ಕಳೆದ ಮೂರು ವರ್ಷಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಗಳಿಗೆ ಸಂಬಂಧಿಸಿ 347 ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಆನ್‌ಲೈನ್ ಗೇಮಿಂಗ್‌ನಿಂದ ಆಗುತ್ತಿರುವ ಸಮಸ್ಯೆ ನಿವಾರಿಸಲು 2020ರಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.
ವಿಧಾನಸಭೆ (ಆ.13): ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಹಾವಳಿ ತಡೆಗೆ ಸೂಕ್ತ ಮಾರ್ಗಸೂಚಿ ರೂಪಿಸಲು ಡಿಜಿಪಿ ಪ್ರಣಬ್ ಮೋಹಂತಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದೆ. ಅದರ ಆಧಾರದಲ್ಲಿ ಆನ್‌ಲೈನ್ ಗೇಮ್‌ಗಳನ್ನು ನಿಯಂತ್ರಿಸಲು ಸೂಕ್ತ ನಿಯಮ ರೂಪಿಸಲಾಗುವುದು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ತಿಳಿಸಿದರು. ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿಯ ಸುರೇಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಂ, ಆನ್‌ಲೈನ್ ಗೇಮಿಂಗ್‌ಗಳು ಯುವಜನರ ಭವಿಷ್ಯ ಹಾಳು ಮಾಡುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಗಳಿಗೆ ಸಂಬಂಧಿಸಿ 347 ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಆನ್‌ಲೈನ್ ಗೇಮಿಂಗ್‌ನಿಂದ ಆಗುತ್ತಿರುವ ಸಮಸ್ಯೆ ನಿವಾರಿಸಲು 2020ರಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಹೈಕೋರ್ಟ್‌ನಲ್ಲಿ ತಿದ್ದುಪಡಿ ರದ್ದು ಮಾಡಲಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ಬಾಕಿಯಿದೆ ಎಂದರು. ಅದರ ನಡುವೆಯೇ ಗೇಮಿಂಗ್ ಉದ್ಯಮದ ಪ್ರತಿನಿಧಿಗಳನ್ನೊಳಗೊಂಡಂತೆ ಪ್ರಣಬ್ ಮೋಹಂತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಮಾರ್ಗಸೂಚಿ ರೂಪಿಸಲಾಗುವುದು. ಅದರಲ್ಲಿ ಯಾವೆಲ್ಲ ಆನ್‌ಲೈನ್ ಗೇಮ್‌ಗಳು ಕೌಶಲ್ಯಾವೃದ್ಧಿ ಅಥವಾ ಬೆಟ್ಟಿಂಗ್‌ಗೆ ಸಂಬಂಧಿಸಿದ್ದು ಎಂದು ವರ್ಗೀಕರಿಸಲಾಗುವುದು. ಅಲ್ಲದೆ, ಸರ್ಕಾರ ರೂಪಿಸುವ ಮಾರ್ಗಸೂಚಿಯನ್ನು ಗೇಮಿಂಗ್ ಉದ್ಯಮಿಗಳಿಗೂ ನೀಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಧ್ಯಪ್ರವೇಶಿಸಿದ ಬಿಜೆಪಿಯ ಆರಗ ಜ್ಞಾನೇಂದ್ರ, ನಾನು ಗೃಹ ಸಚಿವನಾಗಿದ್ದಾಗಲೇ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಆಗ ನನ್ನ ಮೇಲೆ ಸಾಕಷ್ಟು ಒತ್ತಡಗಳು ಬಂದವು.
ಈ ಉದ್ಯಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಕಲ್ಪನೆಗೂ ನಿಲುಕದ್ದು. ಅದನ್ನೆಲ್ಲ ಮೀರಿ ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಸದ್ಯ ದೇಶದಲ್ಲಿ 4.5 ಬಿಲಿಯನ್ ವಹಿವಾಟು ನಡೆಸಲಾಗುತ್ತಿದ್ದು, 590 ಮಿಲಿಯನ್ ಗೇಮರ್‌ಗಳಿದ್ದಾರೆ. ಗೇಮಿಂಗ್ ಉದ್ಯಮಿಗಳು ಜಿಎಸ್‌ಟಿ ಕಟ್ಟುವುದರಿಂದ ತಪ್ಪಿಸಿಕೊಳ್ಳಲು, ಬೇರೆ ದೇಶಗಳ ಸರ್ವರ್‌ಗಳಿಂದ ಗೇಮ್‌ಗಳನ್ನು ಆಡಿಸಲಾಗುತ್ತಿದೆ. ಈ ಬಗ್ಗೆಯೂ ಗಮನಹರಿಸಬೇಕಿದೆ ಎಂದರು.
ನನ್ನ ವಾಲೆಟ್‌ನಲ್ಲಿ ₹1.62 ಲಕ್ಷ: ಆನ್‌ಲೈನ್ ರಮ್ಮಿ ಆಡುವಂತೆ ಉತ್ತೇಜಿಸುವಂತಹ ಮೆಸೇಜ್‌ಗಳು ಮೊಬೈಲ್‌ಗೆ ಬರುತ್ತವೆ. ನನ್ನ ಮೊಬೈಲ್‌ಗೆ ನನ್ನ ವಾಲೆಟ್‌ಗೆ ₹1.62 ಲಕ್ಷ ಹಾಕಲಾಗಿದೆ. ಅದರಿಂದ ರಮ್ಮಿ ಆಡಿ ಎಂಬ ಮೆಸೇಜ್ ಬಂದಿದೆ. ಇದು ಎಲ್ಲರಿಗೂ ಉತ್ತೇಜನ ನೀಡುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

