ಬೆಂಗಳೂರು (ಅ.14):  ಹೊಸಕೋಟೆಯ ಪಕ್ಷೇತರ ಶಾಸಕ ಹಾಗೂ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ ಪುತ್ರ ಶರತ್‌ ಬಚ್ಚೇಗೌಡ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸ್ಥಳೀಯ ನಾಯಕರು ಹಾಗೂ ಪಕ್ಷದ ಎಲ್ಲ ವರ್ಗಗಳ ಅಭಿಪ್ರಾಯ ಸಂಗ್ರಹಕ್ಕೆ ಮಾಜಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ 10 ಮಂದಿ ಸದಸ್ಯರ ಸಮಿತಿಯೊಂದನ್ನು ಕೆಪಿಸಿಸಿ ರಚಿಸಿದೆ.

ಕೆಪಿಸಿಸಿ ನಾಯಕತ್ವವು ಶರತ್‌ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಉತ್ಸುಕವಾಗಿದೆ. ಆದರೆ, ಹಿಂದುಳಿದ ವರ್ಗಕ್ಕೆ ಸೇರಿರುವ ಕ್ಷೇತ್ರವೊಂದನ್ನು ಒಕ್ಕಲಿಗರಿಗೆ ನೀಡುವ ಬಗ್ಗೆ ಪಕ್ಷದ ಒಂದು ವಲಯದಿಂದ ಆಕ್ಷೇಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮುಂದಿನ ಹೆಜ್ಜೆ ಇಡುವ ಮೊದಲು ಎಲ್ಲರ ಅಭಿಪ್ರಾಯ ಪಡೆಯಲು ಈ ಸಮಿತಿ ನೇಮಕ ಮಾಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಶರತ್‌ ಬಚ್ಚೇಗೌಡ ಅವರ ಪಕ್ಷ ಸೇರ್ಪಡೆ ಕುರಿತು ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಶರತ್‌ ಬಚ್ಚೇಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಅಂತಿಮವಾಗಿ ನಿಮ್ಮೆಲ್ಲರ ಅಭಿಪ್ರಾಯ ಒಳಗೊಂಡ ಪ್ರಸ್ತಾವನೆಯನ್ನು ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದು ಹೇಳಿದರು ಎನ್ನಲಾಗಿದೆ. ಈ ವೇಳೆ ಸಭೆಯಲ್ಲಿದ್ದ ಕೆಲ ನಾಯಕರಿಂದ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ಡಿಕೆಶಿ ಮಾಸ್ಟರ್ ಸ್ಟ್ರೋಕ್: ಬಿಜೆಪಿ MP ಸುಪುತ್ರ, ಹಾಲಿ ಶಾಸಕ ಕಾಂಗ್ರೆಸ್ ಸೇರ್ಪಡೆ ಫಿಕ್ಸ್ ...

ಒಕ್ಕಲಿಗರ ಪ್ರಾಧಾನ್ಯಕ್ಕೆ ವಿರೋಧ:

ಒಕ್ಕಲಿಗರು ಪ್ರಧಾನವಾಗಿರುವ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಒಕ್ಕಲಿಗ ಸಮುದಾಯಕ್ಕೆ ದೊರೆಯುತ್ತಿದೆ. ಜತೆಗೆ, ಬೆಂಗಳೂರು ಸುತ್ತಲಿನ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿರುವ ಹಾಗೂ ಅಷ್ಟೇನೂ ಒಕ್ಕಲಿಗ ಪ್ರಾಧಾನ್ಯತೆ ಇಲ್ಲದ ಕ್ಷೇತ್ರಗಳನ್ನು ಕೂಡ ಕ್ರಮೇಣ ಒಕ್ಕಲಿಗರಿಗೆ ನೀಡಲಾಗುತ್ತಿದೆ. ಇದಕ್ಕೆ ಹಿಂದುಳಿದ ವರ್ಗಗಳ ನಾಯಕರಿಂದ ಆಕ್ಷೇಪವಿದೆ.

ನಗರದಲ್ಲಿ ಒಕ್ಕಲಿಗೇತರರು ಟಿಕೆಟ್‌ ಗಿಟ್ಟಿಸಿದ್ದ ಕ್ಷೇತ್ರವಾದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಈ ಬಾರಿ (ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗ (ನಾಯ್ಡು)ಕ್ಕೆ ಸೇರಿದ್ದ ಮುನಿರತ್ನ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಮುನಿರತ್ನ ಪಕ್ಷ ತ್ಯಜಿಸಿದ ಮೇಲೆ ಈ ಕ್ಷೇತ್ರದಲ್ಲಿ ಒಕ್ಕಲಿಗರಾದ ಕುಸುಮಾ ಅವರಿಗೆ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗಿದೆ) ಒಕ್ಕಲಿಗರ ಪಾಲಾಗಿದೆ.

