ಸಚಿವ ಯೋಗೇಶ್ವರ್ ವಿರುದ್ಧ ಸ್ವಪಕ್ಷೀಯರಿಂದಲೇ ವಾಗ್ದಾಳಿ!
* ‘ಅಂಬಾರಿ ಆನೆ’ ಹೇಳಿಕೆಗೆ ನಿರಾಣಿ, ಬಿಸಿಪಾ, ಶೆಟ್ಟರ್ ಕಿಡಿ
* ಸಚಿವ ಯೋಗೇಶ್ವರ್ ವಿರುದ್ಧ ಸ್ವಪಕ್ಷೀಯರಿಂದಲೇ ವಾಗ್ದಾಳಿ
* ಯೋಗೇಶ್ವರ್ ಅವರಿಂದಲೇ ವಿವರಣೆ ಪಡೆಯುವೆ: ಕಟೀಲ್
ಬೆಂಗಳೂರು(ಜು.06): ‘ಸಿಎಂ ಹುದ್ದೆ ಎಂಬುದು ಅಂಬಾರಿ ಹೊರುವ ಆನೆ ಇದ್ದಂತೆ. ಇನ್ನೇನು ದಸರಾ ಸಮೀಪಿಸುತ್ತಿರುವುದರಿಂದ ಅಷ್ಟರಲ್ಲಿ ಹೈಕಮಾಂಡ್‌ಗೆ ಅಂಬಾರಿ ಹೊರುವ ಆನೆ ಸಿಗಲಿದೆ’ ಎಂಬುದಾಗಿ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾರ್ಮಿಕ ಮಾತುಗಳನ್ನಾಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಚಿವರಾದ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್ ಆದಿಯಾಗಿ ಅನೇಕ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಯೋಗೇಶ್ವರ್ ಅವರಿಂದಲೇ ಹೇಳಿಕೆ ಬಗ್ಗೆ ವಿವರಣೆ ಪಡೆಯುವುದಾಗಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಈ ಕುರಿತಾಗಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕಟೀಲ್, ಸಿ.ಪಿ.ಯೋಗೇಶ್ವರ್ ಯಾವ ರೀತಿಯಲ್ಲಿ ಭಾವನೆ ವ್ಯಕ್ತಪಡಿಸಿದ್ದಾರೋ ಗೊತ್ತಿಲ್ಲ. ನಮ್ಮ ಮಂತ್ರಿಗಳು, ಶಾಸಕರು ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು. ಯೋಗೇಶ್ವರ್ ಹೇಳಿಕೆ ಬಗ್ಗೆ ಅವರಿಂದಲೇ ವಿವರಣೆ ಪಡೆಯುತ್ತೇನೆ ಎಂದಿದ್ದಾರೆ.
ಪಕ್ಷದ ಹಿರಿಯ ಮುಖಂಡರಾಗಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಹ ಯೋಗೇಶ್ವರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಹೈಕಮಾಂಡ್ ಸ್ಪಷ್ಟನಿರ್ದೇಶನ ನೀಡಿದೆ. ಆದರೂ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದನ್ನು ಹೈಕಮಾಂಡ್ ಗಮನಿಸುತ್ತಿದೆ ಮತ್ತು ಸರಿಯಾದ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿರುವ ಸಚಿವ ಮುರುಗೇಶ ನಿರಾಣಿ, ‘ನೋಡುವವರ ಕಣ್ಣಿಗೆ ಆನೆ ಹೇಗೆ ಹೇಗೋ ಕಾಣಬಹುದು. ಅದು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ಬಾಲ, ಸೊಂಡಿಲು, ಕಾಲು ಮುಟ್ಟಿನೋಡಿದವರಿಗೂ ಕೆಲ ಅನುಭವಗಳು ಆಗುತ್ತವೆ’ ಎಂದು ಯೋಗೇಶ್ವರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರಿಂದಲೇ ನಾವು ಶಾಸಕ, ಸಚಿವರಾಗಿದ್ದೇವೆ. ಅವರಾಗಲಿ ಅಥವಾ ಕುಟುಂಬದವರಾಗಲಿ ಎಂದೂ ನನ್ನ ಖಾತೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದಿದ್ದಾರೆ.
ಇದೇ ವೇಳೆ ಯೋಗೇಶ್ವರ್ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಬಿ.ಸಿ.ಪಾಟೀಲ್, ನಾವು ಯೋಗೇಶ್ವರ್ ಅವರಷ್ಟುಬುದ್ಧಿವಂತರಲ್ಲ. ಅಂಬಾರಿ ಹೊರುವ ಶಕ್ತಿ ಆನೆಗಿದ್ದರೆ ಆನೆಯೂ ಹೊರಬಹುದು, ಆನೆ ಮರಿಯೂ ಹೊರಬಹುದು. ಯೋಗೇಶ್ವರ್ ಹೇಳಿದ ಕತೆ ಬಗ್ಗೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ‘ಲದ್ದಿ ಎತ್ತೋರೆಲ್ಲಾ ಆನೆ, ಅಂಬಾರಿ ಬಗ್ಗೆ ನಿರ್ಣಯಿಸಲು ಸಾಧ್ಯವೇ? ಜನ, ಅಂಬಾರಿ ಮೇಲೆ ರಾಜ ಕುಮಾರನನ್ನಲ್ಲದೇ ರಾಜದ್ರೋಹಿಯನ್ನು ಕೂರಿಸುತ್ತಾರೆಯೇ? ನೆಲೆ ಇಲ್ಲದ ರಾಜಕೀಯ ದಳ್ಳಾಳಿ ಮಾತಿಗೆ ಯಾವ ಕಿಮ್ಮತ್ತೂ ಇಲ್ಲ’ ಎಂದು ಟ್ವೀಟಿಸಿದ್ದಾರೆ.
ಯೋಗಿ ಹೇಳಿದ್ದೇನು?
ಸಿಎಂ ಹುದ್ದೆ ಎಂಬುದು ದಸರಾ ಅಂಬಾರಿ ಹೊರುವ ಆನೆ ಇದ್ದಂತೆ. ಅದು ಶಾಶ್ವತವಲ್ಲ. ಆಗಾಗ ಬದಲಿಸಲಾಗುತ್ತದೆ. ಅರ್ಜುನ ಅಂಬಾರಿ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸಲು ಸಾಧ್ಯವಿಲ್ಲ. ಕರ್ನಾಟಕ ಆನೆ ಮತ್ತು ಹುಲಿಗಳಿಗೆ ಹೆಸರುವಾಸಿ. ಇನ್ನೇನು ದಸರಾ ಸಮೀಪಿಸುತ್ತಿರುವುದರಿಂದ ಹೈಕಮಾಂಡ್‌ಗೆ ಅಂಬಾರಿ ಹೊರುವ ಆನೆ ಸಿಗಲಿದೆ.