2023ರ ವಿಧಾ​ನ​ಸಭಾ ಚುನಾ​ವಣೆಯ ಪ್ರಚಾರ ತಂತ್ರದ ಭಾಗ​ವಾಗಿ ಜೆಡಿ​ಎಸ್‌ ನಡೆ​ಸು​ತ್ತಿ​ರುವ ‘ಪಂಚ​ರತ್ನ ರಥ​ಯಾತ್ರೆ’ ವಿಭಿನ್ನ ಬಗೆಯ ಬೃಹತ್‌ ಗಾತ್ರದ ಹಾರ​ಗಳ ಮೂಲಕ ಗಮನ ಸೆಳೆ​ಯು​ತ್ತಿದೆ 32 ದಿನ, ಎಚ್‌ಡಿಕೆಗೆ 500 ಕ್ರೇನ್‌ ಹಾರ! ಪಂಚರತ್ನ ಯಾತ್ರೆ ವೇಳೆ ಕಬ್ಬು, ಭತ್ತ, ರಾಗಿ, ಹಣ್ಣು, ಸೊಪ್ಪು ಸೇರಿ ಬಗೆಬಗೆ ಹಾರ. ಪ್ರತಿ ಹಾರಕ್ಕೆ .1 ಲಕ್ಷವರೆಗೂ ಖರ್ಚು ಹಾರ ತಯಾರಕರು, ಕ್ರೇನ್‌ ಮಾಲೀಕರಿಗೆ ಒಳ್ಳೆ ಬಿಸಿನೆಸ್‌! 

ವಿಶೇಷ ವರದಿ

 ಬೆಂಗಳೂರು (ಡಿ.29) : 2023ರ ವಿಧಾ​ನ​ಸಭಾ ಚುನಾ​ವಣೆಯ ಪ್ರಚಾರ ತಂತ್ರದ ಭಾಗ​ವಾಗಿ ಜೆಡಿ​ಎಸ್‌ ನಡೆ​ಸು​ತ್ತಿ​ರುವ ‘ಪಂಚ​ರತ್ನ ರಥ​ಯಾತ್ರೆ’ ವಿಭಿನ್ನ ಬಗೆಯ ಬೃಹತ್‌ ಗಾತ್ರದ ಹಾರ​ಗಳ ಮೂಲಕ ಗಮನ ಸೆಳೆ​ಯು​ತ್ತಿದೆ. ನವೆಂಬರ್‌ 1ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರು​ಡು​ಮಲೆ ಮಹಾಗಣ​ಪತಿ ಸನ್ನಿ​ಧಿ​ಯಲ್ಲಿ ಆರಂಭಗೊಂಡು ಮಳೆಯ ಕಾರಣ ತಾತ್ಕಾ​ಲಿ​ಕ​ವಾಗಿ ಮುಂದೂ​ಡ​ಲಾ​ಗಿದ್ದ ಯಾ​ತ್ರೆಗೆ, ನವೆಂಬರ್‌ 18ರಂದು ದೇವೇ​ಗೌ​ಡರು ಮುಳಬಾಗಿಲಿನಲ್ಲಿ ಅಧಿ​ಕೃ​ತ​ವಾಗಿ ಚಾಲನೆ ನೀಡಿ​ದ್ದರು.

ಯಾತ್ರೆ 32 ದಿನಗಳನ್ನು ಪೂರೈಸಿದ್ದು, ಹಳೆ ಮೈಸೂರು ಭಾಗದ 6 ಜಿಲ್ಲೆಗಳ 32 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚಾರ ಮಾಡಿದೆ. ರಥ​ಯಾತ್ರೆ ಸಾಗಿದ ಮಾರ್ಗ​ದು​ದ್ದಕ್ಕೂ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಅವರಿಗೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿಜೊತೆಗೆ, ಪ್ರಾದೇ​ಶಿಕ ವೈಶಿ​ಷ್ಟ್ಯತೆ ಸಾರುವ ವಸ್ತುಗಳ ಹಾರಗಳನ್ನು ಕ್ರೇನ್‌ಗಳ ಮೂಲಕ ಹಾಕಿ ಸ್ವಾಗತ ಕೋರಲಾಗುತ್ತಿದೆ.

