ಕಳೆದ ತಿಂಗಳು ಕಾಂಗ್ರೆಸ್‌ ನಾಯಕರು ದಿಲ್ಲಿಗೆ ಹೋಗಿದ್ದಾಗ ರಾಹುಲ್ ಗಾಂಧಿಯವರು ಸುನಿಲ್ ಕನ್ನುಗೋಲು ಎಂಬ ರಣತಂತ್ರಗಾರನನ್ನು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಪರಿಚಯಿಸಿದ್ದಾರೆ. 

ದೇಶದ ಬಹುತೇಕ ರಾಜ್ಯಗಳ ಕಾಂಗ್ರೆಸ್‌ ಘಟಕಗಳು ಚುನಾವಣೆಗೆ ದುಡ್ಡು ಕೊಡಿ ಎಂದು ದಿಲ್ಲಿ ನಾಯಕರ ಎದುರು ಅಂಗಲಾಚುತ್ತಿದ್ದರೆ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತ್ರ 2023ರ ಚುನಾವಣೆಗೆ ನಮಗೆ ದಿಲ್ಲಿಯಿಂದ ಒಂದು ನಯಾ ಪೈಸೆ ಬೇಡ, ನಾವು ಇಲ್ಲಿಯೇ ಹೊಂದಿಸಿಕೊಳ್ಳುತ್ತೇವೆ. ಆದರೆ ಟಿಕೆಟ್‌ ಹಂಚಿಕೆ, ರಣತಂತ್ರಗಳನ್ನು ಹೆಣೆಯುವುದರಲ್ಲಿ ಫ್ರೀ ಹ್ಯಾಂಡ್‌ ಕೊಡಿ ಸಾಕು ಎಂದು ಬೆಂಗಳೂರಿಗೆ ಬಂದಿದ್ದ ರಾಹುಲ್‌ ಗಾಂಧಿಗೆ ಕೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಡಿ.ಕೆ.ಶಿವಕುಮಾರ್‌ 224ರ ಪೈಕಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 4 ತಿಂಗಳು ಮೊದಲೇ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವಂತೆ ರಾಹುಲ್‌ರನ್ನು ಕೇಳಿದ್ದಾರೆ. ಆದರೆ ರಾಹುಲ್‌ ಮತ್ತು ಸೋನಿಯಾಗಿರುವ ಚಿಂತೆ ಸಿದ್ದರಾಮಯ್ಯ ಅವರದು. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡದೇ ಇದ್ದರೆ, 2008ರಿಂದ ಕಾಂಗ್ರೆಸ್‌ನ ಹಿಂದೆ ಗಟ್ಟಿಯಾಗಿ ನಿಂತಿರುವ ಕುರುಬರು ಮತ್ತು ಹಿಂದುಳಿದ ವರ್ಗದ ಮತಗಳು ಚೆಲ್ಲಾಪಿಲ್ಲಿ ಆಗಬಹುದು. ಜೊತೆಗೆ ಸಿದ್ದರಾಮಯ್ಯ ನೇತೃತ್ವ ಇಲ್ಲದೇ ಇದ್ದರೆ ಮುಸ್ಲಿಂ ಮತಗಳು ಕೂಡ ಓವೈಸಿ, ಎಸ್‌ಡಿಪಿ ಬಳಿ ಒಂದಿಷ್ಟು ವಾಲಬಹುದು.

ಹಾಗೆಂದು ಸಿದ್ದರಾಮಯ್ಯರನ್ನು ಚುನಾವಣೆಗೆ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದರೆ ಟಿಕೆಟ್‌ ಹಂಚಿಕೆ ವೇಳೆಯೇ ಸಿದ್ದು ಮತ್ತು ಡಿಕೆಶಿ ಬೆಂಬಲಿಗರ ಕಾದಾಟ ಹೆಚ್ಚಿ ಚುನಾವಣೆಯಲ್ಲಿ ಒಬ್ಬರ ಬೆಂಬಲಿಗರನ್ನು ಇನ್ನೊಬ್ಬರು ಸೋಲಿಸುವ ಹಂತದವರೆಗೂ ಹೋಗಬಹುದು. ರಾಜ್ಯದ ಅನೇಕ ಹಿರಿಯ ಕಾಂಗ್ರೆಸ್‌ ನಾಯಕರು ಹೇಳುವ ಪ್ರಕಾರ, ಈಗಲೇ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದು ಕುಳಿತುಕೊಂಡು ಅಧಿಕಾರ ಹಂಚಿಕೊಳ್ಳುವ ಫಾರ್ಮುಲಾ ಒಪ್ಪಂದಕ್ಕೆ ಬರಬೇಕು. ಅದರಲ್ಲಿ ಇಬ್ಬರು ನಾಯಕರು ಮತ್ತು ಕಾಂಗ್ರೆಸ್ಸಿಗೂ ಲಾಭ ಉಂಟು. ಆದರೆ ಅದು ಹೇಳಿದಷ್ಟುಸುಲಭ ಅಲ್ಲ ಬಿಡಿ.

