Asianet Suvarna News Asianet Suvarna News

PayMayor campaign ; ಕಾಂಗ್ರೆಸ್ಸಿನ ಮೂವರಿಗೆ ನೋಟಿಸ್‌

  • ‘ಪೇ ಮೇಯರ್‌’: ಕಾಂಗ್ರೆಸ್ಸಿನ ಮೂವರಿಗೆ ನೋಟಿಸ್‌
  • ಮೂವರು ತಲಾ 1 ಕೋಟಿ ಪರಿಹಾರ ಪಾಲಿಕೆಗೆ ಸಂದಾಯ ಮಾಡಿ; ಕ್ಷಮೆಯಾಚಿಸಬೇಕು
  • ಇಲ್ಲದಿದ್ದಲ್ಲಿ ಕ್ರಿಮಿನಲ್‌ ಹಾಗೂ ಸಿವಿಲ್‌ ಕೇಸ್‌ ದಾಖಲಿಸುತ್ತೇನೆ: ಅಂಚಟಗೇರಿ
Pay Mayor Notice to three Congressmen eresh anchatageri rav
Author
First Published Oct 4, 2022, 1:20 PM IST

ಹುಬ್ಬಳ್ಳಿ (ಅ.4) : ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮದಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ‘ಪೇ ಮೇಯರ್‌’ ಅಭಿಯಾನ ನಡೆಸಿದ್ದ ಕಾಂಗ್ರೆಸ್ಸಿನ ಮೂವರು ಮುಖಂಡರಿಗೆ ‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ’ ಮೇಯರ್‌ ಈರೇಶ ಅಂಚಟಗೇರಿ ನೋಟಿಸ್‌ ಜಾರಿ ಮಾಡಿದ್ದಾರೆ. ವಕೀಲರ ಮೂಲಕ ನೋಟಿಸ್‌ ಜಾರಿ ಮಾಡಿರುವ ಅವರು, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಮಾನಹಾನಿಯ ಪರಿಹಾರವಾಗಿ ಮೂವರು ತಲಾ . 1 ಕೋಟಿ ಮಹಾನಗರ ಪಾಲಿಕೆಗೆ ಸಂದಾಯ ಮಾಡಬೇಕು ಎಂದು ತಿಳಿಸಿದ್ದಾರೆ.

ಕಳೆದ ವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಾನಗರ ಪಾಲಿಕೆಯಿಂದ ಪೌರಸನ್ಮಾನ ಆಯೋಜಿಸಲಾಗಿತ್ತು. ಈ ವೇಳೆ ಪೆಂಡಾಲ್‌ ಹಾಕಿದ ಮೇಲೆ ಕೊಟೇಶನ್‌ ಕರೆಯಲಾಗಿದೆ. ದುಂದುವೆಚ್ಚ ಮಾಡಲಾಗಿದೆ. . 1.5 ಕೋಟಿ ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಜತೆಗೆ ಕಾಂಗ್ರೆಸ್‌ ಮುಖಂಡರಾದ ದೀಪಕ ಚಿಂಚೋರೆ, ರಜತ್‌ ಉಳ್ಳಾಗಡ್ಡಿಮಠ ಹಾಗೂ ಮಂಜುನಾಥ ನಡಟ್ಟಿಈ ಮೂವರು ಸಾಮಾಜಿಕ ಜಾಲತಾಣದಲ್ಲಿ ‘ಪೇ ಸಿಎಂ’ ಮಾದರಿಯಲ್ಲಿ ‘ಪೇ ಮೇಯರ್‌’ ಅಭಿಯಾನ ನಡೆಸಿದ್ದರು. ಜತೆಗೆ ಕೆಲ ಬಡಾವಣೆಗಳಲ್ಲೂ ‘ಪೇ ಮೇಯರ್‌’ ಪೋಸ್ಟರ್‌ಗಳನ್ನು ಅಂಟಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರಿಗೆ ಮೇಯರ್‌ ದೂರನ್ನು ಕೊಟ್ಟಿದ್ದರು. ಇದೀಗ ವಕೀಲರ ಮೂಲಕ ನೋಟಿಸ್‌ ಜಾರಿ ಮಾಡಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?

ಯಾವುದೇ ಆಧಾರವಿಲ್ಲದೇ ರಾಷ್ಟ್ರಪತಿಗಳ ಪೌರಸನ್ಮಾನದ ಕುರಿತು ಮಹಾಪೌರರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರಿಗೂ ಮೇಯರ್‌ ತಮ್ಮ ವಕೀಲರ ಮೂಲಕ ನೋಟಿಸ್‌ ಜಾರಿ ಮಾಡಿದ್ದಾರೆ. ಮಾನಹಾನಿಗೆ ಪರಿಹಾರವಾಗಿ ಮೂವರು ತಲಾ . 1 ಕೋಟಿ (ಒಟ್ಟು . 3 ಕೋಟಿ) ಹುಬ್ಬಳ್ಳಿ-ಧಾರವಾಡ ಜನತೆಯ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಪಾಲಿಕೆಗೆ ಸಂದಾಯ ಮಾಡಬೇಕು. ಅಲ್ಲದೇ, ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿದ್ದಕ್ಕಾಗಿ ಬೇಷರತ್ತಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಮೂವರ ಮೇಲೆ ಕ್ರಿಮಿನಲ್‌ ಹಾಗೂ ಸಿವಿಲ್‌ ಪ್ರಕರಣ ದಾಖಲಿಸುತ್ತೇನೆ ಎಂದು ಮೇಯರ್‌ ಈರೇಶ ಅಂಚಟಗೇರಿ ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios