ಆ.15ರಂದು ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಐಸಿಸಿ ನಾಯಕರಿಗೆ ಆಹ್ವಾನ ನೀಡಿದ್ದೇವೆ: ಡಿ.ಕೆ. ಶಿವಕುಮಾರ್
ಬೆಂಗಳೂರು(ಆ.11): ರಾಜ್ಯ ಕಾಂಗ್ರೆಸ್ ವತಿಯಿಂದ ಆ.15ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯ ನಡಿಗೆ’ ಜಾಥಾದಲ್ಲಿ ಭಾಗವಹಿಸಲು ಒಪ್ಪಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸುವುದು ಅನುಮಾನ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವದ ಯಶಸ್ಸಿನ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಪಕ್ಷವು ‘ಸ್ವಾತಂತ್ರ್ಯ ನಡಿಗೆ’ಯನ್ನೂ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಸಿದ್ಧತೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ 7 ಕಿ.ಮೀ. ಉದ್ದದ ಪಾದಯಾತ್ರೆ ನಡೆಸಬೇಕು ಎಂದು ಸಿದ್ಧತೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆ.15 ರಂದು ಸ್ವಕ್ಷೇತ್ರ ವಯನಾಡು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಬೆಂಗಳೂರಿಗೆ ಕರೆಸಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮಾಡಲು ಶಿವಕುಮಾರ್ ಮನವೊಲಿಸಿದ್ದರು.
ಸೆ.7ರಿಂದ ಕಾಂಗ್ರೆಸ್ ಭಾರತ್ ಜೋಡೋ ಬೃಹತ್ ಪಾದಯಾತ್ರೆ
ಎಲ್ಲವೂ ನಿರೀಕ್ಷಿಸಿದಂತೆ ಆಗಿದ್ದರೆ ಆ.15ರಂದು ಮಧ್ಯಾಹ್ನ 2.30 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗುವ ಸ್ವಾತಂತ್ರ್ಯ ನಡಿಗೆಯಲ್ಲಿ ಪ್ರಿಯಾಂಕಾ ಗಾಂಧಿ ಹೆಜ್ಜೆ ಹಾಕಬೇಕಿತ್ತು. ಆದರೆ, ಬುಧವಾರ ಪ್ರಿಯಾಂಕಾ ಗಾಂಧಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಅವರು, ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ. ಮನೆಯಲ್ಲೇ ಪ್ರತ್ಯೇಕವಾಗಿದ್ದು ಮಾರ್ಗಸೂಚಿ ಪಾಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಬುಧವಾರದ ರಾಜಸ್ಥಾನ ಪ್ರವಾಸವೂ ರದ್ದಾಗಿದ್ದು, ಆ.15 ರಂದು ಬೆಂಗಳೂರಿಗೆ ಆಗಮಿಸಬೇಕಾಗಿದ್ದ ಪ್ರವಾಸವೂ ರದ್ದಾಗುವ ಸಾಧ್ಯತೆಯಿದೆ. ಆದರೆ, ‘ಪ್ರಿಯಾಂಕಾ ಅವರ ಆರೋಗ್ಯ ಆ. 15ರೊಳಗೆ ಸುಧಾರಿಸಿದರೆ ಅವರು ಸಮಾರಂಭಕ್ಕಾದರೂ ಆಗಮಿಸುವ ಸಂಭವವಿದೆ’ ಎಂದೂ ಮೂಲಗಳು ಹೇಳಿವೆ.
ಎಐಸಿಸಿ ನಾಯಕರಿಗೆ ಆಹ್ವಾನ ನೀಡಿದ್ದೇವೆ: ಡಿಕೆಶಿ
ಬೆಂಗಳೂರು: ಆ.15ರಂದು ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಐಸಿಸಿ ನಾಯಕರಿಗೆ ಆಹ್ವಾನ ನೀಡಿದ್ದೇವೆ. ಆದರೆ, ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸಿದ್ದು ಆಯ್ತು, ಈಗ ಡಿಕೆಶಿ ಶೋ: 1 ಲಕ್ಷ ಜನರನ್ನು ಸೇರಿಸಲು ಸಿದ್ಧತೆ..!
‘ನಮ್ಮ ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿದ್ದೇವೆ. ರಾಹುಲ್ ಗಾಂಧಿ ಬುಧವಾರ ರಾಜಸ್ಥಾನಕ್ಕೆ ಹೋಗಬೇಕಿತ್ತು. ಆದರೆ, ಅನಾರೋಗ್ಯ ಕಾರಣಕ್ಕಾಗಿ ಹೋಗಿಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ಮಂಗಳವಾರದಿಂದ ಪ್ರಿಯಾಂಕಾ ಗಾಂಧಿ ಅವರಿಗೂ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಹೀಗಾಗಿ ಯಾರು ಬರುತ್ತಾರೆಂಬುದು ಗೊತ್ತಿಲ್ಲ. ಇದು ಎಐಸಿಸಿ ನೀಡಿರುವ ಕಾರ್ಯಕ್ರಮ. ಹೀಗಾಗಿ ಅವರೇ ನಿರ್ಧಾರ ಮಾಡಿ ಬರುತ್ತಾರೆ’ ಎಂದರು.
ಎಐಸಿಸಿಯಿಂದ ಯಾರು ಬರ್ತಾರೆ ಅಂತ ಗೊತ್ತಿಲ್ಲ
ಆ.15ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಐಸಿಸಿ ನಾಯಕರಿಗೆ ಆಹ್ವಾನ ನೀಡಿದ್ದೇವೆ. ಆದರೆ, ಯಾರು ಬರುತ್ತಾರೆಂಬುದು ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಅಂತ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
