Asianet Suvarna News Asianet Suvarna News

ಖರ್ಗೆ ತವರಿಂದಲೇ ವಿಜಯ ದುಂದುಭಿ: ಪ್ರಧಾನಿ ಮೋದಿ

ಕಾಂಗ್ರೆಸ್‌ ಯಾವ ಭರವಸೆಯನ್ನೂ ಈಡೇರಿಸುವುದಿಲ್ಲ, ನಂಬಬೇಡಿ, ಆ ಪಕ್ಷ ಕಾಲಿಡಲು ಜಾಗ ಕೊಡಬೇಡಿ, ದಾವಣಗೆರೆ ಸಮಾವೇಶದಲ್ಲಿ ಮೋದಿ ಅಬ್ಬರ. 

PM Narendra Modi Slams AICC President Mallikarjun Kharge grg
Author
First Published Mar 26, 2023, 12:30 AM IST

ದಾವಣಗೆರೆ(ಮಾ.26):  ಎಐಸಿಸಿ ಅಧ್ಯಕ್ಷರ ಕರ್ಮಭೂಮಿ ಕಲಬುರಗಿಯಲ್ಲಿ ನಡೆದ ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲೇ ಬಿಜೆಪಿಯ ವಿಜಯ ದುಂದುಭಿ ಮೊಳಗಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತವೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ‘ಮಹಾಸಂಗಮ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಲಬುರಗಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಸಾಧಿಸಿದ ವಿಜಯ ಪ್ರಸ್ತಾಪಿಸುವ ಮೂಲಕ ತವರಿನ ಪಾಲಿಕೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಿಡಿತ ಕೈತಪ್ಪಿದ ಬಗ್ಗೆ ವ್ಯಂಗ್ಯವಾಡಿದರು. ಕರ್ನಾಟಕಕ್ಕೆ ನಾನು ಇಂದು ಬಂದಿರುವುದಕ್ಕೂ, ಕಲಬುರಗಿ ಪಾಲಿಕೆ ಮೇಯರ್‌-ಉಪ ಮೇಯರ್‌ ಸ್ಥಾನ ತಪ್ಪಿದ್ದಕ್ಕೂ ಸಹ ಸಂಬಂಧವನ್ನು ಕಲ್ಪಿಸಿ, ಕೆಲವರು ಆರೋಪ ಮಾಡಬಹುದು. ಮೋದಿ ಕರ್ನಾಟಕಕ್ಕೆ ಬಂದಿದ್ದ. ಏನೋ ಮಾಡಿರಬಹುದು ಎಂದು ನನ್ನ ಮೇಲೆ ಆರೋಪ ಮಾಡಬಹುದು ಎಂದು ಕಾಂಗ್ರೆಸ್‌ ನಾಯಕರ ವರ್ತನೆ ಬಗ್ಗೆ ಲೇವಡಿ ಮಾಡಿದರು.

ಕಾಂಗ್ರೆಸ್‌ಗಿಂತ 5 ಪಟ್ಟು ಅಧಿಕ ಅನುದಾನ ಕೊಟ್ಟ ಪ್ರಧಾನಿ ಮೋದಿ: ರಾಜ್ಯಕ್ಕೆ 7,351 ಕೋಟಿ ರೂ. ಕೊಡುಗೆ

ಸೋಷಿಯಲ್‌ ಮೀಡಿಯಾದಲ್ಲಿ ನಿನ್ನೆ ಒಂದು ವಿಡಿಯೋ ನೋಡಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಪಕ್ಷದ ಕಾರ್ಯಕರ್ತನ ಕಪಾಳಕ್ಕೆ ಸಾರ್ವಜನಿಕವಾಗಿ ಹೊಡೆದು, ಆನಂದ ಪಡುತ್ತಿದ್ದರು. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸಲಾಗದವರು ಜನರ ಬಗ್ಗೆ ಹೇಗೆ ಗೌರವ ಭಾವ ಹೊಂದಲು ಸಾಧ್ಯಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಹರಿಹರದ ಕಾರ್ಯಕರ್ತನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಪಾಳ ಮೋಕ್ಷ ಮಾಡಿದ್ದನ್ನು ಪ್ರಸ್ತಾಪಿಸಿದರು.

