ಬಿಜೆಪಿ ಸರ್ಕಾರದ ರಸ್ತೆ ಡಾಂಬರ್‌ಗಿಂತ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್ ಎಂದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬಂದಾಗ, ಅವರು ಸಂಚರಿಸುವ ರಸ್ತೆಗಳು ಲಕಲಕ ಅಂತ ಹೊಳೆಯುತ್ತಿದ್ವು. ಆದ್ರೆ ಮೋದಿ ವಾಪಸ್ ಹೋದ್ಮೇಲೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿವೆ.
ಬೆಂಗಳೂರು/ಮಂಗಳೂರು, (ಸೆಪ್ಟೆಂಬರ್.13): ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರು ಭೇಟಿ ನೀಡಿದ್ದ ಸಂದರ್ಭದಲ್ಲಿ ರಿಪೇರಿ ಮಾಡಲಾಗಿದ್ದ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಕಿತ್ತುಹೋದ ರಸ್ತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವ್ಯಂಗ್ಯಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ಕಚೇರಿಯೇ ಒಂದೇ ದಿನದಲ್ಲಿ ಕಿತ್ತೋದ ರಸ್ತೆ ಬಗ್ಗೆ ವರದಿ ಕೇಳಿತ್ತು.
ಇದೀಗ ಮೊನ್ನೇ ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅವರು ಮಂಗಳೂರಿಗೆ ಭೇಟಿ ನೀಡಿದ ವೇಳೆ ಹಾಕಲಾಗಿದ್ದ ಡಾಂಬಾರು ರಸ್ತೆ ಕಥೆ ಅದೇ ಆಗಿದೆ. ಮೋದಿ ಬರುತ್ತಾರೆಂದು ರಸ್ತೆಗೆ ಡಾಂಬರು ಹಾಕಿ ಕಲರ್ ಫುಲ್ ಮಾಡಿದ್ರು. ಆದ್ರೆ, ತಿಂಗಳು ಅಗಿಲ್ಲ ಆಗಲೇ ಡಾಂಬಾರು ಕಿತ್ತುಕೊಂಡು ಹೋಗಿದೆ.
ಮೋದಿಗಾಗಿ ಬಿಬಿಎಂಪಿ 23 ಕೋಟಿ ಖರ್ಚು, ಇದಕ್ಕಿಂತ ಮೈಸೂರಿನಲ್ಲಿ 2 ಕೋಟಿ ಹೆಚ್ಚು
ಟೀಕಿಸಿದ ಕಾಂಗ್ರೆಸ್
ಬಿಜೆಪಿ ಸರ್ಕಾರದ ರಸ್ತೆ ಡಾಂಬರ್‌ಗಿಂತ ರೊಟ್ಟಿಗೆ ಕಲಸುವ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್ ಎಂದು ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ. ಮಂಗಳೂರಿನ ಕೂಳೂರು ಸೇತುವೆಯ ಚಿತ್ರ ಹಾಕಿರುವ ಕಾಂಗ್ರೆಸ್, ರಾಜ್ಯ ಸರ್ಕಾರವನ್ನು ಟೀಕಿಸಿದೆ.
ಪ್ರಧಾನಿ ಮೋದಿ ಅವರ ಮಂಗಳೂರು ಭೇಟಿ (ಸೆ.02) ವೇಳೆ ಮಂಗಳೂರಿನ ಕೂಳೂರು ಸೇತುವೆಯಲ್ಲಿ ಹೊಸದಾಗಿ ಡಾಮರೀಕರಣ ಮಾಡಲಾಗಿತ್ತು. ಆದರೆ ಇದಾಗಿ ಹತ್ತು ದಿನದಲ್ಲೇ ಸೇತುವೆಯಲ್ಲಿ ಗುಂಡಿ ಬಿದ್ದಿದೆ. ಈ ಚಿತ್ರವನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್, 'ಇದು 40% ಕಮಿಷನ್ ಲೂಟಿಗೆ ಸಾಕ್ಷಿ' ಎಂದಿದೆ.
ನಿಮ್ಮ ಸರ್ಕಾರದ 40% ಕಮಿಷನ್ ಲೂಟಿಗೆ ಇನ್ಯಾವ ಸಾಕ್ಷಿ ಬೇಕು ಬಸವರಾಜ ಬೊಮ್ಮಾಯಿ ಅವರೇ, ಇದೇ ರಸ್ತೆಯ ಮೇಲೆ ಬಂದು “ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತದೆ” ಎಂದು ಭಾಷಣ ಮಾಡಿದ್ದ ನರೇಂದ್ರ ಮೋದಿ ಅವರೇ, ಈ ಲೂಟಿ ತನಿಖೆಗೆ ಅರ್ಹವಲ್ಲವೇ ಎಂದು ಪ್ರಶ್ನಿಸಿದೆ. ಅಲ್ಲದೆ ಬಿಜೆಪಿ ಸರ್ಕಾರದ ರಸ್ತೆ ಡಾಂಬರ್‌ಗಿಂತ ಅಡುಗೆ ಮನೆಯಲ್ಲಿ ರೊಟ್ಟಿಗೆ ಕಲಸುವ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್ ಎಂದು ವ್ಯಂಗ್ಯವಾಡಿದೆ.