ಕಾಂಗ್ರೆಸ್ಸಿನ ಪ್ಲಸ್ಸು-ಮೈನಸ್ಸು ಏನು?

ಕರ್ನಾಟಕದಲ್ಲಿ ಬಿಜೆಪಿಯಷ್ಟೇ ಗಟ್ಟಿಸಂಘಟನೆ ಕಾಂಗ್ರೆಸ್‌ ಬಳಿಯೂ ಇದೆ. ಹಾಗೆ ನೋಡಿದರೆ ಬಿಜೆಪಿ ರಾಜ್ಯದ 185ರಿಂದ 190 ಕ್ಷೇತ್ರಗಳಲ್ಲಿ ಮಾತ್ರ 30 ಪ್ರತಿಶತಕ್ಕೂ ಮೇಲ್ಪಟ್ಟು ವೋಟು ಪಡೆದರೆ, ಕಾಂಗ್ರೆಸ್‌ 224 ಕ್ಷೇತ್ರಗಳಲ್ಲೂ 30 ಪ್ರತಿಶತಕ್ಕೂ ಮೇಲ್ಪಟ್ಟು ವೋಟು ಪಡೆಯುತ್ತದೆ. ಕರ್ನಾಟಕದಲ್ಲಿ ಬಿಜೆಪಿಗೆ ಹೇಗೆ ಲಿಂಗಾಯತರು ಮತ್ತು ದಲಿತ ಎಡಗೈ ಗಟ್ಟಿವೋಟ್‌ಬ್ಯಾಂಕ್‌ ಇದೆಯೋ, ಕಾಂಗ್ರೆಸ್‌ಗೂ ದಲಿತ ಬಲಗೈ, ಮುಸ್ಲಿಮರು ಮತ್ತು ಕುರುಬರ ಗಟ್ಟಿಮತಬ್ಯಾಂಕ್‌ ಇದೆ. ಬಿಜೆಪಿಗೆ ಹೇಗೆ ಯಡಿಯೂರಪ್ಪ ಹೆಸರಿನಲ್ಲಿ ವೋಟು ಬೀಳುತ್ತವೆಯೋ, ಅದೇ ರೀತಿ ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯ, ಖರ್ಗೆ, ಶಿವಕುಮಾರ ಫೋಟೋ ನೋಡಿ ವೋಟು ಹಾಕುವವರಿದ್ದಾರೆ.

ಆದರೆ ಕಾಂಗ್ರೆಸ್‌ನ ದೊಡ್ಡ ಸಮಸ್ಯೆ ಎಂದರೆ ಹಿಂದುತ್ವ, ರಾಷ್ಟ್ರೀಯತೆ ಮತ್ತು ಮೋದಿ. ಹಿಂದುತ್ವ ಮತ್ತು ರಾಷ್ಟ್ರೀಯತೆಯ ಪ್ರಶ್ನೆಗಳು ಬಂದರೆ ಕಾಂಗ್ರೆಸ್ಸಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿದೆ. ಒಂದು ಕಡೆ ಮುಸ್ಲಿಮರ ಮೇಲೆ ಆಸೆ, ಇನ್ನೊಂದು ಕಡೆ ಹಿಂದೂಗಳ ವೋಟು ಕಳೆದುಕೊಳ್ಳುವ ಭೀತಿಯಲ್ಲಿ ಸಿಕ್ಕು ಕಾಂಗ್ರೆಸ್‌ ತೊಳಲಾಡುತ್ತದೆ.

