ಮೋಸ್ಟ್ ಕರಪ್ಟ್ ಗವರ್ನಮೆಂಟ್: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ನಾವು ದಾಖಲೆ ಸಹಿತ ಅಕ್ರಮ ಬಯಲು ಮಾಡಿದಾಗ ದಾಖಲೆ ಏನು ಅಂತ ಕೇಳ್ತಿದ್ರು. ಇದಕ್ಕಿಂದ ಮತ್ತೆ ಯಾವ ದಾಖಲೆ ಬೇಕು ಸ್ವಾಮಿ ನಿಮಗೆ ಅಂತ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ.
ಬೆಂಗಳೂರು(ಮಾ.03): ನಿನ್ನೆ ಬಹಳ ದೊಡ್ಡ ಮಟ್ಟದಲ್ಲಿ ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಾವು ಯಾವಾಗಲೂ ಹೇಳ್ತಿದ್ವಿ, ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿದ್ದಾರೆ ಅಂತ. ಅದಕ್ಕೆ ದಾಖಲೆ ಏನಿದೆ ಅಂತ ಕೇಳ್ತಿದ್ರು. ಸಾರ್ವಜನಿಕ ವಲಯದಲ್ಲಿ ಇದು ಭ್ರಷ್ಟ ಸರ್ಕಾರ ಎನ್ನುವ ಅಭಿಪ್ರಾಯ ಇದೆ. ಮೋಸ್ಟ್ ಕರಪ್ಟ್ ಗವರ್ನಮೆಂಟ್ ಅಂತ ಜನ ಮಾತಾಡಿಕೊಳ್ತಿದ್ದಾರೆ ಅಂತ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.
ಸಂಡೂರಿನಲ್ಲಿ ಅಮಿತ್ ಶಾ ಅವರು ನೀವು ಮೋದಿ ನೋಡಿ ಮತ ಹಾಕಿ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡ್ತೇವೆ ಅಂತ ಹೇಳಿದ್ರು. ತಮ್ಮ ಸರ್ಕಾರದ ಹಣೆಬರಹ ಏನು ಅನ್ನೋದು ಅವರಿಗೆ ಗೊತ್ತಿದೆ ಅನ್ಸುತ್ತೆ. ಈಗ ಆಗಿರುವ ಬೆಳವಣಿಗೆ ನೋಡಿದ್ರೆ ಅಮಿತ್ ಶಾ ಯಾಕೆ ಹೇಳಿದ್ರು ಅಂತ ಅರ್ಥ ಆಗ್ತಿದೆ. ನಾವು ದಾಖಲೆ ಸಹಿತ ಅಕ್ರಮ ಬಯಲು ಮಾಡಿದಾಗ ದಾಖಲೆ ಏನು ಅಂತ ಕೇಳ್ತಿದ್ರು. ಇದಕ್ಕಿಂದ ಮತ್ತೆ ಯಾವ ದಾಖಲೆ ಬೇಕು ಸ್ವಾಮಿ ನಿಮಗೆ ಅಂತ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪುತ್ರನ ಲಂಚಾವತಾರ: ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ
ಈಗ ಯಡಿಯೂರಪ್ಪನವರ ಮೇಲೆ ಮೋದಿಗೂ ಪ್ರೀತಿ ಬಂದಿದೆ. ಸಿಎಂ ಬೊಮ್ಮಾಯಿಯನ್ನೇ ಸೈಡ್‌ಗಿಟ್ಟಿದ್ದಾರೆ. ನಿಮ್ಮ ಪಕ್ಷದ ಯತ್ನಾಳ್ ರವರೇ ಹೇಳಿದ್ರು ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಅಂತಾ, ಆದ್ರೆ ಕಾಂಗ್ರೆಸ್ ನವರತ್ರ ದಾಖಲೆ ಕೇಳ್ತಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದು ಸಾವನ್ನಪ್ಪಿದರು. 40 ಪರ್ಸೆಂಟ್ ಬಗ್ಗೆ ಗುತ್ತಿಗೆದಾರರು ದೂರು ಕೊಟ್ರು. ರುಪ್ಸಾದಲ್ಲಿ 40% ಬಗ್ಗೆ ದೂರು ಕೊಟ್ರು, ಮಠಗಳಿಗೆ ಹಣ ಬಿಡುಗಡೆ ಮಾಡಲು 30% ಕೇಳ್ತಾರೆ ಅಂತಾ ಸ್ವಾಮೀಜಿಗಳು ಹೇಳಿದರು. ಗಂಗಾಕಲ್ಯಾಣ 131 ಕೋಟಿ ಹಗರಣ, ಪಿಎಸ್ಐ ಹಗರಣ, ಪಿಡಬ್ಲ್ಯುಡಿ ನೇಮಕಾತಿ ಹಗರಣ, ಕೆಪಿಟಿಸಿಎಲ್ ಹಗರಣ ತನಿಖೆಯಾಗ್ತಿದೆ. ಬಿಟ್ ಕಾಯಿನ್ ಬಗ್ಗೆ ತನಿಖೆ, ಕಾರ್ಮಿಕ ಇಲಾಖೆ ಹಗರಣ ಬಗ್ಗೆ ತನಿಖೆಗೆ ಸಿಎಂ ಇವತ್ತು ಹೇಳಿದ್ದಾರೆ. ಕಟೀಲ್, ಸಿಟಿ ರವಿ, ಪ್ರತಿ ದಿನ ಪ್ರೆಸ್ ಮೀಟ್ ಮಾಡೋ ರವಿಕುಮಾರ್ ಎಲ್ಲಿ ಹೋಗಿ ಅವಿತುಕೊಂಡಿದ್ದೀರಿ. ಬನ್ನಿ ಈಗ ಮಾತನಾಡಿ ಅಂತ ಸಿಟಿ ರವಿಗೆ ಖರ್ಗೆ ಸವಾಲ್ ಹಾಕಿದ್ದಾರೆ.
ಇನ್ನು ಕಾಂಗ್ರೆಸ್ ಕೂಡ ಟ್ವಿಟ್ಟರ್‌ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, "ನಾ ಖಾವುಂಗಾ, ನಾ ಖಾನೆದುಂಗಾ" ಎನ್ನುವ ನರೇಂದ್ರ ಮೋದಿ ಅವರೇ ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? "ಶಬಾಷ್" ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ? ಅಂತ ಲೇವಡಿ ಮಾಡಿದೆ.