Asianet Suvarna News Asianet Suvarna News

‘ಪಂಚರತ್ನ ಫಲ’ ಬಗ್ಗೆ ಜೆಡಿಎಸ್‌ ಸಮೀಕ್ಷೆ..!

ರಥಯಾತ್ರೆಗೆ ಬರುವ ಸಹಸ್ರಾರು ಜನ ಪಕ್ಷಕ್ಕೆ ಮತ ಹಾಕ್ತಾರಾ? ಅವರ ಅಂತರಂಗ ಏನು?, ನಾಡಿಮಿಡಿತ ತಿಳಿಯಲು ಯಾತ್ರೆ ಬೆನ್ನಲ್ಲೇ ಹಲವು ತಂಡಗಳಿಂದ ಸಮೀಕ್ಷೆ: ಎಚ್‌ಡಿಕೆ ತಂತ್ರ

Pancharatna Yatra Successful in Karnataka JDS Survey   grg
Author
First Published Dec 1, 2022, 7:00 AM IST

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಡಿ.01):  ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ಗಿಂತ ಮೊದಲೇ ರಾಜ್ಯಾದ್ಯಂತ ಯಾತ್ರೆ ಕೈಗೊಂಡಿರುವ ಜೆಡಿಎಸ್‌, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಜನರ ಮನ ಗೆಲ್ಲಲು ಕಸರತ್ತು ಆರಂಭಿಸಿದೆ. ಯಾತ್ರೆಯಲ್ಲಿ ಸಹಸ್ರಾರು ಜನರು ಸೇರಿದರೆ ಸಾಲದು, ಅವರ ನಾಡಿಮಿಡಿತ ಅರ್ಥಮಾಡಿಕೊಳ್ಳಲು ತಂಡಗಳನ್ನು ರಚಿಸುವ ಮೂಲಕ ಮತಗಳನ್ನಾಗಿ ಪರಿವರ್ತಿಸುವತ್ತ ದಳಪತಿಗಳು ಕಾರ್ಯೋನ್ಮುಖವಾಗಿದ್ದಾರೆ.

ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಪಣತೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ‘ಪಂಚರತ್ನ ರಥಯಾತ್ರೆ’ ಮೂಲಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಪ್ರತಿ ಕ್ಷೇತ್ರದಲ್ಲಿಯೂ ನಡೆಯುವ ಸಮಾವೇಶದಲ್ಲಿ ಸಹಸ್ರಾರು ಜನರು ಸೇರುತ್ತಾರೆ. ಆದರೆ, ಅದು ಮತಗಳಾಗಿ ಪರಿವರ್ತನೆ ಮಾಡುವುದೇ ಜೆಡಿಎಸ್‌ಗೆ ದೊಡ್ಡ ಸವಾಲು. ಈ ಸವಾಲನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ತಂಡಗಳನ್ನು ರಚಿಸಲಾಗಿದೆ. ಸಮಾವೇಶದ ವೇಳೆ ಮತ್ತು ನಂತರ ಜನತೆಯ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ತಂಡಗಳು ಕಾರ್ಯ ನಿರ್ವಹಿಸುತ್ತಿದೆ. ಜನರ ಅಭಿಪ್ರಾಯವನ್ನು ಈ ತಂಡವು ಪಡೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Karnataka assembly election: ಕೋಟೆ ನಾಡಲ್ಲಿ ಬಿಜೆಪಿಗೆ ಕೈ, ಜೆಡಿಎಸ್‌ ಸವಾಲು

ಸಮೀಕ್ಷೆ ಹೇಗೆ?:

ಸಮಾವೇಶದ ಸಮಯದಲ್ಲಿ ಒಂದು ತಂಡವು ಜನರಿಂದ ಅಭಿಪ್ರಾಯಗಳನ್ನು ಕ್ರೋಡೀಕರಿಸಿದರೆ, ಮತ್ತೊಂದು ತಂಡವು ಸಮಾವೇಶದ ಬಳಿಕ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ. ಕ್ಷೇತ್ರದಲ್ಲಿ ಬೇರೆ ಬೇರೆ ವರ್ಗದ ಜನತೆ, ಮಹಿಳೆಯರು, ಯುವಕರು, ವಯೋವೃದ್ಧರು ಸೇರಿದಂತೆ ಎಲ್ಲರಿಂದಲೂ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ನಂತರ ಎರಡು ಅಭಿಪ್ರಾಯಗಳನ್ನು ಒಗ್ಗೂಡಿಸಲಾಗುತ್ತದೆ. ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿ ಬಂದ ಅಭಿಪ್ರಾಯಗಳ ಬಗ್ಗೆ ಚಿಂತನ-ಮಂಥನ ಮಾಡಲಾಗುತ್ತದೆ. ಇದರಿಂದ ಕ್ಷೇತ್ರದ ಬಗ್ಗೆ ಚಿತ್ರಣ ಲಭ್ಯವಾಗಲಿದ್ದು, ಪಕ್ಷದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ. ನ್ಯೂನತೆಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಚುನಾವಣೆ ವೇಳೆಗೆ ಬಲಗೊಳಿಸುವುದು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಕುಮಾರಸ್ವಾಮಿ ನೇತೃತ್ವದಲ್ಲಿ ಈ ಮೊದಲು ರಾಜ್ಯದಲ್ಲಿ ಜನತಾ ಜಲಧಾರೆ ಯಾತ್ರೆ ಹಮ್ಮಿಕೊಳ್ಳಲಾಯಿತು. ಈ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಬೆಂಗಳೂರಿಗೆ ಸೀಮಿತವಾಗಿರುವಂತೆ ಜನತಾ ಮಿತ್ರ ಯಾತ್ರೆ ಕೈಗೊಂಡರು. ಈ ಯಾತ್ರೆಗೂ ಬೆಂಗಳೂರಿನ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೀಗ ಆರೋಗ್ಯ, ಶಿಕ್ಷಣ, ವಸತಿ ಸೇರಿದಂತೆ ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಪಂಚರತ್ನ ಯಾತ್ರೆ ನಡೆಸಲಾಗುತ್ತಿದೆ. ಯಾತ್ರೆಗೆ ನಿರೀಕ್ಷಿತ ಜನಬೆಂಬಲ ಸಿಗುತ್ತಿದೆ. ಇದನ್ನು ಮತಗಳನ್ನಾಗಿ ಪರಿವರ್ತನೆ ಮಾಡಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವುದೇ ಜೆಡಿಎಸ್‌ ಧ್ಯೇಯವಾಗಿದೆ.

ಅಸ್ಪೃಶ್ಯತೆ ಹೇಳಿಕೆಯನ್ನು ತಿರುಚಲಾಗುತ್ತಿದೆ : ಕುಮಾರಸ್ವಾಮಿ ಆಕ್ರೋಶ

ಇನ್ನು, ಸಮಾವೇಶಗಳ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷ ಮತ್ತು ಜನರ ನಡುವೆ ಸಂಪರ್ಕ ಕೊರತೆ ಇರುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಸಂಪರ್ಕ ಕೊರತೆಯಿಂದಾಗಿಯೇ ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ಗಮನಿಸಿದ್ದಾರೆ. ಹೀಗಾಗಿಯೇ ಆ ಕೊರತೆ ನೀಗಿಸಲು ಆದ್ಯತೆ ನೀಡಿದ್ದಾರೆ. ಪಕ್ಷ ಮತ್ತು ಜನರ ನಡುವೆ ಸಂಪರ್ಕ ಇರಬೇಕು. ಸಹಸ್ರಾರು ಜನ ಸೇರುತ್ತಿರುವುದರಿಂದ ಅವುಗಳನ್ನು ಮತಗಳಾಗಲು ಜನರೊಂದಿಗೆ ಸ್ಥಳೀಯ ನಾಯಕರು ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಪಕ್ಷ ಮತ್ತು ಜನರ ನಡುವೆ ಸಂಪರ್ಕ ಇಟ್ಟುಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ.

ಪಂಚರತ್ನ ಫಲ ಸಮೀಕ್ಷೆ ಹೇಗೆ?

- ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆಯ ಫಲಿತಾಂಶದ ಬಗ್ಗೆ ಅಧ್ಯಯನ
- ವಿವಿಧ ತಂಡಗಳಿಂದ ರಥಯಾತ್ರೆಯ ಊರುಗಳಲ್ಲಿ ವಿವಿಧ ವರ್ಗದ ಜನರಿಗೆ ಪ್ರಶ್ನಾವಳಿ
- ಯಾತ್ರೆಗೆ ಬರುವ ಜನರು ಮುಂದೆ ಮತ ಹಾಕುತ್ತಾರೆಯೇ ಎಂದು ತಿಳಿದುಕೊಳ್ಳಲು ಯತ್ನ
- ಯಾತ್ರೆ ಸಮಯದಲ್ಲಿ ಒಂದು ತಂಡದಿಂದ, ನಂತರ ಇನ್ನೊಂದು ತಂಡದಿಂದ ಸಮೀಕ್ಷೆ
- ನಕಾರಾತ್ಮಕ ಪ್ರತಿಕ್ರಿಯೆ ಬಂದರೆ ಪಕ್ಷದ ನ್ಯೂನತೆ ಸರಿಪಡಿಸಿಕೊಳ್ಳಲು ಕುಮಾರಸ್ವಾಮಿ ಒಲವು
- ಜೆಡಿಎಸ್‌ ಮತ್ತು ಜನಸಾಮಾನ್ಯರ ನಡುವೆ ಸಂಪರ್ಕ ಕೊರತೆ ಇರುವ ಬಗ್ಗೆ ಈಗಾಗಲೇ ಮಾಹಿತಿ
 

Follow Us:
Download App:
  • android
  • ios