Karnataka Politics: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಮೋದಿ ಪರೋಕ್ಷ ಸೂಚನೆ?
ಅಭಿವೃದ್ಧಿಗೆ ಡಬ್ಬಲ್ ಎಂಜಿನ್ ಡೋಸ್ ನೀಡಿದರೆ, ಪಕ್ಷ ಕಾರ್ಯಕರ್ತರಿಗೆ ಪುನಶ್ಚೇತನದ ಬೂಸ್ಟರ್ ನೀಡಿದ್ದಾರೆ. ಕರಾವಳಿ ಜಿಲ್ಲೆ ಮತ್ತೊಮ್ಮೆ ಬಿಜೆಪಿಯ ಶಕ್ತಿ ಕೇಂದ್ರ ಎಂಬುದನ್ನು ಸಾಬೀತು ಪಡಿಸಿದ ಸಮಾವೇಶ
ಮಂಗಳೂರು(ಸೆ.03): ಡಬ್ಬಲ್ ಎಂಜಿನ್ ಸರ್ಕಾರ ಹಾಗೂ ಅಭಿವೃದ್ಧಿಯ ಮಂತ್ರ ಜಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಶುಕ್ರವಾರ ನಡೆದ ಅಭೂತಪೂರ್ವ ಸಮಾವೇಶದಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆಗೆ ಸಜ್ಜಾಗುವಂತೆ ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ಅಭಿವೃದ್ಧಿಗೆ ಡಬ್ಬಲ್ ಎಂಜಿನ್ ಡೋಸ್ ನೀಡಿದರೆ, ಪಕ್ಷ ಕಾರ್ಯಕರ್ತರಿಗೆ ಪುನಶ್ಚೇತನದ ಬೂಸ್ಟರ್ ನೀಡಿದ್ದಾರೆ. ಕರಾವಳಿ ಜಿಲ್ಲೆ ಮತ್ತೊಮ್ಮೆ ಬಿಜೆಪಿಯ ಶಕ್ತಿ ಕೇಂದ್ರ ಎಂಬುದನ್ನು ಈ ಸಮಾವೇಶ ಸಾಬೀತು ಪಡಿಸಿತು.
ಮಂಗಳೂರಿನ ಬಂಗ್ರಕೂಳೂರಿನಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡದೆ ಕೇವಲ ಅಭಿವೃದ್ಧಿ ಪರ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ವಿಪಕ್ಷಗಳ ಟೀಕೆಗೆ ಎದುರೇಟು ನೀಡಲು ಯತ್ನಿಸಿದರು.
ಜನತೆಗೆ ಯೋಜನೆ ತಲುಪಿಸಿ, ರಾಜಕೀಯ ಲಾಭ ಪಡೀರಿ: ಪ್ರಧಾನಿ ಮೋದಿ
ಡಬ್ಬಲ್ ಎಂಜಿನ್ ಸರ್ಕಾರ ಹಾಗೂ ಸಾಧನೆ ಬಗ್ಗೆ ಭಾಷಣದುದ್ದಕ್ಕೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿದರು. ಅಲ್ಲದೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಡಬ್ಬಲ್ ಎಂಜಿನ್ ಸರ್ಕಾರದ ಬಗ್ಗೆ ವಿಪಕ್ಷಗಳ ನಿರಂತರ ಟೀಕೆಗಳಿಗೆ ಸಾಧನೆಯ ಉತ್ತರ ತೆರೆದಿಟ್ಟರು. ಮುಖ್ಯವಾಗಿ ಮುಂದೆಯೂ ರಾಜ್ಯದಲ್ಲಿ ಇದೇ ಡಬ್ಬಲ್ ಎಂಜಿನ್ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವ ಸಂದೇಶವನ್ನು ಮೋದಿ ಅವರು ಭಾಷಣದಲ್ಲಿ ರವಾನಿಸಿದರು.