ಇದರ ಜೊತೆಗೆ ಯಾವುದೇ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿಗಿರುವ ಗೆಲುವು ಸೋಲಿನ ಅಂತರ ಎಂದರೆ ಮೋದಿ. ಕರ್ನಾಟಕದಲ್ಲಿ ಮೋದಿ ತಮ್ಮ ಹೆಸರಿನಿಂದಲೇ 7ರಿಂದ 8 ಪ್ರತಿಶತ ವೋಟು ತಿರುಗಿಸಬಲ್ಲರು. ಬಿಜೆಪಿಯ ಸ್ಥಳೀಯ ನಾಯಕತ್ವದ ವಿರುದ್ಧದ ಆಡಳಿತ ವಿರೋಧಿ ಅಲೆಯ ಪ್ರಕೋಪವನ್ನು ತಗ್ಗಿಸುವ ಶಕ್ತಿ ಮೋದಿಗಿದೆ. ಆದರೆ ರಾಹುಲ್ ಗಾಂಧಿಗೆ ಆ ಶಕ್ತಿಯಿಲ್ಲ. 2023ಕ್ಕೆ ಮರಳಿ ವಿಧಾನಸೌಧಕ್ಕೆ ಬರಬೇಕು ಅಂದರೆ ಕಾಂಗ್ರೆಸ್‌ ಈ ಸಮಸ್ಯೆಗಳಿಗೆ ಉತ್ತರ ಹುಡುಕಬೇಕು.

ಹಿಂದುತ್ವ v/s ಭ್ರಷ್ಟಾಚಾರ

ಚುನಾವಣೆಗೆ ಒಂದು ವರ್ಷ ಇರುವಾಗ ಹಿಂದೂ-ಮುಸ್ಲಿಂ ವಿಷಯಗಳು ಹೆಚ್ಚು ಚರ್ಚೆಗೆ ಬರುವುದರಿಂದ ಎರಡು ಪರಿಣಾಮಗಳಿವೆ. ಒಂದು- ಹಲಾಲ…, ಹಿಜಾಬ್‌ನಿಂದ ಹೊಸ ಮತದಾರರು ಬರುವುದಿಲ್ಲ. ಆದರೂ ಬಿಜೆಪಿ ಸ್ಥಳೀಯ ಶಾಸಕ, ಮಂತ್ರಿ ಹಾಗೂ ಸರ್ಕಾರದ ವಿರುದ್ಧ ಮುನಿಸಿಕೊಂಡ, ಮೊದಲು ಬಿಜೆಪಿ ಜೊತೆಯೇ ಇದ್ದ ಸಣ್ಣ ಸಮುದಾಯಗಳ ಕಟ್ಟಾಮತದಾರರು ಹಿಂದುತ್ವದ ಕಾರಣದಿಂದ ಬಿಜೆಪಿ ಜೊತೆಯೇ ಉಳಿದುಕೊಳ್ಳಬಹುದು. ಎರಡು- ಈ ವಿಷಯಗಳು ಜಾಸ್ತಿ ಪ್ರಸ್ತಾಪ ಆದಂತೆ ಕಾಂಗ್ರೆಸ್‌ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಂದು ಕಟ್ಟಾಮುಸ್ಲಿಂ ಮತದಾರರು ಕಾಂಗ್ರೆಸ್‌ನಿಂದ ದೂರ ಹೋಗಿ ಓವೈಸಿ ಮತ್ತು ಎಸ್‌ಡಿಪಿಗಳತ್ತ ನೋಡಬಹುದು.