Pancharatna Yatre: ಬಡವರ ಕಲ್ಯಾಣವೇ ಪಂಚರತ್ನ ಯೋಜನೆಯ ಗುರಿ: ಕುಮಾರಸ್ವಾಮಿ

ಈವರೆಗೆ ಚೆಂಡು ಹೂವು, ಮಲ್ಲಿಗೆ, ಸೇವಂತಿಗೆ, ಕಡಲೆಕಾಯಿ, ಚಕ್ಕೋತ, ಅನಾನಸ್‌, ಕರ್ಬೂಜಾ, ಮೂಸಂಬಿ, ದ್ರಾಕ್ಷಿ, ಸೇಬು, ಕೊಬ್ಬರಿ, ಗೋಡಂಬಿ, ಕಬ್ಬು, ಮೆಕ್ಕೆಜೋಳ, ಬೆಲ್ಲ, ನುಗ್ಗೆಸೊಪ್ಪು, ಗೆಡ್ಡೆಕೋಸು, ಸೀಮೆ ಬದನೆ, ರುದ್ರಾಕ್ಷಿ, ಭತ್ತ, ರಾಗಿ ತೆನೆ, ಮುತ್ತಿನ ಹಾರ ಸೇರಿದಂತೆ 42ಕ್ಕೂ ಹೆಚ್ಚು ವಿಭಿನ್ನ ವಸ್ತುಗಳ, 495ಕ್ಕೂ ಹೆಚ್ಚು ಹಾರಗಳನ್ನು ಕ್ರೇನ್‌ಗಳ ಮೂಲಕ ಹಾಕಿ ಜನರು ಅಭಿಮಾನ ಮೆರೆದಿದ್ದಾರೆ. ಬುಧವಾರ ತುಮಕೂರು ಜಿಲ್ಲೆಯ ಕಂಚಿಗಾನಹಳ್ಳಿಯಲ್ಲಿ ಶಾಲಾ ಮಕ್ಕಳ ಬ್ಯಾಗುಗಳಿಂದ ತಯಾರಿಸಿದ ಹಾರ ಹಾಕಲಾಯಿತು. ಹಾರದ ಮೇಲೆ ‘ಸರ್ಕಾರಿ ಶಾಲೆಗಳನ್ನು ಹೈಟೆಕ್‌ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್‌ ಶಿಕ್ಷಣ ಬೇಕ್ರಯ್ಯ’ ಎಂಬ ಒಕ್ಕಣೆ ಬರೆಯಲಾಗಿತ್ತು.

ವಿಭಿನ್ನ ಹಾರಗಳು:

ಕೋಲಾರದಲ್ಲಿ 3 ಟನ್‌ ತೂಕದ ಟೊಮೆಟೋ ಹಾರ, ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾರಹಳ್ಳಿಯಲ್ಲಿ ಚಕ್ಕೋತ ಹಾರ, ಹಾರೋಹಳ್ಳಿ, ವೆಂಕಟಗಿರಿಕೋಟೆಯಲ್ಲಿ ದ್ರಾಕ್ಷಿ ಹಾರ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ, ಬಿಜ್ಜವಾರದಲ್ಲಿ ಬಜ್ಜಿ ಮೆಣಸಿನಕಾಯಿ ಹಾರ, ಮಂಡ್ಯ, ತುಮಕೂರಿನ ಶಿರಾಗೇಟ್‌ ಬಳಿ ರಾಗಿ ಹಾರ, ತುರುವೇಕೆರೆಯಲ್ಲಿ ಎಳನೀರು, ಸಿಹಿ ಕುಂಬಳಕಾಯಿ, ಹೊಂಬಾಳೆ ಹಾರ, ತುಮಕೂರಿನ ಬಾಣಸಂದ್ರದಲ್ಲಿ ಡ್ರ್ಯಾಗನ್‌ ಫä್ರಟ್ಸ್‌ ಹಾರ, ದೊಡ್ಡರಸಿನಕೆರೆಯಲ್ಲಿ ನವಿಲುಕೋಸು, ನುಗ್ಗೆಸೊಪ್ಪಿನ ಹಾರ, ಮಧುಗಿರಿ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಕೊರಟಗೆರೆಯಲ್ಲಿ ಉದ್ದಿನವಡೆ ಹಾರ, ಪಾವಗಡದಲ್ಲಿ ಅನಾನಸ್‌ ಹಾರ, ಶಿರಾದ ಕೆಂಚಗಾನಹಳ್ಳಿಯಲ್ಲಿ ಕೊತ್ತಂಬರಿ ಸೊಪ್ಪಿನ ಹಾರ, ರಾಮನಗರದ ಹಜರತ್‌ ಫಿರೆನ್‌ ಷಾ ವಾಲಿ ದರ್ಗಾದಲ್ಲಿ ಬೃಹತ್‌ ಬಾದಾಮಿ ಹಾರ, ಶಿಡ್ಲಘಟ್ಟ, ಕನಕಪುರದಲ್ಲಿ ರೇಷ್ಮೆಗೂಡಿನ ಹಾರ, ಕನಕಪುರದ ಹೆಬ್ಬಾಗಿಲಿನಲ್ಲಿ ಬಾಳೆಗೊನೆ ಹಾರ ಹಾಕಿ ಸ್ವಾಗತ ಕೋರಲಾಗಿದೆ.

ಮದ್ದೂರಿನ ತೂಬಿನಕೆರೆ ಗೇಟ್‌ನಲ್ಲಿ ಜೋಳದ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಮರಳಗಾಲ, ಮಂಡ್ಯ, ಗುರುದೇವನಹಳ್ಳಿ, ಸಾತನೂರು ವೃತ್ತದಲ್ಲಿ ಕಬ್ಬಿನ ಜಲ್ಲೆ ಹಾರ, ಮೇಲುಕೋಟೆಯ ಸುಂಕಾ ತೊಣ್ಣೂರಿನಲ್ಲಿ ಚೆರ್ರಿ ಹಣ್ಣಿನ ಹಾರ, ಹುಲಿಕೆರೆಯಲ್ಲಿ ಬೃಹತ್‌ ರುದ್ರಾಕ್ಷಿ ಹಾರ, ಕೆ.ಆರ್‌.ಪೇಟೆಯ ಹೊಸಹೊಳಲು, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರದ ಉಪ್ತುಕುಂಟೆಯಲ್ಲಿ ಕನಕಾಂಬರ, ಸೇಬಿನ ಹಾರ, ನಾಗಮಂಗಲದ ಹೊನ್ನಾವರ, ಬಿಂಡಿಗನವಿಲೆ, ಕೆ.ಆರ್‌.ಪೇಟೆಯಲ್ಲಿ ಕೊಬ್ಬರಿ ಹಾರ, ನಾಗಮಂಗಲದ ಬೆಳ್ಳೂರಿನಲ್ಲಿ ಎಲೆಕೋಸಿನ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಭತ್ತದ ಹಾರ, ಚನ್ನಪಟ್ಟಣದಲ್ಲಿ ಬೊಂಬೆಗಳ ಹಾರ, ಕೆ.ಆರ್‌.ಪೇಟೆ, ಮಳವಳ್ಳಿಯ ಹಲಗೂರು, ಕಿರುಗಾವಲಿನಲ್ಲಿ ಬೆಲ್ಲದ ಹಾರ, ಭಾರತಿನಗರದಲ್ಲಿ ಮೆಕ್ಕೆಜೋಳದ ಹಾರ, ದೊಡ್ಡರಸಿನಕೆರೆಯಲ್ಲಿ ಎಳನೀರು, ನವಿಲುಕೋಸು, ನುಗ್ಗೆಸೊಪ್ಪಿನ ಹಾರ ಹಾಕಿ ಅಭಿಮಾನ ತೋರಲಾಯಿತು.

ಬಿಜೆಪಿ ಸರ್ಕಾರಕ್ಕೆ ಬೆನ್ನು ಇಲ್ಲ, ಮೂಳೆನೂ ಇಲ್ಲ: ಎಚ್‌ಡಿಕೆ

ಕುಶಲ ಕರ್ಮಿಗಳಿಗೆ ಕೆಲಸ:

ಮಂಡ್ಯದ ಹುಲಿ​ಕೆರೆಯಲ್ಲಿ ಅಭಿ​ಮಾ​ನಿ​ಗಳು ನೀಡಿದ ರುದ್ರಾಕ್ಷಿ ಮಾಲೆ​ಯನ್ನು ಸಿದ್ಧ​ಗಂಗಾ ಮಠದ ಶಿವೈ​ಕ್ಯ​ ಶ್ರೀ ಡಾ.ಶಿ​ವ​ಕು​ಮಾರ ಸ್ವಾಮೀ​ಜಿ​ಗಳ ಚರ​ಣ​ಗಳಿಗೆ ಕುಮಾರಸ್ವಾಮಿ ಅವರು ಸಮ​ರ್ಪಣೆ ಮಾಡಿ​ದರು. ಕಬ್ಬು, ರಾಗಿ, ಬೆಲ್ಲ ಸೇರಿ​ದಂತೆ ವಿಭಿನ್ನ ಹಾರ​ಗಳ ತಯಾ​ರಿ​ಕೆಗೆ ಕನಿಷ್ಠ 30 ಸಾವಿರದಿಂದ 1 ಲಕ್ಷ ರುಪಾ​ಯಿ​ವ​ರೆಗೂ ಖರ್ಚಾ​ಗು​ತ್ತಿದ್ದು, ಹಾರ ತಯಾ​ರಿ​ಸುವ ಕುಶಲ ಕರ್ಮಿ​ಗ​ಳಿಗೂ ಇದರಿಂದ ಕೆಲಸ ಸಿಕ್ಕಿ​ದಂತಾ​ಗಿದೆ. ಜೆಸಿಬಿ, ಕ್ರೇನ್‌ಗಳ ಮಾಲಿಕರಿಗೂ ಆದಾಯ ಬರುತ್ತಿದೆ ಎನ್ನುವುದು ಜೆಡಿಎಸ್‌ ನಾಯಕರ ಅಭಿಮತ.