ಕರಾವಳಿ ಬಿಜೆಪಿಗೆ ಪುನಶ್ಚೇತನ:
ಪಕ್ಷದಲ್ಲಿ ಆಂತರಿಕ ಬೇಗುದಿ ಹಾಗೂ ನಾಯಕರ ನಡವಳಿಕೆಯಿಂದ ಬೇಸತ್ತು ಹೋಗಿದ್ದ ಕರಾವಳಿ ಬಿಜೆಪಿಗೆ ಮೋದಿ ಕಾರ್ಯಕ್ರಮ ಅಕ್ಷರಶಃ ಪುನಶ್ಚೇತನ ನೀಡಿದೆ. ಕಾರ್ಯಕರ್ತರಲ್ಲಿನ ಅಸಮಾಧಾನ ತೊಡೆದು ಹಾಕುವ ಸಲುವಾಗಿಯೇ ದಿಢೀರ್ ಆಗಿ ಮಂಗಳೂರಿನಲ್ಲಿ ಇಂತಹ ಸಮಾವೇಶ ಏರ್ಪಡಿಸುವ ನಿರ್ಧಾರಕ್ಕೆ ರಾಜ್ಯ ನಾಯಕರು ಬಂದಿದ್ದರು. ಬಿಜೆಪಿ ಹಾಗೂ ಹಿಂದುತ್ವದ ಶಕ್ತಿ ಪ್ರದರ್ಶನ ಅನಿವಾರ್ಯವಾಗಿತ್ತು. ಅದನ್ನು ಸಾಕಾರಗೊಳಿಸುವಲ್ಲಿ ಈ ಸಮಾವೇಶ ಯಶಸ್ವಿಯಾಗಿದೆ ಎಂಬುದು ಪಕ್ಷ ನಾಯಕರ ಅಭಿಪ್ರಾಯ.
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸುವ ಮೂಲಕ ಸರ್ಕಾರದ ಈ ಸಮಾವೇಶ ಬಿಜೆಪಿಗೆ ರಾಜಕೀಯವಾಗಿ ಸುಲಭದ ಲಾಭ ತಂದುಕೊಡುವಂತೆ ಮಾಡಿದೆ. ಸರ್ಕಾರಿ ಪ್ರಯೋಜಿತ ಸಮಾವೇಶವಾದರೂ ಫಲಾನುಭವಿಗಳನ್ನು ಹೊರತುಪಡಿಸಿದರೆ ಸಭಾಂಗಣ ಪೂರ್ತಿ ಹಾಗೂ ಹೊರಗೆ ಬಿಜೆಪಿ ಕಾರ್ಯಕರ್ತರಿಂದ ತುಂಬಿ ತುಳುಕಿತ್ತು. ತಲೆಗೆ ಕೇಸರಿ ರುಮಾಲು, ಕೈಯಲ್ಲಿ ಪಕ್ಷದ ಬಾವುಟ ಬೀಸುತ್ತಾ ಮೋದಿ, ಮೋದಿ ಎಂದು ಆಗಾಗ ಘೋಷಣೆ ಕೂಗುತ್ತಿದ್ದುದು ಬಿಜೆಪಿ ಮತ್ತೆ ಕರಾವಳಿಯಲ್ಲಿ ಶಕ್ತಿಯುತವಾಗಿರುವುದನ್ನು ಸಾಬೀತು ಪಡಿಸಿತು.
Karnataka Politics: ಮಂಗಳೂರು ಸಮಾವೇಶದ ಮೊದಲ ಸಾಲಲ್ಲೇ ಬಿಎಸ್‌ವೈಗೆ ಮೋದಿ ಸ್ಥಾನ..!