ಎರಡೂ ಪರಿಣಾಮಗಳಿಂದ ಲಾಭ ಬಿಜೆಪಿಗೆ, ನಷ್ಟಕಾಂಗ್ರೆಸ್ಸಿಗೆ. ಹೀಗಾಗಿಯೇ ದಿಲ್ಲಿಯಿಂದ ಬಂದು ಕುಳಿತಿರುವ ರಣತಂತ್ರಗಾರರು ಹೇಳಿಕೊಟ್ಟಂತೆ ಡಿ.ಕೆ.ಶಿವಕುಮಾರ್‌ ದಿನವೂ ಭ್ರಷ್ಟಾಚಾರ, ಕಮಿಷನ್ನು, ಪರ್ಸೆಂಟ್‌ ವಿಷಯ ಎತ್ತುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಸಿಗೆ ಎರಡು ಲಾಭಗಳಿವೆ. ಒಂದು- ಹಿಂದುತ್ವದ ವಿಷಯದಿಂದ ಫೋಕಸ್‌ ದೂರ ಹೋಗುತ್ತದೆ. ಎರಡು- ಮೋದಿ ರಂಗಕ್ಕೆ ಇಳಿಯುವ ಮೊದಲೇ ಕರ್ನಾಟಕದ ಬಿಜೆಪಿ ಸರ್ಕಾರವನ್ನು ಭ್ರಷ್ಟಎಂದು ಬಿಂಬಿಸಿದರೆ ಬಿಜೆಪಿಯ ಕಟ್ಟಾಮತದಾರರು ತಟಸ್ಥರಾಗುತ್ತಾರೆ. ಚುನಾವಣೆ ಹತ್ತಿರ ಬಂದಾಗ ನಡೆಯುವ ಘಟನೆ ಯಾವುದೂ ಕಾಕತಾಳೀಯ ಅಲ್ಲ, ಇಲ್ಲಿ ಎಲ್ಲವೂ ರಣತಂತ್ರದ ಭಾಗ.

ಡಿಕೆಶಿ, ಸಿದ್ದು ಜುಗಲ್‌ಬಂದಿ

ಒಂದು ಕುರ್ಚಿಗೆ ಇಬ್ಬರು ನಾಯಕರು ಇದ್ದಾಗ ಪೈಪೋಟಿ ಸಾಮಾನ್ಯ. ರಾಜ್ಯದ ರಾಜಕಾರಣದಲ್ಲಿ ಇದೇನೂ ಹೊಸ ಸಂಗತಿ ಅಲ್ಲ. ಆದರೆ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ, ಯಡಿಯೂರಪ್ಪ ಮತ್ತು ಅನಂತಕುಮಾರ್‌, ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಇವೆಲ್ಲವೂ ಅಧಿಕಾರ ಸಿಕ್ಕ ನಂತರ ವಿಕೋಪಕ್ಕೆ ಹೋದ ಜಗಳಗಳು. ಆದರೆ ಈಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಎಷ್ಟೇ ಜೊತೆಗಿದ್ದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಷ್ಟುಉದಾರಿಗಳಲ್ಲ. ಸಿದ್ದು ಬಳಿ ವೋಟ್‌ ಬ್ಯಾಂಕ್‌ ಮತ್ತು ಜನಪ್ರಿಯತೆ ಇದ್ದರೆ, ಡಿ.ಕೆ.ಶಿವಕುಮಾರ್‌ ಬಳಿ ಸಂಘಟನಾ ಶಕ್ತಿ ಮತ್ತು ಸೌಕರ್ಯದ ಬಲ ಇದೆ.

ಪ್ರವಾಸಕ್ಕೆ ಹೋಗಿ ಭಾಷಣ ಮಾಡುವುದು ದೊಡ್ಡ ವಿಷಯ ಅಲ್ಲ. ಸಮಸ್ಯೆ ಬರುವುದು ಟಿಕೆಟ್‌ ಹಂಚಿಕೆ ಮತ್ತು ಚುನಾವಣಾ ನಿರ್ವಹಣೆಯಲ್ಲಿ. ಇವತ್ತಿನ ಸ್ಥಿತಿಯಲ್ಲಿ ಸಿದ್ದು ಮತ್ತು ಡಿಕೆಶಿ ಇಬ್ಬರಿಗೂ ದಿಲ್ಲಿ ನಾಯಕರು ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವ ಸ್ಥಿತಿಯಲ್ಲಿ ಇಲ್ಲ. ಬದಲಾಗಿ ಇಬ್ಬರೂ ಎಷ್ಟುಪ್ರಬುದ್ಧತೆಯಿಂದ ಕುಳಿತು, ಕೂಡಿ ಚುನಾವಣೆ ಎದುರಿಸುವ ಒಪ್ಪಂದಕ್ಕೆ ಬರುತ್ತಾರೋ ಅಷ್ಟುಹೆಚ್ಚು ಅವಕಾಶಗಳು ಕಾಂಗ್ರೆಸ್ಸಿಗೆ ಉಂಟು.