ಬಿಜೆಪಿಯಲ್ಲಿ ಯಾರೂ ದೊಡ್ಡವರಲ್ಲ, ಸಣ್ಣವರೂ ಅಲ್ಲ. ಇಲ್ಲಿ ಎಲ್ಲರೂ ಸರಿ ಸಮಾನರು. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ನನಗೆ ಪರಮಮಿತ್ರ, ಬಲಿಷ್ಠ ಜೊತೆಗಾರ, ನನ್ನ ಸಹೋದರನಿದ್ದಂತೆ. ನನಗೆ ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ವಿಶ್ವಾಸವಿದೆ. ಭಾರತದಲ್ಲಿ ಸುದೀರ್ಘ ಕಾಲ ಆರೋಪದ ರಾಜಕೀಯವೇ ನಡೆದಿದೆ. ಇಂತಹ ಕೊಳಕು ರಾಜಕೀಯ ಸ್ಥಿತಿ ಬದಲಿಸಿ, ಅಭಿವೃದ್ಧಿ ಪರ್ವವನ್ನು ಬಿಜೆಪಿ ಆರಂಭಿಸಿದೆ. ಇಂದಿನ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮದಲ್ಲಿ ಇಷ್ಟೊಂದು ಜನರನ್ನು ಕಂಡು ಭಾವುಕನಾಗಿದ್ದೇನೆ. ಇದು ವಿಜಯ ಸಂಕಲ್ಪ ಅಲ್ಲ, ಇದೇ ವಿಜಯ ಯಾತ್ರೆ. ಇದು ರಾಜ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರದ ಮರು ಸ್ಥಾಪನೆಗೆ ರಾಜ್ಯದ ಜನತೆ ನಿರ್ಧರಿಸಿರುವುದರ ಸಂಕೇತ ಎಂದರು.

ವಿಜಯ ಸಂಕಲ್ಪ ಸಮಾರೋಪ ಸಮಾವೇಶದಲ್ಲಿ ರಾಜಾಹುಲಿ ಘರ್ಜನೆ!

ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ಪ್ರಸ್ತಾಪಿಸಿದ ಮೋದಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಆಟ ಕಂಡಿದ್ದಾಗಿದೆ. ಚುನಾವಣೆ ವೇಳೆ ನೀಡಿದ ಯಾವುದೇ ಭರವಸೆಯನ್ನೂ ಅಲ್ಲಿನ ಸರ್ಕಾರ ಈವರೆಗೂ ಈಡೇರಿಸಿಲ್ಲ. ಕಾಂಗ್ರೆಸ್‌ ಮೇಲೆ ವಿಶ್ವಾಸವಿಡಬೇಡಿ. ಸುಳ್ಳು ಭರವಸೆ ನೀಡುವ ಪಕ್ಷಕ್ಕೆ ರಾಜ್ಯದಲ್ಲಿ ಕಾಲಿಡಲು ಸಹ ಜಾಗ ನೀಡಬೇಡಿ. ಹಿಮಾಚಲ ಪ್ರದೇಶದ ಜನರಿಗೆ ಬಂದ ಸ್ಥಿತಿ ಕರ್ನಾಟಕದ ಜನತೆಗೂ ಬರದಂತೆ ಜಾಗ್ರತೆ ವಹಿಸಿ ಎಂದು ಹೇಳಿದರು.

ಅಮೆರಿಕ, ಜಪಾನ್‌, ಜರ್ಮನಿ, ಫ್ರಾನ್ಸ್‌ ಸೇರಿದಂತೆ ಜಗತ್ತಿನ ಎಲ್ಲಾ ಕಡೆ ಇಂದು ಭಾರತದ ಗುಣಗಾನವಾಗುತ್ತಿದೆ. ನೀವು ನಮಗೆ ನೀಡಿದ ಒಂದೇ ಒಂದು ಮತದ ಕಾರಣದಿಂದ ಇದು ಸಾಧ್ಯವಾಯಿತು. ಅದೇ ರೀತಿ ಕರ್ನಾಟಕದ ಗುಣಗಾನವೂ ಆಗಬೇಕು. ಅದಕ್ಕೆ ನಿಮ್ಮ ಒಂದು ಮತದ ಶಕ್ತಿಯನ್ನು ಬಿಜೆಪಿಗೆ ನೀಡಬೇಕು ಎಂದರು.

Follow Us:
Download App:
  • android
  • ios