Karnataka BJP: ರಾಜ್ಯ ಬಿಜೆಪಿಗೆ ಇಂದು ನಮೋ ಮೋದಿ ಬೂಸ್ಟರ್‌ಡೋಸ್..!
ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸುಮಾರು ಒಂದು ಲಕ್ಷ ಮಂದಿ ಫಲಾನುಭವಿಗಳು ಹಾಗೂ ಒಂದು ಲಕ್ಷ ಮಂದಿ ಕಾರ್ಯಕರ್ತರು ಸೇರಿದಂತೆ ಸುಮಾರು ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ
ಮಂಗಳೂರು(ಸೆ.02): ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮತ್ತು ಎಂಆರ್‌ಪಿಎಲ್‌ನ ಸುಮಾರು 3,800 ಕೋಟಿ ರು.ಗಳ 8 ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಶುಕ್ರವಾರ) ನೆರವೇರಿಸಲಿದ್ದಾರೆ. ಈ ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸುಮಾರು ಒಂದು ಲಕ್ಷ ಮಂದಿ ಫಲಾನುಭವಿಗಳು ಹಾಗೂ ಒಂದು ಲಕ್ಷ ಮಂದಿ ಕಾರ್ಯಕರ್ತರು ಸೇರಿದಂತೆ ಸುಮಾರು ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಜೊತೆಗೇ ರಾಜ್ಯ ಬಿಜೆಪಿ ನಾಯಕರ ಜೊತೆ ಪ್ರಧಾನಿ ಸಭೆ ನಡೆಸಿ ಚುನಾವಣಾ ಸಿದ್ಧತೆಗೂ ಚಾಲನೆ ನೀಡುವ ಸಾಧ್ಯತೆಯಿದೆ.
ಸಮಾವೇಶದಲ್ಲಿ ರಾಜ್ಯಪಾಲ ಠಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ನೌಕಾಯಾನ, ಬಂದರು, ಒಳನಾಡು ಜಲ ಸಾರಿಗೆ ಸಚಿವ ಸೊರ್ಬಾನಂದ ಸೋನವಾಲಾ, ರಾಜ್ಯ ಖಾತೆ ಸಚಿವ ಶಾಂತನು ಠಾಕೂರ್, ಇಂಧನ ಸಚಿವ ಸುನಿಲ್ ಕುಮಾರ್, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
MODI IN MANGALURU: ಇಂದು ಮಂಗಳೂರಿಗೆ ಪ್ರಧಾನಿ ಭೇಟಿ: ಸಕಲ ಸಿದ್ಧತೆ, ಸಮುದ್ರದಲ್ಲೂ ಕಣ್ಗಾವಲು
30 ಎಕರೆ ಪ್ರದೇಶ ಬಳಕೆ:
ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದ ಸುಮಾರು 100 ಎಕರೆ ಪೈಕಿ 30 ಎಕರೆ ಜಾಗವನ್ನು ಸಮಾವೇಶಕ್ಕೆ ಬಳಸಿಕೊಳ್ಳಲಾಗಿದೆ. 25 ಎಕರೆ ಜಾಗಕ್ಕೆ ಜರ್ಮನ್ ಮಾದರಿ ಪೆಂಡಾಲ್ ಹಾಕಿದ್ದು, 80 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು ಏಳು ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಮುಖ್ಯ ರಸ್ತೆಯಿಂದ ಸಮಾವೇಶ ಸ್ಥಳಕ್ಕೆ ಬರಲು ನಾಲ್ಕು ದ್ವಾರಗಳನ್ನು ರಚಿಸಲಾಗಿದ್ದು, ಪ್ರತಿ ದ್ವಾರಕ್ಕೆ ಮೆಟಲ್ ಡಿಟಕ್ಟರ್ ಅಳವಡಿಸಲಾಗಿದೆ. ವೇದಿಕೆಯಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ವೇದಿಕೆಯ ಕೆಳಭಾಗದಲ್ಲೂ 10ಕ್ಕೂ ಅಧಿಕ ಎಲ್‌ಇಡಿ ಪರದೆ ಹಾಕಲಾಗಿದೆ. ವೇದಿಕೆ ಸುತ್ತ ಮಾತ್ರವಲ್ಲ ಮೈದಾನದ ಸುತ್ತಲೂ ತಡೆಬೇಲಿ ಹಾಕಲಾಗಿದೆ.
