ಚನ್ನಪಟ್ಟಣ(ಜ.07): ‘ಜೆಡಿಎಸ್‌ನಿಂದ ಯಾವ ಶಾಸಕರು ಹೋದರೂ ನಮಗೇನೂ ತೊಂದರೆಯಿಲ್ಲ. ನಾವು ಯಾರ ಮನೆಬಾಗಿಲಿಗೆ ಹೋಗಿ ನೀವು ಬನ್ರಪ್ಪಾ ಎಂದು ಕರೆಯುವುದೂ ಇಲ್ಲ. ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಜನ ಸೇವೆ ಮಾಡುವ ಉದ್ದೇಶದಿಂದ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಚನ್ನಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನ್ಯ ಪಕ್ಷದವರಿಂದ ಜೆಡಿಎಸ್‌ ಶಾಸಕರನ್ನು ಸೆಳೆಯುವ ಕೆಲಸ ಎರಡು ವರ್ಷಗಳಿಂದ ನಡೆಯುತ್ತಿದೆ. ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕಾಲದಲ್ಲೂ ನಮ್ಮ ಪಕ್ಷದ ಶಾಸಕರ ರಾಜೀನಾಮೆ ಕೊಡಿಸುವ ಕೆಲಸ ನಡೆದಿತ್ತು. ಆದರೆ, ನಾವು ಮತ್ತೆ ಗೆದ್ದು ಅಧಿಕಾರಕ್ಕೆ ಬಂದೆವು. ಇದಕ್ಕೆಲ್ಲ ಹೆದರುವುದು ನಮ್ಮ ಜಾಯಮಾನವೇ ಅಲ್ಲ ಎಂದರು.

ತಮ್ಮ ನಾಯಕರ ವಿರುದ್ಧವೇ ಸಿಡಿದೆದ್ದ JDS ಶಾಸಕ: ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ

ಕೈ-ಕಮಲಕ್ಕೆ ಶಕ್ತಿಯಿಲ್ಲ:

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಗೆ ಸ್ವಂತ ಶಕ್ತಿ ಇಲ್ಲ. ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಜೆಡಿಎಸ್‌ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಇದರಿಂದಲೇ ಜೆಡಿಎಸ್‌ ಶಕ್ತಿ ಏನೆಂಬುದು ತಿಳಿಯುತ್ತದೆ. ಆ ಪಕ್ಷಗಳ ಮಾತಿಗೆ ಮರುಳಾಗಿ ಯಾರೋ ಒಬ್ಬರು ಹೋಗುತ್ತಾರೆಂದರೆ ಚಿಂತಿಸುವ ಅಗತ್ಯವಿಲ್ಲ. ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ ಎಂದು ತಿಳಿಸಿದರು.

ಸಂಕ್ರಾಂತಿ ಬಳಿಕ ಪಕ್ಷ ಸಂಘಟನೆ: ಯುವಕರನ್ನು ರಾಜಕೀಯಕ್ಕೆ ಸೆಳೆಯಲು ಯೋಜನೆ ಹಮ್ಮಿಕೊಂಡಿದ್ದು, ಅದರ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಜ.15ರ ಸಂಕ್ರಾಂತಿಯಂದು ಆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಲಾಗುವುದು. ಅಂದಿನಿಂದ ನಮ್ಮ ಪಕ್ಷ ಹೊಸ ರಾಜಕೀಯ ಚಟುವಟಿಕೆಯನ್ನು ಆರಂಭಿಸಲಿದೆ ಎಂದುಪ್ರಕಟಿಸಿದರು.