ಗೋಕಾಕ[ಡಿ.16]: ತಮ್ಮ ಸಹೋದರ ರಮೇಶ್‌ ಜಾರಕಿಹೊಳಿಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಬುದ್ಧ, ಬಸವ, ಅಂಬೇಡ್ಕರ್‌ ಪರವಾಗಿದ್ದವರು ನಮಗೆ ವೋಟ್‌ ಹಾಕಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್‌ ಅವರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ವೋಟ್‌ ಹಾಕಿದ್ದಾರೆ ಎನ್ನುವ ಮೂಲಕ ಸತೀಶ್‌ ಜಾರಕಿಹೊಳಿ ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಗೋಕಾಕ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬರದಿದ್ದರೆ ರಮೇಶ್‌ ಜಾರಕಿಹೊಳಿ ಮೂರನೇ ನಂಬರ್‌ ಬರ್ತಿದ್ದ. ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ ಬಂದಿದ್ದರಿಂದ ರಮೇಶ್‌ ಗೆದ್ದ. ಕೊನೆಯ ಗಳಿಗೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಆಫೀಸ್‌ ಒತ್ತಡದಿಂದ ಮತಗಳು ಕಡಿಮೆ ಬಂದಿವೆ. ಸೋಲುತ್ತೇವೆ ಎಂದು ಗೊತ್ತಾಗುತ್ತಿದ್ದಂತೆ ಅಂಬಿರಾವ್‌ ಲಕ್ಷಗಟ್ಟಲೇ ಹಣಹಂಚಿಕೆ ಮಾಡಿದರು. ಇನ್ನೂ ಮೂರು ವರ್ಷ ಬಳಿಕವೇ ರಮೇಶ್‌ ಹಳ್ಳಿಗಳಿಗೆ ಬರೋದು ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಲೆಂದೇ ರಮೇಶ್‌ ಸಿದ್ದರಾಮಯ್ಯ ಬಳಿ ಹೋಗಿದ್ದಾರೆ. ಯಡಿಯೂರಪ್ಪರನ್ನೂ ರಮೇಶ್‌ ಬ್ಲ್ಯಾಕ್‌ಮೇಲ್‌ ಮಾಡೋದು ಶತಃಸಿದ್ಧ. ಇದೀಗ ರಮೇಶ್‌ಗೆ ಕುಮಾರಸ್ವಾಮಿಯೂ ಬೇಕಾಗುತ್ತಾನೆ. ಸಂತೆಯಲ್ಲಿ ಆಡು, ಕುರಿ ಖರೀದಿ ಮಾಡಿದಂತೆ ವ್ಯಾಪಾರ ಮಾಡುತ್ತಿದ್ದಾರೆ. ಮೋಸ ಮಾಡೋಕಂತಲೇ ಇವರು ರಾಜಕಾರಣಕ್ಕೆ ಬಂದಿದ್ದಾರೆ ಎಂದು ದೂರಿದರು.