ನಾಯಕತ್ಬ ಬದಲಾವಣೆ ಮಾತುಗಳನ್ನು  ವಿರೋಧಿಸಿದ್ದಾರೆ.  ನಾಯಕತ್ವ ಬದಲಾವಣೆ ವಿಚಾರ ಮಾತನಾಡುವ ಕಾಲ ಇದಲ್ಲ. ಬಿಜೆಪಿ ಮತ್ತು ಎನ್ ಡಿಎಗೆ ಒಂದು ಬಲಿಷ್ಠ  ಎದುರಾಳಿ ಬೇಕಾಗಿದೆ ಎಂದು ಹೇಳಿದ್ದಾರೆ.

ನಾಯಕತ್ವ ಬದಲಾವಣೆ; ಕರ್ನಾಟಕ ಕಾಂಗ್ರೆಸ್ ನಿಲುವೇನು?

ಭಾನುವಾರ ಚಂಡಿಘಡದಲ್ಲಿ ಮಾತನಾಡಿದ ಪಂಜಾಬ್ ಸಿಎಂ,  ಬಲಿಷ್ಠ ಎದುರಾಳಿ ಇಲ್ಲದ ಕಾರಣಕ್ಕೆ ಎನ್‌ಡಿಎ ತಾನು ಯಶಸ್ಸು ಸಾಧಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿದೆ.  ಚೀನಾದಂತಹ ದೇಶಗಳು ಹೊರಗಿನಿಂದ ಭಾರತಕ್ಕೆ ಕಾಟ ಕೊಡುತ್ತಿರುವುದು ಮಾತ್ರವಲ್ಲ ಆಂತರಿಕ ವಿಧ್ವಂಸಕ ಶಕ್ತಿಗಳು ಆತಂಕಕಾರಿಯಾಗಿ ಪರಿಣಮಿಸುತ್ತಿವೆ ಎಂದು ಹೇಳಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಕಾಲದಿಂದಲೂ ಗಾಂಧಿ ಕುಟುಂಬದ ಕೊಡುಗೆ ಇದೆ.  ನಾಯಕತ್ವ ಬದಲಾವಣೆ ವಿಚಾರ ಕೆಲವರ ಮಾತು ಆಗಿರಬಹುದೇ ವಿನಾ  ಪಕ್ಷದ ಅಭಿಪ್ರಾಯ ಅಲ್ಲ. ಸೋನಿಯಾ ಅವರೇ ಮುಂದೆಯೂ ಅಧಿನಾಯಕಿಯಾಗಿ ಮುಂದುವರಿಯಲಿದ್ದಾರೆ. ಅವರ ಆಣತಿಯಂತೆ ನಡೆಯಲಿದೆ. ರಾಹುಲ್ ಗಾಂಧಿ ಅವರಿಗೂ ಪಾರ್ಟಿ ಮುನ್ನಡೆಸುವ ಶಕ್ತಿ ಇದೆ ಎಂದಿದ್ದಾರೆ.

ಭಾರತದ ಯಾವ ಹಳ್ಳಿಗೆ ಹೋದರೂ ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಪಕ್ಷ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಲೇ ಬಂದಿದೆ ಇದೆಲ್ಲದರ ಶ್ರೇಯ ಗಾಂಧಿ ಕುಟುಂಬಕ್ಕೆ ಸಲ್ಲುತ್ತದೆ ಎಂದಿದ್ದಾರೆ.

ಪಕ್ಷಕ್ಕೆ ಆತಂಕ ಎದುರಾದಾಗ ಅದೆಲ್ಲದರಿಂದ ಹೊರತಂದಿದ್ದು ಗಾಂಧಿ ಕುಟುಂಬ.  ಗಾಂಧಿ ಕುಟುಂಬದವರನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ವ್ಯಕ್ತಿಗಳು ಗುರುತು ಮಾಡುತ್ತಾರೆ.  ಮೋತಿ ಲಾಲ್ ನೆಹರು ರಿಂದ ಹಿಡಿದು ರಾಜೀವ್ ಗಾಂಧಿ ವರೆಗೆ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದು ಸರಿ ಅಲ್ಲ ಎಂದು ಎಚ್ಚರಿಕೆ ನೀಡುತ್ತಲೇ ಮಾತನಾಡಿದ್ದ ಸಿಂಗ್, ನಾವು ಕಾಂಗ್ರೆಸ್ ಮಾತ್ರ ಅಲ್ಲ ಇಡೀ ದೇಶ ಮುನ್ನಡೆಸುವ ನಾಯಕತ್ವದಡಿ ಹೆಜ್ಜೆ ಹಾಕಬೇಕು ಎಂದಿದ್ದಾರೆ.