ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಅಂತ್ಯ, ಶಿಂಧೆ ಸಿಎಂ 20ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂದೆ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

ಮುಂಬೈ(ಜೂ.30): ಕಳೆದ ಕೆಲ ದಿನಗಳಲ್ಲಿ ದೇಶದ ಗಮನಸೆಳೆದಿದ್ದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಅಂತ್ಯಗೊಂಡಿದೆ. ಹಲವು ತಿರುವುಗಳ ಬಳಿಕ ಬಂಡಾಯವೆದ್ದ ಏಕನಾಥ್ ಶಿಂದೆ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಏಕನಾಥ್ ಶಿಂದೆ ಮಹಾರಾಷ್ಟ್ರದ 20ನೇ ಸಿಎಂ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರ ಹೆಸರಿನಲ್ಲಿ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಹಾ ಸರ್ಕಾರ ಸಂಪುಟ ಸೇರುವುದಿಲ್ಲ ಎಂದಿದ್ದ ಫಡ್ನವಿಸ್‌ ಮನವೊಲಿಸುವಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಯಶಸ್ವಿಯಾಗಿದ್ದಾರೆ. 

ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಮಹಾರಾಷ್ಟ್ರ ಬಿಜೆಪಿ ಉಸ್ತುವಾರಿ ಸಿಟಿ ರವಿ ಹೂಗುಚ್ಚ ನೀಡಿ ಶುಭಕೋರಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಇಡೀ ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಮಹಾರಾಷ್ಟ್ರ ಬಿಕ್ಕಟ್ಟಿಗೆ ಅಲ್ಪವಿರಾಮ ಬಿದ್ದಿದೆ. ಬಿಜೆಪಿ ಹಾಗೂ ಬಂಡಾಯ ಶಿವಸೇನೆ ನಾಯಕರು ಜೊತೆಯಾಗಿ ಹೊಸ ಸರ್ಕಾರ ರಚಿಸಿದ್ದಾರೆ.

Maharashtra Political Ciris LIVE: ನೂತನ ಸಿಎಂ ಶಿಂಧೆ ಹಾಗೂ ಡಿಸಿಎಂ ಫಡ್ನವಿಸ್ ಪ್ರಮಾಣವಚನ ಸ್ವೀಕಾರ

ಇಂದು(ಜೂ.30) ಕೇವಲ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್ ಇಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶೀಘ್ರದಲ್ಲೇ ಮಹಾರಾಷ್ಟ್ರ ಸರ್ಕಾರ ಸಂಪುಟ ರಚನೆಯಾಗಲಿದೆ. ಏಕನಾಥ್ ಶಿಂಧೆ ಹಾಗೂ ಫಡ್ನವಿಸ್ ಪರ ಘೋಷಣೆಗಳು ಮೊಳಗಿತ್ತು.

ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಉದ್ದವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಮುಂಬೈಗೆ ವಾಪಾಸ್ ಆದ ಬಂಡಾಯ ಶಿಂದೆ ಬಣ ಬಿಜೆಪಿಗೆ ಬೆಂಬಲ ಸೂಚಿಸಿತ್ತು. ಇತ್ತ ದೇವೇಂದ್ರ ಫಡ್ನವಿಸ್ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚಿಸಲು ಅವಕಾಶಕೋರಿದ್ದರು. ಹೀಗಾಗಿ ಫಡ್ನವಿಸ್ ಮತ್ತೆ ಸಿಎಂ ಆದರೆ, ಶಿಂದೆ ಉಪ ಮುಖ್ಯಮಂತ್ರಿ ಅನ್ನೋ ಮಾತುಗಳು ಎಲ್ಲೆಡೆಯಿಂದ ಕೇಳಿಬಂದಿತ್ತು.

ಇಂದು ಸಂಜೆ ಜಂಟಿ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ರಾಜಕೀಯಕ್ಕೆ ಮತ್ತೊಂದು ತಿರುವು ನೀಡಿದರು. ಏಕನಾಥ್ ಶಿಂದೆ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು. ಇಷ್ಟೇ ಅಲ್ಲ ತಾನು ಮಹಾರಾಷ್ಟ್ರ ಸಂಪುಟ ಸೇರುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದರು.

ಸುದ್ದಿಗೋಷ್ಠಿ ಮುಗಿದ ಬೆನ್ನಲ್ಲೇ ಬಿಜೆಪಿ ಮತ್ತೊಂದು ಟ್ವಿಸ್ಟ್ ನೀಡಿದೆ. ಫಡ್ನವಿಸ್ ಉಪಮುಖ್ಯಮಂತ್ರಿಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೂಚಿಸಿದ್ದಾರೆ. ನಡ್ಡಾ ಮನವಿ ಸ್ವೀಕರಿಸಿದ ಫಡ್ನವಿಸ್ ಉಪಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿದ್ದರು.