Asianet Suvarna News Asianet Suvarna News

ಸಿಂಧನೂರು: ನೂತನ ಶಾಸಕ ಬಾದರ್ಲಿಗೆ ಸವಾಲುಗಳ ಸರಮಾಲೆ

ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ಹಿರಿಯ ಅನುಭವಿ ಶಾಸಕ ಹಂಪನಗೌಡ ಬಾದರ್ಲಿ ಅವರ ಮುಂದೆ ಸಾಲು ಸಾಲು ಸವಾಲುಗಳ ಸರಮಾಲೆಯೇ ಇದೆ.

new MLA of Sindhanur Hampanagowda badarli faces a series of challenges rav
Author
First Published May 21, 2023, 1:50 PM IST

ಪ್ರಹ್ಲಾದ ಗುಡಿ

ಸಿಂಧನೂರು (ಮೇ.21) : ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ಹಿರಿಯ ಅನುಭವಿ ಶಾಸಕ ಹಂಪನಗೌಡ ಬಾದರ್ಲಿ ಅವರ ಮುಂದೆ ಸಾಲು ಸಾಲು ಸವಾಲುಗಳ ಸರಮಾಲೆಯೇ ಇದೆ.

ಐದನೇ ಬಾರಿ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು ತಮ್ಮ ಸರಳ, ಸೌಜನ್ಯತೆ ಮೂಲಕ ಜನರ ಮನಸ್ಸುಗಳನ್ನು ಗೆದ್ದಿರುವುದು ವಿರೋಧಿಗಳು ಕೂಡ ನಾಚುವಂತಿದೆ. ಅವರು ಹಿಂದಿನ ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದರೂ ಸಹ ತಮ್ಮ ಹಿಂಬಾಲಕರಿಗೆ ಕೆಲಸ ಕೊಡಿಸಿದ್ದಾರೆಂಬ ಆರೋಪಗಳಿಂದ ಮುಕ್ತರಾಗಿರಲಿಲ್ಲ.

Raichur: ಮುಸ್ಲಿಂರಿಗೆ ಹಂಪನಗೌಡ ಏಕೆ ಕಾಳಜಿ ತೋರಿಸಲಿಲ್ಲ?: ನಾಡಗೌಡ

24*7 ನಿರಂತರ ಕುಡಿಯುವ ನೀರು, ಯುಜಿಡಿ ಯೋಜನೆಗಳು ನೆಲದಲ್ಲಿ ಹುದಗಿ ಹೋಗಿವೆ. ಕೋಟ್ಯಂತರ ರುಪಾಯಿ ಹಣ ಗುತ್ತಿಗೆದಾರರ ಪಾಲಾಗಿದೆ. ಈ ಬಗ್ಗೆ ಮಾಜಿ ಶಾಸಕ ವೆಂಕಟರಾವ್‌ ನಾಡಗೌಡರು ಹಲವಾರು ಬಾರಿ ಸುದ್ದಿಗೋಷ್ಠಿಗಳಲ್ಲಿ ಹಂಪನಗೌಡರ ಪಾಪದ ಕೂಸು ಎಂದು ಮೂದಲಿಸಿದ್ದನ್ನು ಹಂಪನಗೌಡರು ಗಂಭೀರವಾಗಿ ಸ್ವೀಕರಿಸಬೇಕಿದೆ.

ಅಭಿವೃದ್ಧಿ ಎಂದರೆ ಕೇವಲ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳಷ್ಟೇ ಅಲ್ಲ. ಬಡ ಜನತೆಗೆ ಅಗತ್ಯವಾಗಿರುವ ನಿವೇಶನ, ಮನೆ, ಮೂಲಸೌಕರ್ಯಗಳಿಗೆ ಆದ್ಯತೆ, ಹರಿಜನ ಗಿರಿಜನರ ಕಾಲೊನಿಗಳಲ್ಲಿ ಜನ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಥಮ ಆದ್ಯತೆ ನೀಡಬೇಕಿದೆ. ತಿಮ್ಮಾಪುರ ಏತನೀರಾವರಿ ಯೋಜನೆ, ಬಾದರ್ಲಿ ಅವರ ಹೊಲಗಳಿಗೆ ಮಾತ್ರ ಸೀಮಿತವೆಂಬ ಆರೋಪವಿದ್ದು, ಅದರಿಂದ ಮುಕ್ತರಾಗಿ ಸಾಮಾನ್ಯ ರೈತರಿಗೂ ನೀರು ಕಲ್ಪಿಸುವಲ್ಲಿ ಕಾಳಜಿ ವಹಿಸಬೇಕು. ತಾಲೂಕಿನ ಅತ್ಯಂತ ಬೆಲೆಬಾಳುವ 7500 ಎಕರೆ ಸಿಎಸ್‌ಎಫ್‌ನ ಜಮೀನನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಸಂಶೋಧನಾ ಕೇಂದ್ರ, ಬೀಜೋತ್ಪಾದನೆ, ರಾಸಾಯನಿಕ ಗೊಬ್ಬರಗಳ ಕಾರ್ಖಾನೆ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ದಿನೆದಿನೇ ಸಿಂಧನೂರು ನಗರ ಸಂಚಾರದಲ್ಲಿ ದಟ್ಟಣೆ ಹೆಚ್ಚಾಗುತ್ತಿದ್ದು, ವಾಹನಗಳು ಯರ್ರಾಬಿರ್ರಿಯಾಗಿ ಓಡಾಡುತ್ತಿವೆ. ಟ್ರಾಫಿಕ್‌ ಸಿಗ್ನಲ್‌ಗಳು ಆಗಾಗ್ಗೆ ಹದಗೆಡುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಬೈಪಾಸ್‌ ರಸ್ತೆಯೊಂದೇ ಅಂತಿಮ ಪರಿಹಾರವೆಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ. ಇದನ್ನು ಆದ್ಯತೆಯ ಮೇಲೆ ಮಾಡಬೇಕಿದೆ.