ಸಮಾವೇಶಕ್ಕೆ ಆಗಮಿಸುವವರನ್ನು ಕರೆತರಲು ಸುಮಾರು 3 ಸಾವಿರ ಬಸ್, 1,400 ಕಾರು, 1 ಸಾವಿರ ಲಘು ವಾಹನ, 4,600 ದ್ವಿಚಕ್ರ ವಾಹನ ಕಾಯ್ದಿರಿಸಲಾಗಿದೆ. ಮಂಗಳೂರಿನ ವಿವಿಧ 15 ಕಡೆಗಳಲ್ಲಿ ವಾಹನ ಪಾರ್ಕಿಂಗ್ ಸೌಲಭ್ಯ ನಿಗದಿಪಡಿಸಲಾಗಿದೆ. ಇಡೀ ಮೈದಾನ ಪ್ರಧಾನಿ ಭದ್ರತೆಯ ಎಸ್‌ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಸುಪರ್ದಿಯಲ್ಲಿದೆ. 100 ಮಂದಿ ಉನ್ನತ ಪೊಲೀಸ್ ಅಧಿಕಾರಿಗಳು, 2 ಸಾವಿರ ಮಂದಿ ಸಿವಿಲ್ ಪೊಲೀಸರನ್ನು ನೇಮಿಸಲಾಗಿದೆ.
ಕೆಎಸ್‌ಆರ್‌ಪಿ, ಸಿಎಆರ್, ಎನ್‌ಎನ್‌ಎಫ್, ಆರ್‌ಎಎಫ್, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಐಎಸ್‌ಡಿ, ಗರುಡ ಗಸ್ತುಪಡೆ, ರಾರಯಪಿಡ್ ಆ್ಯಕ್ಷನ್ ಫೋರ್ಸ್ ತಂಡ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ನೋಡಿಕೊಳ್ಳಲಾಗುತ್ತಿದೆ. ಮಧ್ಯಾಹ್ನ 12 ಗಂಟೆ ಮೊದಲು ಸಮಾವೇಶದಲ್ಲಿ ಎಲ್ಲರೂ ಇರುವಂತೆ ಸೂಚನೆ ನೀಡಲಾಗಿದೆ. ಸಮಾವೇಶದಲ್ಲಿ ಫಲಾನುಭವಿಗಳಿಗೆ ಲಘು ಉಪಾಹಾರ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಭೇಟಿಗೆ ಅವಕಾಶ ಕೋರಿದ ಮುಸ್ಲಿಂ ವೇದಿಕೆ
ಬೆಳಗ್ಗೆ 6ರಿಂದಲೇ ಸಂಚಾರ ಬಂದ್:
ವಿಮಾನ ನಿಲ್ದಾಣದಿಂದ ಸಮಾವೇಶ ಸ್ಥಳ ಹಾಗೂ ಎನ್‌ಎಂಪಿಎ ಇಂದ ಸಮಾವೇಶ ಸ್ಥಳಕ್ಕೆ ಮೋದಿ ಆಗಮನದ ಕಾನ್ವೇ ರಿಹರ್ಸಲ್ ನಡೆಸಲಾಯಿತು. ಕೆಂಜಾರು ವಿಮಾನ ನಿಲ್ದಾಣದಿಂದ ಸಮಾವೇಶ ಸ್ಥಳ ಹಾಗೂ ಎನ್‌ಎಂಪಿಎಲ್‌ನಿಂದ ಸಮಾವೇಶ ಪ್ರದೇಶವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ವಾಹನ ನಿಲುಗಡೆ ಹಾಗೂ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಈ ರಸ್ತೆ ಸಂಚಾರ ಬಂದ್ ಆಗಿರಲಿದೆ. ರಾ.ಹೆ.66ರಲ್ಲಿ ಪರ್ಯಾಯ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವ್ಯಾವ ಯೋಜನೆ?
1. ಎನ್‌ಎಂಪಿಎ ಕಂಟೆನೇರ್, ಸರಕು ನಿರ್ವಹಣೆ
2.ಬಿಎಸ್‌ಐ ಉನ್ನತೀಕರಣ, ಇಂಧನ ಉತ್ಪಾದನೆ
3.ಸಮುದ್ರ ನೀರಿನ ನಿರ್ಲವಣೀಕರಣ ಘಟಕ
4.ಎಂಆರ್‌ಪಿಎಲ್‌ನಲ್ಲಿ ಎಲ್‌ಪಿಜಿ ಸೌಲಭ್ಯ
5.ಖಾದ್ಯ ತೈಲ ಶೇಖರಣೆ ಮತ್ತು ಸಂಸ್ಕರಣಾಗಾರ
6.ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳು
7.ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್
8.ಕುಲೈನಲ್ಲಿ ಇಪಿಸಿ ಮಾದರಿ ಮೀನುಗಾರಿಕಾ ಬಂದರು
ಅದ್ಧೂರಿ ಸಮಾವೇಶ
30 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ
25 ಎಕರೆಯಲ್ಲಿ ಜರ್ಮನ್ ಪೆಂಡಾಲ್
80 ಸಾವಿರ ಆಸನಗಳಿಗೆ ವ್ಯವಸ್ಥೆ
2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ
2 ಸಾವಿರ ಪೊಲೀಸರಿಂದ ಬಿಗಿ ಭದ್ರತೆ