ಪ್ರಧಾನಿ ಮೋದಿ ರೋಡ್ ಶೋಗೆ ಹಣ ಕೊಟ್ಟು ಜನ ಕರೆಸಿದ್ದಾರೆ: ಸಿದ್ದರಾಮಯ್ಯ
ಬೆಳಗಾವಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ದುಡ್ಡು ಕೊಟ್ಟು ಜನರನ್ನು ಕರೆ ತಂದರು. ಪ್ರವಾಹ, ಕೊರೋನಾದಂತಹ ಕಷ್ಟಕಾಲದಲ್ಲಿ ಕರ್ನಾಟಕಕ್ಕೆ ಯಾರೂ ಬರಲಿಲ್ಲ. ಈಗ ಚುನಾವಣೆ ಬಂದಾಗ ವಾರಕ್ಕೊಮ್ಮೆ ಮೋದಿ, ಶಾ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬೆಳಗಾವಿ (ಮಾ.02): ಬೆಳಗಾವಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ದುಡ್ಡು ಕೊಟ್ಟು ಜನರನ್ನು ಕರೆ ತಂದರು. ಪ್ರವಾಹ, ಕೊರೋನಾದಂತಹ ಕಷ್ಟಕಾಲದಲ್ಲಿ ಕರ್ನಾಟಕಕ್ಕೆ ಯಾರೂ ಬರಲಿಲ್ಲ. ಈಗ ಚುನಾವಣೆ ಬಂದಾಗ ವಾರಕ್ಕೊಮ್ಮೆ ಮೋದಿ, ಶಾ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿಯಲ್ಲಿ ಬುಧವಾರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ನಿಂದ ಖರ್ಗೆ, ವೀರೇಂದ್ರ ಪಾಟೀಲ, ಎಸ್.ನಿಜಲಿಂಗಪ್ಪ ಅವರ ಕಡೆಗಣನೆ ಎಂಬ ಮೋದಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಸೈಡ್‌ಲೈನ್ ಮಾಡಿದ್ದೇ ನರೇಂದ್ರ ಮೋದಿ. ಯಡಿಯೂರಪ್ಪ ಅವರಿಗೆ ಏನಾಗಿತ್ತು? ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಜೈಲಿಗೆ ಅಟ್ಟಿದರು. ಪಾಪ ಕಣ್ಣೀರು ಇಡುವಂತೆ ಮಾಡಿದರು. ಇದು ಮೋದಿ ಕಾಲದಲ್ಲೇ ನಡೆದಿದೆಯಲ್ಲ. ಇವರ ತಟ್ಟೆಯಲ್ಲಿ ನಾಯಿ ಬಿದ್ದಿದೆ. ಅದನ್ನು ಬಿಟ್ಟು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದರು.
ವಿಧಾನಸೌಧದಲ್ಲೇ ವಿಪರೀತ ಲಂಚ ತಾಂಡವ: ಸಿದ್ದರಾಮಯ್ಯ
ಮೋದಿಯವರ ಸಾವು ಆಗಲಿ ಎಂದು ಯಾರು ಹೇಳಿದ್ದಾರೆ?. ಮೋದಿಯವರ ಸಾವನ್ನು ನಾವ್ಯಾರೂ ಬಯಸುತ್ತಿಲ್ಲ. ಮೋದಿ ಅವರ ಆರೋಗ್ಯ ಚೆನ್ನಾಗಿರಲಿ. ಜನರ ಸಮಸ್ಯೆ ಬಗೆಹರಿಸಿಲ್ಲ ಎಂದಿದ್ದೇವೆ ಅಷ್ಟೆ. ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು. ಆದರೆ, ರಾಜ್ಯದಲ್ಲಿನ ಬಿಜೆಪಿ ಆಡಳಿತದಲ್ಲಿ ಶೇ.40 ರಷ್ಟುಕಮೀಷನ್ ದಂಧೆ ನಡೆಯುತ್ತಿದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡರು. ಡೆಟ್‌ನೋಟ್‌ನಲ್ಲಿ ಈಶ್ವರಪ್ಪ ಹೆಸರನ್ನು ಬರೆದಿಟ್ಟಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದು ಒಂದು ವರ್ಷವಾದರೂ ಮೋದಿ ತನಿಖೆ ಮಾಡಿಸುತ್ತಿಲ್ಲ. ಜನರಿಂದ ಸುಲಿಗೆ ಮಾಡಿದ್ದ ಹಣದಿಂದಲೇ ರೈತರಿಗೆ . 6 ಸಾವಿರ ಕೊಡುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗೆದ್ದರೆ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿ 3 ತಿಂಗಳಾಗಿದೆ. ಸಿಎಂ ಬೊಮ್ಮಾಯಿಯವರು ಮಧ್ಯಂತರ ವರದಿ ತರಿಸಿಕೊಂಡು ಇದನ್ನು ಜಾರಿ ಮಾಡಬೇಕಿತ್ತು. ಆದರೆ, ಇನ್ನೂ ಜಾರಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗವನ್ನು ಜಾರಿಗೊಳಿಸುತ್ತೇವೆ ಎಂದರು.
ಕಾಂಗ್ರೆಸ್ ಸೇರಿದ ಬಿಜೆಪಿ ಮುಖಂಡ ತೋರಗಲ್: ರೋಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಅವರ ಸಮ್ಮುಖದಲ್ಲಿ ಬಿಜೆಪಿ ಮುಖಂಡ, ನ್ಯಾಯವಾದಿ ರಫೀಕ್ ತೋರಗಲ್ ಕಾಂಗ್ರೆಸ್ ಸೇರ್ಪಡೆಯಾದರು. ಡಾ. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷರೂ ಆಗಿರುವ ತೋರಗಲ್ ತಮ್ಮ ಅಪಾರ ಅಭಿಮಾನಿಗಳೊಂದಿಗೆ ಬಿಜೆಪಿ ತೊರೆದರು. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಜತೆಗೆ ರಕ್ಷಣೆಗೆ ಬದ್ಧವಾಗಿರುವ ಕಾಂಗ್ರೆಸ್ ತತ್ವ-ಸಿದ್ಧಾಂತಗಳು ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಸಿದ್ದರಾಮಯ್ಯ
ಕಳೆದ ಕೆಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಜತೆಗೆ ಪಟ್ಟಣದಲ್ಲಿ ಚುನಾವಣೆ ವೇಳೆ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿದ್ದೇನೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವದಡಿ ಮತ್ತು ಸಂವಿಧಾನದ ಆಶಯಗಳ ಈಡೇರಿಕೆಗೆ ಬದ್ಧವಾಗಿರುವ ಪಕ್ಷ ಸೇರ್ಪಡೆಗೊಳ್ಳುವ ಬಯಕೆ ಹೊಂದಿದ್ದನ್ನು ಅರಿತಿದ್ದ ಬೆಂಬಲಿಗರು ಹಿಂದಿನಿಂದಲೂ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಅವಕಾಶ ಒದಗಿ ಬಂದಿದ್ದರಿಂದ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿದ್ದು ಸ್ಮರಣಾರ್ಹ ದಿನವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.