'ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ'
ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ: ಖಂಡ್ರೆ| ‘ಕೇಂದ್ರದ ಕಾರ್ಮಿಕ ನೀತಿಗಳಿಂದ ಕೈಗಾರಿಕೆಗಳು ಮುಚ್ಚುತ್ತಿವೆ’
ಬೆಂಗಳೂರು[ಜ.09]: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಿಟ್ಲರ್ ನೀತಿಗಳಿಂದಾಗಿ ದೇಶ ಹಿಮ್ಮುಖವಾಗಿ ಸಾಗುವಂತಾಗಿದೆ. ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನೇರ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಬುಧವಾರ ನಗರದ ಕಾಂಗ್ರೆಸ್ ಭವನದ ಮುಂದೆ ಕೆಪಿಸಿಸಿ ಕಾರ್ಮಿಕ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಕಾರ್ಮಿಕ ನೀತಿಗಳಿಂದ ದೇಶದ ಎಲ್ಲ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ರಾಜ್ಯದಲ್ಲಿನ ಕೈಗಾರಿಕೆಗಳು ಈಗಾಗಲೇ ಸ್ಥಗಿತವಾಗಿವೆ. ಪೀಣ್ಯದಲ್ಲಿನ ಕೈಗಾರಿಕೆಗಳು ಬಾಗಿಲು ಹಾಕುವ ಸ್ಥಿತಿಯಲ್ಲಿವೆ. ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೊಸ ಉದ್ಯೋಗಗಳು ಸೃಷ್ಟಿಯಾಗದೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಅಧಿಕಾರ ಪಡೆಯುವುದಕ್ಕಾಗಿ ಮೋದಿ ನೀಡಿದ ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ. ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಿಲ್ಲ. ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಇಲ್ಲ. ರೈತರು ಆತ್ಮಹತ್ಯೆ ನಡೆಯುತ್ತಿದ್ದರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ರಾಜ್ಯದಲ್ಲಿ ಭೀಕರ ನೆರೆ ಉಂಟಾಗಿದ್ದರೂ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕನಿಷ್ಠ ಸಾಂತ್ವನ ಹೇಳಲು ಮುಂದಾಗಲಿಲ್ಲ. ಅಲ್ಲದೆ, ಕಾರ್ಮಿಕರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ಕಾರ್ಮಿಕ ಮತ್ತು ರೈತ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಫ್ರೀಡಂ ಪಾರ್ಕ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.