ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಪಠ್ಯ ವಿದ್ಯಾರ್ಥಿಗಳಿಗೆ ಅಗತ್ಯ, ಚರ್ಚೆಯನ್ನೇ ಮಾಡದೆ ನಾಗ್ಪುರ ಸಿದ್ಧಾಂತವನ್ನು ಹೇರುತ್ತಿದ್ದಾರೆ: ರಾಜೀವ್ ಗೌಡ
ಮಂಡ್ಯ(ಅ.08): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಷನಲ್ ಎಜುಕೇಷನ್ ಪಾಲಿಸಿ ಕಿತ್ತುಹಾಕ್ತೇವೆ. ಒಂದೇ ಒಂದು ಅಕ್ಷರ ಕೂಡ ಎನ್‌ಇಪಿ ಇರುವುದಿಲ್ಲ. ಸಂಪೂರ್ಣವಾಗಿ ಎನ್‌ಇಪಿಯನ್ನು ರದ್ದುಪಡಿಸುತ್ತೇವೆ ಎಂದು ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಹೇಳಿದರು.
ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಧಿನಾಯಕ ರಾಹುಲ್‌ಗಾಂಧಿ ಅವರು ಶಿಕ್ಷಣತಜ್ಞರ ಜೊತೆ ಸಂವಾದ ನಡೆಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಂವಾದದ ವಿವರಣೆ ನೀಡಿದರು.
ಎನ್‌ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ. ಅಲ್ಲಿ ಇತಿಹಾಸ ಹಾಗೂ ಪುರಾಣ ಕುರಿತಂತೆ ಗೊಂದಲವಿದೆ. ನಾವು ಪುರಾಣ, ಮಹಾಭಾರತ, ರಾಮಾಯಣದ ವಿರುದ್ಧ ಇಲ್ಲ. ಅದನ್ನು ಕಲಿತು ಅದರ ಜತೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಪಾಠಗಳನ್ನು ಕಲಿಸಬೇಕು ಎಂದು ತಿಳಿಸಿದರು.
Bharat Jodo Yatra; ರಾಹುಲ್ ಗಾಂಧಿ ಸಂವಾದದ ವೇಳೆ ಕಣ್ಣೀರಿಟ್ಟ ಮಹಿಳೆಯರು
ಎನ್‌ಇಪಿ ವಿಚಾರವಾಗಿ ಕೇಂದ್ರ ಸರ್ಕಾರ ಸದನದಲ್ಲಿ ಚರ್ಚೆ ಮಾಡಿಲ್ಲ. ನಾಗ್ಪುರದ ಸಿದ್ಧಾಂತವನ್ನು ಇಲ್ಲಿಗೆ ತಂದು ಹಾಕಿದ್ದಾರೆ. ಶಿಕ್ಷಣವು ಕೇಂದ್ರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ರಾಜ್ಯದ ವಿಚಾರ. ಹೀಗಾಗಿ ನಮ್ಮ ಸರ್ಕಾರ ಬಂದರೆ ವೈಜ್ಞಾನಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದರು.
ಈ ಮಧ್ಯೆ ಮಾತನಾಡಿದ ಜೈರಾಮ್ ರಮೇಶ್ ಅವರು ನಮ್ಮ ಸರ್ಕಾರ ಬಂದರೆ ಈ ಎನ್‌ಇಪಿಯ ಪ್ರತಿ ಪದವನ್ನು ರದ್ದು ಮಾಡಲಾಗುವುದು. 1996ರಲ್ಲಿ ಜಾರಿಗೆ ತಂದ ಶಿಕ್ಷಣ ನೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆಗಳನ್ನು ಆರಂಭಿಸಲಾಗಿತ್ತು. ಅಲ್ಲಿ ಎಲ್ಲ ವರ್ಗದವರು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದು, ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು ಶಿಕ್ಷಣದ ಖಾಸಗೀಕರಣ ಬಹಳ ಅಪಾಯಕಾರಿ’ ಎಂದರು.
ಬಳಿಕ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ರಾಜ್ಯ ಸರ್ಕಾರ ಎನ್ ಇಪಿ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡಿದೆ. ಅದರಲ್ಲಿ ಸ್ವತಃ ಸರ್ಕಾರವೇ ಈ ಎನ್‌ಇಪಿಗೆ ರಾಜ್ಯ ಸಿದ್ಧವಾಗಿಲ್ಲ. ಹೀಗಾಗಿ ಇದನ್ನು ಜಾರಿಗೆ ತರಲು ಹಲವು ವರ್ಷಗಳು ಬೇಕಿದೆ ಎಂದು ಹೇಳಿದೆ. ಕೆಲವು ಮಂತ್ರಿಗಳು ಈ ಎನ್‌ಇಪಿ ಜಾರಿ ಮಾಡಿದರೆ ನಾಗ್ಪುರದವರನ್ನು ಮೆಚ್ಚಿಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದು ಮಂತ್ರಿಗಳ ಅನುಕೂಲಕ್ಕೇ ಹೊರತು, ವಿದ್ಯಾರ್ಥಿಗಳಿಗೆ ಅಲ್ಲ ಎಂದು ಹೇಳಿದರು.
