ವಿಧಾನಪರಿಷತ್‌ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಎಂ.ಟಿ.ಬಿ.ನಾಗರಾಜ್‌, ಎಚ್‌.ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡಬಾರದು ಎಂದು ಸಾರ್ವಜನಿ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 

ಬೆಂಗಳೂರು (ಆ.19): ವಿಧಾನಪರಿಷತ್‌ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಎಂ.ಟಿ.ಬಿ.ನಾಗರಾಜ್‌, ಎಚ್‌.ವಿಶ್ವನಾಥ್‌ ಹಾಗೂ ನಾಮ ನಿರ್ದೇಶನಗೊಂಡಿರುವ ಆರ್‌.ಶಂಕರ್‌ಗೆ ಸಚಿವ ಸ್ಥಾನ ನೀಡದಂತೆ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರಿನ ವಕೀಲ ಎ.ಎಸ್‌.ಹರೀಶ ಎಂಬುವರು ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಸಚಿವಾಲಯ, ಮುಖ್ಯಮಂತ್ರಿ, ಕಾನೂನು ಇಲಾಖೆ ಹಾಗೂ ಆರ್‌. ಶಂಕರ್‌, ಎ.ಎಚ್‌. ವಿಶ್ವನಾಥ್‌, ಎಂ.ಟಿ.ಬಿ ನಾಗರಾಜ್‌ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ನಡೆ..!

ಬಿಜೆಪಿಯಿಂದ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಗೊಂಡ ಆರ್‌.ಶಂಕರ್‌, ಎಂ.ಟಿ.ಬಿ ನಾಗರಾಜ್‌ ಹಾಗೂ ನಾಮ ನಿರ್ದೇಶನಗೊಂಡಿರುವ ಎಚ್‌.ವಿಶ್ವನಾಥ್‌ ಅವರ ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಈ ಮೂವರು ಸಚಿವ ಹುದ್ದೆ ಪಡೆದುಕೊಳ್ಳಬೇಕಾದರೆ ಮರು ಆಯ್ಕೆಯಾಗಬೇಕು ಎಂದು ಹೇಳಲಾಗಿದೆ. ಆದರೆ, ಈ ಮೂವರು ವಿಧಾನ ಪರಿಷತ್‌ಗೆ ಪ್ರವೇಶ ಮಾಡಿರುವುದು ಮರು ಆಯ್ಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚುರುಕು: ಒಬ್ಬರಿಂದೊಬ್ಬರು ದೆಹಲಿ ದಂಡಯಾತ್ರೆ

ಆದ್ದರಿಂದ ಈ ಮೂವರು ಸಚಿವ ಸಂಪುಟಕ್ಕೆ ಸೇರ್ಪಡೆಯಾದರೆ ಸುಪ್ರೀಂಕೋರ್ಟ್‌ ತೀರ್ಪಿನ ಉಲ್ಲಂಘನೆ ಆಗಲಿದೆ. ಆದ್ದರಿಂದ ಸುಪ್ರೀಂಕೋರ್ಟ್‌ ಆದೇಶ ಪಾಲಿಸಿರುವುದಾಗಿ ಈ ಮೂವರು ಪ್ರಮಾಣಪತ್ರ ಸಲ್ಲಿಸದ ಹೊರತು ಇವರಿಗೆ ಸಚಿವ ಸ್ಥಾನದ ಪ್ರಮಾಣವಚನ ಬೋಧಿಸದಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಆರ್‌. ಶಂಕರ್‌, ಎಂ.ಟಿ.ಬಿ ನಾಗರಾಜ್‌, ಎಚ್‌. ವಿಶ್ವನಾಥ್‌ ಅವರನ್ನು ವಿಧಾನಪರಿಷತ್ತಿಗೆ ನೇಮಕ ಮಾಡಿರುವ ವಿಚಾರದಲ್ಲಿ ಮುಂದುವರಿಯದಂತೆ ಹಾಗೂ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.