ರಾಜ್ಯದಲ್ಲಿ 80 ಬಗೆಯ ಉದ್ಯೋಗಗಳ ಸಂಬಂಧ ಕನಿಷ್ಠ ವೇತನ ಪರಿಷ್ಕರಿಸಿ 2025ರ ಏಪ್ರಿಲ್‌ನಲ್ಲಿ ಹೊರಡಿಸಿರುವ ಕರಡು ಅಧಿಸೂಚನೆ ಆಧರಿಸಿ ಮುಂದೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ.

ಬೆಂಗಳೂರು (ಜು.04): ರಾಜ್ಯದಲ್ಲಿ 80 ಬಗೆಯ ಉದ್ಯೋಗಗಳ ಸಂಬಂಧ ಕನಿಷ್ಠ ವೇತನ ಪರಿಷ್ಕರಿಸಿ 2025ರ ಏಪ್ರಿಲ್‌ನಲ್ಲಿ ಹೊರಡಿಸಿರುವ ಕರಡು ಅಧಿಸೂಚನೆ ಆಧರಿಸಿ ಮುಂದೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ. ಕನಿಷ್ಠ ವೇತನ ಪರಿಷ್ಕರಣೆ ಪ್ರಸ್ತಾಪಿಸಿ ಕಾರ್ಮಿಕ ಇಲಾಖೆ 2025ರ ಏ.11 ಮತ್ತು 19ರಂದು ಹೊರಡಿಸಿರುವ ಅಧಿಸೂಚನೆಗಳನ್ನು ಪ್ರಶ್ನಿಸಿ ಶಿವಮೊಗ್ಗ-ದಾವಣಗೆರೆಯ ನಂಜಪ್ಪ ಆಸ್ಪತ್ರೆಗಳು ಸಲ್ಲಿಸಿದ ಅರ್ಜಿಗಳು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ವೇಳೆ ಸರ್ಕಾರಿ ವಕೀಲರು, 80 ನಿರ್ದಿಷ್ಟ ಉದ್ಯೋಗಗಳಲ್ಲಿ ಕನಿಷ್ಠ ವೇತನ ಪರಿಷ್ಕರಣೆಗೆ ಪ್ರಸ್ತಾವಿತ ಕರಡು ಅಧಿಸೂಚನೆಗಳ ಕುರಿತು ಸಂಬಂಧಿಸಿದ ಉದ್ಯಮದ ಪ್ರತಿನಿಧಿಗಳೊಂದಿಗೆ ಸಭೆಗಳು-ಚರ್ಚೆ ನಡೆಸದ ಹೊರತು ಸರ್ಕಾರ ಯಾವುದೇ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರದ ಅಧಿಸೂಚನೆಗಳನ್ನು ಜಾರಿಗೆ ತರಲು ಬಯಸಿದರೆ ಸೂಕ್ತ ಪರಿಹಾರಕ್ಕಾಗಿ ಅರ್ಜಿದಾರರು ನ್ಯಾಯಾಲಯವನ್ನು ಕೋರಬಹುದು ಎಂದು ತಿಳಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿಸಿದ ದರಗಳು ಶೇ.40 ರಿಂದ ಶೇ.60ರಷ್ಟು ಅಧಿಕವಾಗಿವೆ. ಇದರಿಂದ ಒಟ್ಟಾರೆ ವ್ಯವಹಾರ ಮತ್ತು ಉದ್ಯೋಗದಾತರಿಗೆ ತೀವ್ರ ಹೊಡೆತ ನೀಡುತ್ತದೆ. ಉದ್ದೇಶಿತ ವೇತನ ಪರಿಷ್ಕರಣೆಗೆ ಅರ್ಜಿದಾರರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದರು. ಪ್ರಸ್ತಾವನೆ ಕುರಿತು ಚರ್ಚಿಸಲು ಸರ್ಕಾರ ಕೈಗಾರಿಕೆಗಳೊಂದಿಗೆ ಇನ್ನೂ ಸಭೆ ಕರೆದಿಲ್ಲ ಎಂದು ಆಕ್ಷೇಪಿಸಿದರು.

ಕನಿಷ್ಠ ವೇತನ ಕರಡು ಅಧಿಸೂಚನೆ ಪರಿಷ್ಕರಿಸಿ: ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಕೂಡಲೇ ಪರಿಷ್ಕರಿಸುವುದರ ಮೂಲಕ ಸರ್ಕಾರವು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆ ವಲಯಗಳ ಅಸ್ತಿತ್ವ ಕಾಪಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದರು.ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಪರಿಷ್ಕರಣೆ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಕನಿಷ್ಠ ವೇತನದ ಕರಡು ಅಧಿಸೂಚನೆಯಿಂದ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ಬೀಳಲಿದೆ ಎಂದು ತಿಳಿಸಿದರು. ಅಧಿಸೂಚನೆ ಪರಿಣಾಮ ಕೈಗಾರಿಕಾ ಉದ್ಯಮಿಗಳು ಕಾರ್ಮಿಕರ ಸಂಖ್ಯೆ ಕಡಿಮೆಗೊಳಿಸಿ ಯಂತ್ರೋಪಕರಣಗಳಿಗೆ ಹೆಚ್ಚು ಅವಲಂಬಿತರಾಗುತ್ತಾರೆ. ಅತಿ ಕಡಿಮೆ ಲಾಭದಲ್ಲಿ ಕೈಗಾರಿಕೆ ನಡೆಸುತ್ತಿದ್ದಾರೆ, ಕೈಗಾರಿಕೆಗಳು ನೆರೆ ರಾಜ್ಯಗಳಿಗೆ ವಲಸೆ ಹೋಗುವ ಅಪಾಯವೂ ಸಹ ಇದೆ. ಸರ್ಕಾರ ಎಂಎಸ್‌ಎಂಇ ಮತ್ತು ದೊಡ್ಡ ಕೈಗಾರಿಕೆಗಳಿಗೆ ಪ್ರತ್ಯೇಕವಾಗಿ ಭಿನ್ನ ಕನಿಷ್ಠ ವೇತನ ಸ್ಲಾಬ್ ಪರಿಚಯಿಸಬೇಕು ಹಾಗೂ ಕಾರ್ಮಿಕ ವೇತನ ತರ್ಕಬದ್ಧವಾಗಿ ನಿಗದಿಪಡಿಸಲು ತಜ್ಞರ ಸಮಿತಿ ನೇಮಿಸಬೇಕು ಎಂದು ಒತ್ತಾಯಿಸಿದರು.