ಕೊನೆ ಭಾಗದ ರೈತರು ಕಳೆದ ಅನೇಕ ದಶಕಗಳಿಂದ ನೀರಿಗಾಗಿ ಪರದಾಡುತ್ತಿದ್ದಾರೆ. ಪ್ರತಿವರ್ಷ ನೀರು ಬಂದ್‌ ಆಗುವ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ರಾಜಕಾರಣಿಗಳು ಹೋರಾಟದ ನಾಟಕವಾಡುತ್ತಾ ರೈತರನ್ನು ಯಾಮಾರಿಸುತ್ತಾರೆ. ಬೆಂಬಲ ಬೆಲೆಯ ಕಪಟ ನಾಟಕ, ಖರೀದಿ ಕೇಂದ್ರಗಳ ಸೋಗು ರೈತರಿಗೆ ಸಂಪೂರ್ಣ ಅರ್ಥವಾಗಿದೆ. ಈ ಬಗ್ಗೆ ನೂತನ ಶಾಸಕ ಹಂಪನಗೌಡ ಬಾದರ್ಲಿ ಅವರು ಚಿಂತನೆಗೈದು ನವಲಿ ಬಳಿ ಸಮಾನಾಂತರ ಜಲಾಶಯಕ್ಕೆ ಆದ್ಯತೆ, ನಂಜುಂಡಪ್ಪ ವರದಿ, ಡಾ.ಸ್ವಾಮಿನಾಥನ್‌ ವರದಿ ಅನುಷ್ಠಾನಕ್ಕೆ ಮುಂದಡಿ ಇಡಬೇಕು ಎಂದ ಕ್ಷೇತ್ರದ ಜನ ಒತ್ತಾಯಿಸಿದ್ದಾರೆ.

ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್: ಮೇಲೆತ್ತಲು ಪರದಾಟ!

ಜನರ ಬೇಡಿಕೆಗಳಿವು

1) ಐತಿಹಾಸಿಕ ಶಕ್ತಿಪೀಠ ಅಂಬಾಮಠದ ಅಂಬಾದೇವಿ ದೇವಸ್ಥಾನದ ಶಿಲಾಮಂಟಪ ನಿರ್ಮಾಣದ ಕಲ್ಲು ಖರೀದಿಯಲ್ಲಿ ಅವ್ಯವಹಾರದ ಘಾಟು ಈಗಾಗಲೇ ಚರ್ಚೆಯಾಗಿದ್ದು, ಅದಕ್ಕೆ ಅಂತಿಮ ಪರದೆ ಎಳೆದು ಸುಂದರ ಮಠವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕು.

2) ಮುಕ್ಕುಂದಾ ಮುರಹರಿ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು.

3) ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದು ದಶಕಗಳ ಇತಿಹಾಸವಿರುದ ಸರ್ಕಾರಿ ಮಹಾವಿದ್ಯಾಲಯವನ್ನು ಪುನರ್‌ ಪ್ರತಿಷ್ಠಾಪಿಸಬೇಕು.

4) ಸಿಂಧನೂರು ನಗರಕ್ಕೆ ಮಂಜೂರಿ ಹಂತದಲ್ಲಿರುವ ಎಆರ್‌ಟಿಓ, ಸಹಾಯಕ ಆಯುಕ್ತರ ಕಚೇರಿ, ಕೈಗಾರಿಕೆಗಳಿಗೆ ಪೋ›ತ್ಸಾಹ, ದೂರದ ಪಟ್ಟಣಗಳಿಗೆ ಸಮರ್ಪಕ ಬಸ್‌ ಸೌಲಭ್ಯ, ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್‌ಗಳ ಓಡಾಟ ಒದಗಿಸಬೇಕು.

5) ದಢೇಸುಗೂರು ಕೃಷಿ ತರಬೇತಿ ಕೇಂದ್ರದ ಅಭಿವೃದ್ಧಿ, ತೋಟಗಾರಿಕೆ ಇಲಾಖೆಯ ಬಹುಕೋಟಿ ಜಮೀನಿನ ಸದ್ಬಳಕೆ ಹೀಗೆ ಅನೇಕ ಅಭಿವೃದ್ಧಿ ಪರ ಕೆಲಸಗಳಿಗೆ ಶಾಸಕ ಬಾದರ್ಲಿ ಹಂಪನಗೌಡ ಆದ್ಯತೆ ನೀಡಲಿ ಎಂಬುದು ಜನರ ಮನದಾಸೆಯಾಗಿದೆ.

Follow Us:
Download App:
  • android
  • ios