ಮೈಸೂರು, (ನ.29): ಬಸವ ಜಯಂತಿ, ಬಸವ ಭಾವಚಿತ್ರ ಸರ್ಕಾರಿ‌ ಕಚೇರಿಗಳಲ್ಲಿ ಅಳವಡಿಸಲು ಸಿದ್ದರಾಮಯ್ಯನವರೇ ಬರ ಬೇಕಿತ್ತು, ಆದ್ರೆ ಈ ಹಿತಾಸಕ್ತಿ ನಮ್ಮ ಸಮುದಾಯದ ನಾಯಕರಿಗೆ ಇಲ್ಲ ಎಂದು ಹೇಳುವ ಮೂಲಕ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಬಿ.ಎಸ್.ಯಡಿಯೂರಪ್ಪನವರಿಗೆ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ವಚನಾನಂದ ಸ್ವಾಮೀಗಳ‌ ನೇತೃತ್ವದಲ್ಲಿ ಮೈಸೂರು ಮಂಡ್ಯ ಚಾಮರಾಜ ನಗರ ಲಿಂಗಾಯತಗೌಡ ಸಮುದಾಯ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಎಂದರು. 

ತಪ್ಪಾಗಿದ್ರೆ ಹೊಟ್ಟೆಗೆ ಹಾಕೊಳ್ಳಿ: ಬಿಎಸ್‌ವೈ ಬಳಿ ಕ್ಷಮೆಯಾಚಿಸಿದ ಸ್ವಾಮೀಜಿ

ಯಡಿಯೂರಪ್ಪನವರು ಲಿಂಗಾಯತ ಸಮುದಾಯವನ್ನ ಹಿಂದುಳಿದ ವರ್ಗಕ್ಕೆ ಸೇರಿಸಬೇಕು. ಹಿಂದುಳಿದ ವರ್ಗದ ಸವಲತ್ತು ನಮ್ಮ ಸಮುದಾಯಕ್ಕೆ ಸಿಗಬೇಕು. ಅದು ಯಡಿಯೂರಪ್ಪ ಅವರ ಬದ್ದತೆ. ಸಮುದಾಯದ ಜನಮಾನಸದಲ್ಲಿ ಉಳಿಯಬೇಕಾದರೆ ಈ ಕೆಲಸ ಮಾಡಬೇಕು. ನೀವು ಈಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಿಮ್ಮ ಬದ್ದತೆ ಪ್ರದರ್ಶಿಸಿ ಎಂದು ಆಗ್ರಹಿಸಿದರು.

ಸಾಮಾಜಿಕ, ಶೈಕ್ಷಣಿಕವಾಗಿ ನಮ್ಮ ಸಮುದಾಯ ಹಿಂದುಳಿದಿದೆ. ಮೈಸೂರು ಭಾಗದಲ್ಲಿ ಲಿಂಗಾಯತ, ಗೌಡ ಸಮಾಜ ಇದೆ. ರಾಜ್ಯದಲ್ಲಿ ಒಂದೊಂದು ಭಾಗದಲ್ಲಿ ವಿವಿಧ ಹೆಸರುಗಳಿಂದ ಲಿಂಗಾಯತರು ಗುರುತಿಸಿಕೊಂಡಿದ್ದೇವೆ. ಆದರೆ ನಾವೆಲ್ಲ ಒಂದೇ, ನಮ್ಮ ಸಮಾಜ ಸಾಕಷ್ಟು ವರ್ಷಗಳಿಂದ ಅವಕಾಶ ವಂಚಿತಗೊಂಡಿದೆ. ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಶುರುವಾಗಿದೆ ಎಂದು ತಿಳಿಸಿದರು.