ಕಾಂಗ್ರೆಸ್‌ನ ರಣತಂತ್ರಗಾರರು

ಕಳೆದ ತಿಂಗಳು ಕಾಂಗ್ರೆಸ್‌ ನಾಯಕರು ದಿಲ್ಲಿಗೆ ಹೋಗಿದ್ದಾಗ ರಾಹುಲ್ ಗಾಂಧಿಯವರು ಸುನಿಲ್ ಕನ್ನುಗೋಲು ಎಂಬ ರಣತಂತ್ರಗಾರನನ್ನು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಪರಿಚಯಿಸಿದ್ದಾರೆ. ಒಂದು ಕಾಲದಲ್ಲಿ ಪ್ರಶಾಂತ್‌ ಕಿಶೋರ್‌ ಜೊತೆಗೆ ಮೋದಿ ಸಾಹೇಬರಿಗೆ ಕೆಲಸ ಮಾಡಿದ್ದ ಸುನಿಲ್ ಮುಂದಿನ ಒಂದು ವರ್ಷ ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ಸಿಗಾಗಿ ರಣತಂತ್ರ ಹೆಣೆಯಲಿದ್ದಾರೆ. ಅಷ್ಟೇ ಅಲ್ಲ, ಹೈದರಾಬಾದಿನ ಒಂದು ಖಾಸಗಿ ಕಂಪನಿಯನ್ನು ಮಾಧ್ಯಮಗಳಲ್ಲಿ ಬಿಜೆಪಿಗೆ ಪ್ರತಿಯಾಗಿ ಟಕ್ಕರ್‌ ಕೊಡುವುದು ಹೇಗೆ ಎಂದು ಸಲಹೆ ನೀಡಲು ಡಿ.ಕೆ.ಶಿವಕುಮಾರ್‌ ನೇಮಿಸಿಕೊಂಡಿದ್ದಾರೆ.

ಯಾರು ಏನು ಮಾತನಾಡಬೇಕು, ಮಾತನಾಡಬಾರದು ಎಂದು ಕೂಡ ರಣತಂತ್ರಗಾರರೇ ಸೂಚನೆ ಕೊಡಲಿದ್ದಾರೆ. ಸುನಿಲ್ ಕನ್ನುಗೋಲು, ಡಿ.ಕೆ.ಶಿವಕುಮಾರ್‌ ಅವರಿಗೆ ನೀಡಿರುವ ಸಲಹೆ ಪ್ರಕಾರ ರಾಜ್ಯದ ಚುನಾವಣೆ ಮೋದಿ ವರ್ಸಸ್‌ ಕಾಂಗ್ರೆಸ್‌ ಎನ್ನುವಂತೆ ನಡೆಯಬಾರದು. ಬದಲಾಗಿ ಬೊಮ್ಮಾಯಿ ಅಥವಾ ರಾಜ್ಯ ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಅನ್ನುವಂತೆ ನಡೆಯಬೇಕು. ಅಮೆರಿಕದಂತೆ ಚುನಾವಣಾ ರಣತಂತ್ರಗಾರರು ಕಳೆದ 8 ವರ್ಷಗಳಿಂದ ರಾಜ್ಯದ ಚುನಾವಣೆಗಳಿಗೂ ಕಾಲಿಡುತ್ತಿದ್ದಾರೆ.

