ಯಾದಗಿರಿ :  ಸದ್ಯ ಪ್ರಿಯಾಂಕ ಗಾಂಧಿ ಸಕ್ರೀಯ ರಾಜಕಾರಣಕ್ಕೆ ಇಳಿದಿದ್ದಾರೆ.  ಇದರಿಂದ ರಾಜಕೀಯ ವಲಯದಲ್ಲಿ ಸಾಕಷ್ಟು ರೀತಿಯ ಚರ್ಚೆಗಳಾಗುತ್ತಿದೆ. ಒಂದೆಡೆ ಪ್ರಿಯಾಂಕ ಸೌಂದರ್ಯದ ಬಗ್ಗೆ ಚರ್ಚೆಗಳಾಗುತ್ತಿದ್ದರೆ, ಇನ್ನೊಂದೆಡೆ ಪ್ರಿಯಾಂಕ ಯುವ ಲೀಡರ್ ಆಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನುವ ಭರವಸೆ ಕಾಂಗ್ರೆಸ್ ನಾಯಕರಲ್ಲಿದೆ.

ಇದೇ ವೇಳೆ ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ಲೋಕಸಭಾ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದು, ಅವರು ರಾಜಕಾರಣಕ್ಕೆ ಹೊಸಬರಲ್ಲ. ಈ ಹಿಂದೆ ಪ್ರಿಯಾಂಕ ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. 

ಈಗ ಅವರನ್ನು ಪಕ್ಷ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಅರ್ಧ  ಉತ್ತರ ಪ್ರದೇಶದ ಉಸ್ತುವಾರಿ ನೀಡಿದೆ.  ಪ್ರಿಯಾಂಕ ಗಾಂಧಿ ಆಗಮನದಿಂದ ಯುವಜನತೆ ಪ್ರೋತ್ಸಾಹಿತರಾಗಿದ್ದಾರೆ ಎಂದು ಹೇಳಿದರು.  

ದೇಶದ ಎಲ್ಲಾ ರಾಜ್ಯದ ಯುವಜನತೆಯಲ್ಲಿ ಹೊಸ ಉತ್ಸಾಹ ಬಂದಿದೆ ಇದರಿಂದ ಪಕ್ಷಕ್ಕೆ ಲಾಭವಾಗಲಿದೆ.  ಪ್ರಿಯಾಂಕ ಗಾಂಧಿ ಪಕ್ಷಕ್ಕೆ ಬರಬೇಕು ಎಂದು ನಾವು ಬಹಳ ದಿನಗಳಿಂದ ನಾವು ನಿರೀಕ್ಷೆ ಮಾಡಿದ್ದೆವು ಎಂದು ಖರ್ಗೆ ಹೇಳಿದರು.