ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂಬ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಫೆ.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂಬ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಚಿವರ ಹೇಳಿಕೆ ಖಂಡಿಸಿ ಬೆಂಗಳೂರು, ಮೈಸೂರು, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರು, ಹುಬ್ಬಳ್ಳಿ, ಕೊಪ್ಪಳ, ಕಲಬುರಗಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
ಸಚಿವರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಒಬ್ಬ ಸಚಿವರಾಗಿ ಅಶ್ವತ್ಥ ನಾರಾಯಣ ಮಾತನಾಡುವ ಮಾತೆ ಇದು? ಸಚಿವರ ಹೇಳಿಕೆಯನ್ನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರಿ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ. ಪೊಲೀಸರೇ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ: ಅಶ್ವತ್ಥ್‌ಗೆ ಸಿದ್ದರಾಮಯ್ಯ ತಿರುಗೇಟು
ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಲೆ ತೆಗೆಯಲು ಸಿದ್ದರಾಮಯ್ಯ ಅವರದೇನು ಟಗರಿನ ತಲೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಚಿವರ ಹೇಳಿಕೆಗೆ ಜೆ.ಪಿ.ನಡ್ಡಾ, ಬೊಮ್ಮಾಯಿ, ಯಡಿಯೂರಪ್ಪ ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರು, ಅಶ್ವತ್ಥನಾರಾಯಣ ಅವರು ಚುನಾವಣೆ ಸೋಲಿನ ಭೀತಿಯಿಂದ ಹುಚ್ಚರಾಗಿ ಮಾತನಾಡುತ್ತಿದ್ದಾರೆ. ತಮ್ಮ ಸಂಪುಟದ ಸಚಿವರು ಇಂತಹ ಹೇಳಿಕೆ ನೀಡಿದ ತಕ್ಷಣ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳಬೇಕಾಗಿತ್ತು. ಬಹಿರಂಗವಾಗಿ ಕೊಲೆಗೆ ಕರೆ ನೀಡಿದರೂ ಕ್ರಮ ಕೈಗೊಂಡಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಸಚಿವರ ವಿರುದ್ಧ ದೂರು ದಾಖಲು: ಇದೇ ವೇಳೆ, ಸಚಿವರ ವಿರುದ್ಧ ಬೆಂಗಳೂರು, ಹುಬ್ಬಳ್ಳಿ, ಕೊಪ್ಪಳ, ಕಲಬುರಗಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ತಂಡ ಗುರುವಾರ ಬೆಂಗಳೂರಿನಲ್ಲಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಚಿವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ. ಇದೇ ವೇಳೆ, ಶಾಸಕಿ ಸೌಮ್ಯಾರೆಡ್ಡಿ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ, ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ. ಈ ಮಧ್ಯೆ, ಸಚಿವರ ಬಂಧನಕ್ಕೆ ಆಗ್ರಹಿಸಿ ಸಿದ್ದು ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪ ಗೌಡರ ಅವರು ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಇದೇ ವೇಳೆ, ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ಎಸ್ಪಿ ಹಾಗೂ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅವರು ಕಲಬುರಗಿ ಎಸ್ಪಿಗೆ ದೂರು ನೀಡಿ, ಸಚಿವರನ್ನು ಕೂಡಲು ಬಂಧಿಸಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಹಲವೆಡೆ ಪ್ರತಿಭಟನೆ: ಇದೇ ವೇಳೆ, ಸಚಿವರ ಹೇಳಿಕೆ ಖಂಡಿಸಿ ರಾಜ್ಯದ ಹಲವೆಡೆ ಗುರುವಾರ ಪ್ರತಿಭಟನೆಗಳು ನಡೆದವು. ಮೈಸೂರಿನ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಶ್ವತ್ಥ ನಾರಾಯಣ ಅವರ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಚಿವರ ರಾಜೀನಾಮೆ ಪಡೆದು, ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ಚಿತ್ರದುರ್ಗದಲ್ಲಿ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಅಶ್ವತ್ಥ ನಾರಾಯಣ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ತಮ್ಮ ಆಕ್ರೋಶ ಪ್ರದರ್ಶಿಸಿದರು. ಅವರ ಪ್ರತಿಕೃತಿ ದಹಿಸಿ, ಸಚಿವರ ವಜಾಕ್ಕೆ ಆಗ್ರಹಿಸಿದರು. ಇದೇ ವೇಳೆ, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು, ಕೊಪ್ಪಳ, ಕನಕಪುರ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಈ ಮಧ್ಯೆ, ಸಚಿವರ ಹೇಳಿಕೆ ಖಂಡಿಸಿ ಅರಸೀಕೆರೆಯಲ್ಲಿ ಶುಕ್ರವಾರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಚಿವ ಅಶ್ವತ್ಥನಾರಾಯಣ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತನಾಡುತ್ತಿದ್ದಾರೆ. ಅವರನ್ನು ತಕ್ಷಣ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ರಾಜ್ಯದಲ್ಲಿ ದೇಶದ ಕಾನೂನು ಚಾಲ್ತಿಯಲ್ಲಿದ್ದರೆ ಕೂಡಲೇ ಗೃಹ ಸಚಿವರು ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕೊಲೆ ಪ್ರಚೋದನೆ ಪ್ರಕರಣ ದಾಖಲಿಸಬೇಕು ಮತ್ತು ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು.
- ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ.
ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿನೋಡಿ. ಕಾಂಗ್ರೆಸ್‌ನವರೇನು ಬಳೆ ತೊಟ್ಟುಕೊಂಡಿಲ್ಲ.
- ಪಿ.ಎಂ.ನರೇಂದ್ರಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ.
ಪ್ರಬುದ್ಧ ರಾಜಕಾರಣಿಗಳು ಈ ರೀತಿ ಮಾತನಾಡುವುದಿಲ್ಲ. ಇದು ಸಚಿವರ ದುರಹಂಕಾರದ ಪರಮಾವಧಿ. ಹೊಡೆದು ಹಾಕಿ ಎಂದು ಯಾರಾದರೂ ಮಾತನಾಡುತ್ತಾರಾ? ಅವರ ಹೇಳಿಕೆಯನ್ನು ನಂಬಿಕೊಂಡು ಸಿದ್ದರಾಮಯ್ಯನವರಿಗೆ ಒಂದೇ ಒಂದು ಕಲ್ಲು ಹೊಡೆದರೆ ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ಸುತ್ತಾಡಲು ಆಗುತ್ತದೆಯೇ?
- ಬಾಲಕೃಷ್ಣ, ಮಾಜಿ ಶಾಸಕ
ಸಿದ್ದುರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು: ಸಚಿವ ಅಶ್ವತ್ಥ ನಾರಾಯಣ
ಅಶ್ವತ್ಥನಾರಾಯಣ ಅವರನ್ನು ಕೂಡಲೇ ಬಂಧಿಸಬೇಕು. ಒಬ್ಬ ಮಂತ್ರಿಯಾಗಿ ಈ ರೀತಿ ಮಾತಾಡೋದು ಅವರ ಬದ್ಧತೆಯನ್ನು ತೋರಿಸುತ್ತದೆ. ಅಶ್ವತ್ಥ ನಾರಾಯಣ ಅವರದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.
- ಸಲೀಂ ಅಹಮ್ಮದ್, ಕೆಪಿಸಿಸಿ ಕಾರ್ಯದರ್ಶಿ
ಕೇಶವಕೃಪಾ ಅಜೆಂಡಾ ಪಾಲಿಸಲು ಪೈಪೋಟಿಗೆ ಬಿದ್ದು ಸಚಿವ ಅಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಕರೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು.
- ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ, ಕೆಪಿಸಿಸಿ ವಕ್ತಾರ.