ಕುದಿಯುತ್ತಿರುವ ಜಗದೀಶ ಶೆಟ್ಟರ್‌

ಕಳೆದ ವಾರ ಅಮಿತ್‌ ಶಾ ಅವರನ್ನು ಭೇಟಿಯಾದ ಜಗದೀಶ್‌ ಶೆಟ್ಟರ್‌ ‘ನೀವು ಕೇಡರ್‌ನಿಂದ ಬಂದ ಪ್ರಹ್ಲಾದ್‌ ಜೋಶಿ, ಸಿ.ಟಿ.ರವಿ, ಈಶ್ವರಪ್ಪ ಯಾರನ್ನಾದರೂ ಮುಖ್ಯಮಂತ್ರಿ ಮಾಡಿ. ಆದರೆ ಹೊರಗಿನಿಂದ ಬಂದ ಬೊಮ್ಮಾಯಿ ಅವರನ್ನು ಇಟ್ಟುಕೊಂಡು 2023ಕ್ಕೆ ಚುನಾವಣೆಯಲ್ಲಿ ಯಾವುದೇ ಲಾಭ ಆಗುವುದಿಲ್ಲ’ ಎಂದು ಸ್ಪಷ್ಟಶಬ್ದಗಳಲ್ಲಿ ಹೇಳಿ ಬಂದರಂತೆ. ಆರ್‌ಎಸ್‌ಎಸ್‌ ನಾಯಕರ ಬಳಿ ಕೂಡ ಓಡಾಡಿ ಬಂದಿರುವ ಶೆಟ್ಟರ್‌, ‘ನೀವು ಬೆಂಬಲ ಕೊಡುವುದಾದರೆ ಬೊಮ್ಮಾಯಿ ವಿರುದ್ಧ ಬಹಿರಂಗವಾಗಿ ಮಾತನಾಡಲು ತಯಾರಿದ್ದೇನೆ’ ಎಂದು ಕೂಡ ಹೇಳಿದ್ದಾರಂತೆ. ಅಂದ ಹಾಗೆ 1994ರಲ್ಲಿ ಹುಬ್ಬಳ್ಳಿಯಲ್ಲಿ ಆಗ ಜನತಾದಳದಲ್ಲಿದ್ದ ಬಸವರಾಜ್‌ ಬೊಮ್ಮಾಯಿ ಬಿಜೆಪಿಯ ಜಗದೀಶ ಶೆಟ್ಟರ್‌ ಎದುರು ಸೋಲು ಅನುಭವಿಸಿದ್ದರು. ಈಗ ಅದೇ ಬಿಜೆಪಿಯಿಂದ ಬೊಮ್ಮಾಯಿ ಮುಖ್ಯಮಂತ್ರಿ, ಶೆಟ್ಟರ್‌ ಏನೂ ಅಲ್ಲ. ಈ ಅವಮಾನ ಶೆಟ್ಟರ್‌ಗೆ ಸುಮ್ಮನೆ ಕೂರಲು ಬಿಡುತ್ತಿಲ್ಲ.

ನರಸಿಂಹ ರಾವ್‌ ಮತ್ತು ಬೊಮ್ಮಾಯಿ

ಚುನಾವಣೆ ನಡೆದು 7 ತಿಂಗಳಾದರೂ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳ ಮೇಯರ್‌, ಉಪ ಮೇಯರ್‌ ಆಯ್ಕೆ ಆಗುತ್ತಿಲ್ಲ. ಇಲ್ಲಿಯವರೆಗೂ ಸ್ಥಳೀಯ ಶಾಸಕರು, ಸಚಿವರು, ಸಂಸದರು ಮುಖ್ಯಮಂತ್ರಿಗೆ ಹಾಗೂ ದಿಲ್ಲಿಯಲ್ಲಿರುವ ರಾಜ್ಯ ಉಸ್ತುವಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡರೂ ಪಾಲಿಕೆ ಸದಸ್ಯರಿಗೆ ಅಧಿಕಾರ ಸಿಗುತ್ತಿಲ್ಲ. 7 ತಿಂಗಳಾದರೂ ಕಡತಕ್ಕೆ ಸಹಿ ಹಾಕಲು ಸಿಎಂ ತಯಾರಿಲ್ಲ. ಬಿಜೆಪಿ ನಾಯಕರು ಹೇಳುವ ಪ್ರಕಾರ, ಬೊಮ್ಮಾಯಿ ಸಾಹೇಬರು ಒಂಥರಾ ಪಿ.ವಿ.ನರಸಿಂಹ ರಾಯರು ಇದ್ದ ಹಾಗೆ. ಎಷ್ಟೇ ಗಂಟೆ ಜಾಗಟೆ ಹೊಡೆದರೂ ಬೊಮ್ಮಾಯಿ ಕಚೇರಿಯಲ್ಲಿ ಸೂಕ್ತ ಸಮಯದಲ್ಲೇ ಕಡತ ವಿಲೇವಾರಿ ಆಗೋದಂತೆ!

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