ಸದ್ಯ ಕುರುಬ ಸಮುದಾಯದ ಕೈಯಲ್ಲಿದ್ದ ಹೊಸಕೋಟೆ ಕ್ಷೇತ್ರ (ಕಾಂಗ್ರೆಸ್‌ನಿಂದ ಹಿಂದೆ ಕುರುಬ ಸಮುದಾಯದ ಎಂ.ಟಿ.ಬಿ. ನಾಗರಾಜ್‌ ಶಾಸಕರಾಗಿದ್ದರು. ಅವರು ಪಕ್ಷ ತ್ಯಜಿಸಿದ ಮೇಲೆ ಅದೇ ಸಮುದಾಯದ ಬೈರತಿ ಸುರೇಶ್‌ ಪತ್ನಿ ಪದ್ಮಾವತಿ ಅವರಿಗೆ ಈ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗಿತ್ತು)ದಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿರುವ ಶರತ್‌ ಕಾಂಗ್ರೆಸ್‌ ಸೇರಿದರೆ ಅವರಿಗೆ ಭವಿಷ್ಯದಲ್ಲಿ ಟಿಕೆಟ್‌ ನೀಡಬೇಕಾಗುತ್ತದೆ. ಇದರಿಂದ ಹಿಂದುಳಿದ ವರ್ಗದ ಕೈಯಲ್ಲಿದ್ದ ಮತ್ತೊಂದು ಕ್ಷೇತ್ರ ಪ್ರಭಾವಿ ಒಕ್ಕಲಿಗರ ಪಾಲಾಗಲಿದೆ ಎಂಬುದು ಆಕ್ಷೇಪ.

ಈ ವಾದ ಮಂಡಿಸುತ್ತಿರುವ ನಾಯಕರ ಪ್ರಕಾರ ಬೆಂಗಳೂರು ಹಾಗೂ ಬೆಂಗಳೂರು ಸುತ್ತಲಿನ 50-60 ಕಿ.ಮೀ. ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ (ಇವು ಪ್ರಧಾನವಾಗಿ ಒಕ್ಕಲಿಗ ಕ್ಷೇತ್ರಗಳೇನೂ ಅಲ್ಲ) ಬಹುತೇಕ ಒಕ್ಕಲಿಗರಿಗೇ ಕಾಂಗ್ರೆಸ್‌ ಟಿಕೆಟ್‌ ನೀಡಲಾಗುತ್ತಿದೆ. ನಗರದಲ್ಲಿ ಮೀಸಲು ಕ್ಷೇತ್ರಗಳು, ಅಲ್ಪಸಂಖ್ಯಾತರಿರುವ ಕ್ಷೇತ್ರಗಳು ಹಾಗೂ ಹೆಬ್ಬಾಳ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಬಹುತೇಕ ಕ್ಷೇತ್ರಗಳಲ್ಲಿ ಮೇಲ್ವರ್ಗದವರಿಗೆ (ಬಹುತೇಕ ಒಕ್ಕಲಿಗರು) ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ಗೆ ಮತ ನೀಡುವ ಪ್ರಧಾನ ವರ್ಗವಾದ ಹಿಂದುಳಿದ ವರ್ಗವನ್ನು ನಿರ್ಲಕ್ಷಿಸಿ, ಪ್ರಬಲ ಕೋಮಿನವರಿದೆ ಆದ್ಯತೆ ನೀಡುವುದು ಸರಿಯಲ್ಲ ಎಂಬುದು ಕಾಂಗ್ರೆಸ್‌ನ ಒಂದು ವಲಯದ ವಾದ. ಈ ವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಶರತ್‌ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತೀವ್ರ ಉತ್ಸಾಹವಿದ್ದರೂ, ಎಲ್ಲ ಆಕ್ಷೇಪಣೆಗಳನ್ನು ತಣಿಸಿ ಅನಂತರ ನಿರ್ಧಾರ ಕೈಗೊಳ್ಳಲು ಈ ಸಮಿತಿ ನೇಮಕ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.