ಕರಾವಳಿ ಕರ್ನಾಟಕ ಬಲವರ್ಧನೆ: ಪ್ರಧಾನಿ ಮೋದಿಯ ಸಮಾವೇಶವನ್ನು ಮಂಗಳೂರಿನಲ್ಲಿ ಆಯೋಜಿಸಿದರೂ ಇದರ ಪ್ರತಿಫಲನ ಕರಾವಳಿ ಕರ್ನಾಟಕ್ಕೆ ಪೂರ್ತಿ ವ್ಯಾಪಿಸುವುದನ್ನು ಬಿಜೆಪಿ ನಾಯಕರಿಗೆ ತಿಳಿಯದ ಸಂಗತಿಯೇನು ಅಲ್ಲ. ಹಾಗಾಗಿಯೇ ತರಾತುರಿಯಲ್ಲಿ ಮೋದಿಯನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸಿ ಸುಲಭದಲ್ಲಿ ರಾಜಕೀಯ ಪ್ರಯೋಜನಕ್ಕೆ ಮುಂದಾಗಿದ್ದಾರೆ.
ಮಂಗಳೂರಿನಲ್ಲಿ ಮೋದಿ ಸಮಾವೇಶದಿಂದ ದ.ಕ, ಉಡುಪಿ, ಕೊಡಗು ಮಾತ್ರವಲ್ಲ ಸಮೀಪದ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೂ ಮೋದಿ ಅಲೆ ವ್ಯಾಪಿಸುತ್ತದೆ. ಮೊದಲ ಹಂತದಲ್ಲಿ ಪಕ್ಷವನ್ನು ಫಾಮ್‌ರ್‍ಗೆ ತಂದರೆ, ಉಳಿದ ಕಡೆ ಎರಡನೇ ಹಂತದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸಬಹುದು ಎಂಬುದು ನಾಯಕರ ಲೆಕ್ಕಾಚಾರ. ಹೇಗೂ ಕರಾವಳಿ ಮೊದಲಿನಿಂದಲೂ ಬಿಜೆಪಿಯ ಭದ್ರ ನೆಲ. ರಾಜಕೀಯ ಪ್ರಯೋಗಗಳು, ಯಶಸ್ವಿ ಫಲಿತಾಂಶ ಎಲ್ಲವೂ ಕರಾವಳಿಯಿಂದಲೇ ಲಭಿಸಿರುವುದರಿಂದ ಬಿಜೆಪಿ ಪಾಲಿಗೆ ಈಗ ಭದ್ರ ನೆಲೆಯಾಗಿ ಮಾರ್ಪಟ್ಟಿದೆ. ಸಂಘಟನಾತ್ಮಕವಾಗಿಯೂ ಈಗ ಕರಾವಳಿಯಲ್ಲಿ ಬಿಜೆಪಿ ಸಾಮರ್ಥ್ಯ ತನ್ನ ಸಾಮರ್ಥ್ಯವನ್ನು ತೋರಿಸಿದೆ.
ಮೋದಿ ಟೈಮ್ಲೈನ್
1.20- ಕೇರಳ ಕೊಚ್ಚಿಯಿಂದ ನರೇಂದ್ರ ಮೋದಿ ಮಂಗಳೂರು ಏರ್ಪೋರ್ಚ್ಗೆ ಆಗಮನ.
1.40- ಏರ್ಪೋರ್ಚ್ನಿಂದ ಹೆಲಿಕಾಪ್ಟರ್ನಲ್ಲಿ ಎನ್ಎಂಪಿಎಗೆ ಆಗಮನ.
2.15ರವರೆಗೆ- ಎನ್ಎಂಪಿಎಯಲ್ಲಿ ಅಧಿಕಾರಿಗಳಿಂದ ಪ್ರಧಾನಿಗೆ ಮಾಹಿತಿ.
2.25- ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ.
3.05- ಭಾಷಣ ಆರಂಭಿಸಿದ ನರೇಂದ್ರ ಮೋದಿ.
3.30- ಭಾಷಣ ಮುಕ್ತಾಯಗೊಳಿಸಿ ಮತ್ತೆ ಎನ್ಎಂಪಿಎ ಕಡೆಗೆ ತೆರಳಿದರು.
ಸಂಜೆ 5.20- ಮತ್ತೆ ಏರ್ಪೋರ್ಚ್ಗೆ ಆಗಮಿಸಿದ ಮೋದಿ.
5.40- ದೆಹಲಿಗೆ ವಿಮಾನದ ಮೂಲಕ ನಿರ್ಗಮನ.