ಪಕ್ಷದಲ್ಲಿ ಏನಾದರೂ ಅಸಮಾಧಾನವಿದ್ದರೆ ಅದನ್ನು ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

ಬ್ಯಾಡಗಿ (ಜ.01): ಪಕ್ಷದಲ್ಲಿ ಏನಾದರೂ ಅಸಮಾಧಾನವಿದ್ದರೆ ಅದನ್ನು ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ತಡಸ ಗ್ರಾಮದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗಿಂತ ಮೊದಲು ನಾನು ಪಕ್ಷದ ಅಧ್ಯಕ್ಷನಿದ್ದೆ. ನಂತರ ಯಡಿಯೂರಪ್ಪ ಅಧ್ಯಕ್ಷರಾದರು. ಆ ನಂತರ ಕಟೀಲ್‌ ಆದರು. 

ಅಧ್ಯಕ್ಷರಾದವರಿಗೆ ಪ್ರಾಶಸ್ತ್ಯ ಇರುತ್ತದೆ. ಪದಾಧಿಕಾರಿಗಳ ನೇಮಕದಲ್ಲಿ ಯಾರಿಗಾದರೂ ಅಸಮಾಧಾನವಿದ್ದರೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಬೇಕು ಎಂದ ಅವರು, ಯತ್ನಾಳ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರುವ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಗಮನ ಹರಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಬಿಜೆಪಿ ಸೋಲಲು ಪ್ರಹ್ಲಾದ್ ಜೋಶಿ ಕಾರಣ ಎಂಬ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಸೋಲೋಕೆ ಯಾರು ಕಾರಣ ಆ ಮೇಲೆ ನೋಡೋಣ. ಆದರೆ ಈಗ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಸ್ಥಾನ ಏನಾಗಿದೆ? ಅವರ ಪರಿಸ್ಥಿತಿ ಏನಾಗಿದೆ? 

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಯೋಗ್ಯ ಅಭ್ಯರ್ಥಿ: ಸಚಿವ ಮಂಕಾಳ ವೈದ್ಯ

ಆಲ್ ಇಂಡಿಯಾ ಜನರಲ್ ಸೆಕ್ರೆಟರಿ ಆಗಿದ್ದ ಅವರು ಈಗೇನಾಗಿದ್ದಾರೆ? ಅವರ ಭಾಷೆ ನಾನು ಬಳಸಲ್ಲ, ಅವರು ಬಹಳ ಅಸಭ್ಯವಾದ ಭಾಷೆ ಬಳಸ್ತಾರೆ. ಮೋದಿಯವರನ್ನು ಬೈತೀರಿ, ನನ್ನನ್ನೂ ಬೈತೀರಿ, ಆದರೆ ನಮ್ಮನ್ನು ಬೈದ ಮಾತ್ರಕ್ಕೆ ನಿಮ್ಮನ್ನು ಸಿದ್ದರಾಮಯ್ಯ ಮಂತ್ರಿ ಮಾಡಲ್ಲ. ನೀವು ಈಗ ಎಂಎಲ್ಸಿ ಇರೋದೇ ದೊಡ್ಡದು. ನೀವು ಏನು ಬೈದರೂ ಮಂತ್ರಿ ಆಗಲ್ಲ, ನನ್ನ ಬೈಯೋದ್ರಿಂದ ನೀವು ಮಂತ್ರಿ ಆಗೋದಾದರೆ ಇನ್ನೂ ಜಾಸ್ತಿ ಬೈಯಿರಿ, ನಿಮಗೆ ಒಳ್ಳೆದಾಗಲಿ ಎಂದು ತಿರುಗೇಟು ನೀಡಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಷ್ಟ್ರ ರಾಜಕಾರಣ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾವ ಚುನಾವಣೆಗೆ ನಿಲ್ಲಬೇಕು ಅಂತ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡ್ತಾರೆ, ಅದರ ಬಗ್ಗೆ ಇನ್ನೂ ಏನೂ ಚರ್ಚೆ ಆಗಿಲ್ಲ ಎಂದು ತಿಳಿಸಿದರು. ಬಿಜೆಪಿಯ ಹಿರಿಯ ನಾಯಕರೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಕಾಂಗ್ರೆಸ್ಸಿನವರು ಊಹೆಯ ಆಧಾರದಲ್ಲಿ ಮಾತಾಡ್ತಾರೆ. ಸದ್ಯ ಕಾಂಗ್ರೆಸ್ ಪರಿಸ್ಥಿತಿನೇ ಗಂಭೀರ ಇದೆ. 136 ಜನ ಶಾಸಕರಾಗಿದ್ದಾರೆ, ಇನ್ನೂ ನಿಗಮ ಮಂಡಳಿ ತೀರ್ಮಾನ ಆಗ್ತಿಲ್ಲ.

ರಾಮಮಂದಿರ ಉದ್ಘಾಟನೆಗೆ ಇನ್ನೂ ಆಹ್ವಾನ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿಯಿಂದ ಯಾರೂ ಹೋಗಲ್ಲ, ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನೂ ಬಲಿಷ್ಠ ಆಗಲಿದೆ. ರಾಜ್ಯದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುತ್ತೇವೆ. 2024 ಕ್ಕೆ ಬಹುದೊಡ್ಡ ಬದಲಾವಣೆ ಬರೋದಿದೆ, ಹೀಗಾಗಿ ಯಾರಾದರೂ ಕಾಂಗ್ರೆಸ್‌ಗೆ ಹೋದರೆ ಅವರು ಮೂರ್ಖರಾಗ್ತಾರೆ ಎಂದು ಹೇಳಿದರು.