ಮಾಜಿ ಶಾಸಕ ಹಾಲಹರವಿ ಬಿಜೆಪಿ ಬಿಟ್ಟು ಜೆಡಿಎಸ್‌ಗೆ, ಘೋಟ್ನೇಕರ್ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ, ಸಿ.ಟಿ.ರವಿ ಆಪ್ತ ತಮ್ಮಣ್ಣ ಕಾಂಗ್ರೆಸ್‌ಗೆ, ಕಿರಣ್, ಸಂದೇಶ್ ನಾಗರಾಜ್, ನಿಂಗಪ್ಪ ಇಂದು ‘ಕೈ’ವಶ.
ಬೆಂಗಳೂರು(ಫೆ.20): ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಜೋರಾಗಿಯೇ ನಡೆದಿದೆ. ಭಾನುವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರ ಸೇರ್ಪಡೆಯಾಗಿದ್ದು, ಅವರು ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ವಿಧಾನಸಭೆಯ ಮಾಜಿ ಸದಸ್ಯ ವೀರಭದ್ರಪ್ಪ ಹಾಲಹರವಿ, ವಿಧಾನಪರಿಷತ್ತಿನ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಹಾಗೂ ಕೋಲಾರದ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‌ಗೌಡ ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಭಾನುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಅವರ ಆಪ್ತ ಎಚ್.ಡಿ.ತಮ್ಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಅಲ್ಲದೆ, ಬಿಜೆಪಿಯ ಮಾಜಿ ಶಾಸಕರೂ ಆಗಿರುವ ಆರ್‌ಎಸ್‌ಎಸ್‌ನ ಕಟ್ಟಾಳು ಕೆ.ಎಸ್.ಕಿರಣ್ ಕುಮಾರ್ ಅವರು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸೋಮವಾರ ಕಾಂಗ್ರೆಸ್ ಸೇರಲಿದ್ದಾರೆ. ಅವರು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎನ್ನಲಾಗಿದೆ.
ಇಂದು, ನಾಳೆ ಕರ್ನಾಟಕದಲ್ಲಿ ಜೆ.ಪಿ.ನಡ್ಡಾ ಸಮಾವೇಶ
ಬಿಜೆಪಿಯಲ್ಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಮೈಸೂರಿನ ಸಂದೇಶ್ ನಾಗರಾಜ್ ಹಾಗೂ ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಎಚ್.ನಿಂಗಪ್ಪ ಕೂಡ ಸೋಮವಾರ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ವೀರಭದ್ರಪ್ಪ ಹಾಲಹರವಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ, ಘೋಟ್ನೇಕರ್ ಮತ್ತು ವಡಗೂರು ಹರೀಶ್‌ಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು. ಮುಂಬರುವ ಚುನಾವಣೆಯಲ್ಲಿ ಹಾಲಹರವಿ ಅವರು ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಘೋಟ್ನೇಕರ್ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸುವುದು ನಿಚ್ಚಳವಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಚ್.ಕೆ.ತಮ್ಮಣ್ಣ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ.
ಜೆಡಿಎಸ್‌ಗೆ ಸೇರ್ಪಡೆ:
ಬೆಂಗಳೂರಿನಲ್ಲಿರುವ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವೀರಭದ್ರಪ್ಪ ಹಾಲಹರವಿ, ಎಸ್.ಎಲ್. ಘೋಟ್ನೇಕರ್ ಹಾಗೂ ವಡಗೂರು ಹರೀಶ್‌ಗೌಡ ಅವರು ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು. ಅವರನ್ನು ಪಕ್ಷದ ನಾಯಕರು ಪಕ್ಷದ ಧ್ವಜ ನೀಡಿ, ಶಾಲು ಹೊದಿಸಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಹಲವಾರು ಭಾಗಗಳಿಂದ ಪ್ರಮುಖರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಕಾರವಾರ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ. 2023ಕ್ಕೆ ಘೋಟ್ನೇಕರ್ ಮತ್ತು ಹಾಲಹರವಿ ಆಯ್ಕೆ ಆಗಿ ವಿಧಾನಸಭೆಗೆ ಬರುತ್ತಾರೆ ಎಂದರು. ಬೆಳಗಾವಿ ಜಿಲ್ಲೆಯಲ್ಲೂ ಸಹ ಹದಿನೆಂಟರಲ್ಲಿ ಆರೇಳು ಸ್ಥಾನ ಗೆಲ್ಲುವ ವಾತಾವರಣ ಇದೆ. ಜೆಡಿಎಸ್ ಅಚ್ಚರಿಯ ರೀತಿಯಲ್ಲಿ ಗೆದ್ದು ಬೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ಸೇರ್ಪಡೆ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರ ಸಮ್ಮುಖದಲ್ಲಿ ಚಿಕ್ಕಮಗಳೂರು ಪುರಸಭೆಯ ಮಾಜಿ ಅಧ್ಯಕ್ಷ, ಸ್ಥಳೀಯ ಲಿಂಗಾಯತ ಮುಖಂಡರೂ ಆದ ಎಚ್.ಡಿ.ತಮ್ಮಯ್ಯ ತಮ್ಮ ಬೆಂಬಲಿಗರೊಂದಿಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ನಾಯಕರು ಅವರನ್ನು ಬರಮಾಡಿಕೊಂಡರು.
ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಚಿಕ್ಕಮಗಳೂರು ರಾಜ್ಯದ ರಾಜಕೀಯದ ದಿಕ್ಸೂಚಿ ಬದಲಿಸುವ ಜಿಲ್ಲೆಗಳಲ್ಲಿ ಒಂದಾಗಿದ್ದು, ಈ ಜಿಲ್ಲೆಯ ಜನರು ಪ್ರಜ್ಞಾವಂತರಿದ್ದಾರೆ. ಈ ಜಿಲ್ಲೆಯ ಬಿಜೆಪಿ ನಾಯಕರಾದ ಎಚ್.ಡಿ.ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸುವ ಸಂದೇಶವನ್ನು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ರವಾನಿಸಿದೆ ಎಂದು ವಿಶ್ಲೇಷಿಸಿದರು.
ಅನ್ಯ ಪಕ್ಷಗಳ ಹಾಲಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ: ಡಿ.ಕೆ.ಶಿವಕುಮಾರ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ವೈಎಸ್‌ವಿ ದತ್ತಾ, ಹರೀಶ್, ಗೋಪಿಕೃಷ್ಣ, ಶಿವಶಂಕರಪ್ಪ ಅವರ ನಂತರ ಈಗ ತಮ್ಮಣ್ಣ ಹೀಗೆ ಒಬ್ಬೊಬ್ಬರಾಗಿ ಪ್ರಮುಖ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವುದಕ್ಕೆ ಪ್ರಮುಖ ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರುತ್ತಿರುವುದೇ ಸಾಕ್ಷಿ. ಚಿಕ್ಕಮಗಳೂರಲ್ಲಿ ಸಿ.ಟಿ.ರವಿ ಅವರನ್ನು ಕಟ್ಟಿಹಾಕೋಕೆ ನಾವು ಹೋಗಬೇಕಿಲ್ಲ. ನಮ್ಮ ಪಕ್ಷದಿಂದ ಹೋಗಿದ್ದಾರಲ್ಲ (ವಲಸಿಗ ಬಿಜೆಪಿಗರು) ಅವರೇ ಸಾಕು. ಈಗಾಗಲೇ ನಮ್ಮಿಂದ ಹೋದವರೆ ಎಲ್ಲಾ ನಡೆಸುತ್ತಾ ಇದ್ದಾರೆ ಎಂದು ಹೇಳಿದರು.
ಹಿರಿಯ ಶಾಸಕರಿಗೆ ಪಕ್ಷಾಂತರಿಗಳ ಟಕ್ಕರ್
ಎಸ್.ಎಲ್.ಘೋಟ್ನೇಕರ್
ದೇಶಪಾಂಡೆ ವಿರುದ್ಧ
ಎಚ್.ಡಿ.ತಮ್ಮಯ್ಯ
ಸಿ.ಟಿ.ರವಿ ವಿರುದ್ಧ
ಕಿರಣ್‌ಕುಮಾರ್
ಮಾಧುಸ್ವಾಮಿ ವಿರುದ್ಧ
ವೀರಭದ್ರಪ್ಪ ಹಾಲಹರವಿ
ಪ್ರಸಾದ್ ಅಬ್ಬಯ್ಯ ವಿರುದ್ಧ
