ಗೋಹಂತಕರ ಪರ ನಿಂತ ಕಾಂಗ್ರೆಸ್‌ಗೆ ಗೋಮಾತೆಯ ಶಾಪ: ಕಟೀಲ್‌

ಗ್ರಾಪಂ ಗೆಲುವಿಗೆ ಮೋದಿ, ಬಿಸ್‌ವೈ ಕಾರಣ| ಜನಸೇವಕ ಸಮಾರೋಪದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಶ್ಲಾಘನೆ| ಗೆಲುವಿನ ಓಟ ಮುಂದುವರೆಸುವ ವಿಶ್ವಾಸ| ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಗೆಲ್ಲುವ ಪ್ರತಿಜ್ಞೆ ನಮ್ಮದಾಗಲಿ: ಯಡಿಯೂರಪ್ಪ| 

Nalin Kumar Kateel Slams On Congress grg

ಬೆಂಗಳೂರು(ಜ.14): ಇತ್ತೀಚೆಗೆ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಆಡಳಿತವೇ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಪಂಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಸ್ಥಾನಗಳು ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕಾಗಿ ಪಕ್ಷದ ವತಿಯಿಂದ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದರು.

ಬಿಜೆಪಿಯು ಜನರ ಸೇವೆಗೆ ಬದ್ಧವಾದ ಪಕ್ಷವಾಗಿದೆ. ಇತರ ಪಕ್ಷಗಳಂತಲ್ಲ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಧ್ಯೇಯ ವಾಕ್ಯದೊಂದಿಗೆ ಅದು ಕಾರ್ಯ ನಿರ್ವಹಿಸುತ್ತದೆ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗಳಲ್ಲೂ ತನ್ನ ಗೆಲುವಿನ ಓಟವನ್ನು ಪಕ್ಷ ಮುಂದುವರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಇನ್ನೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ ಜನಪ್ರಿಯ ಮತ್ತು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸಿಎಂ ಸುತ್ತ ಓಡಾಡುವವರಿಗೆ ಮಣೆ: ಬಿಜೆಪಿ ಶಾಸಕನ ಆಕ್ರೋಶ

150 ಸ್ಥಾನ ಗೆಲ್ಲುವ ಪ್ರತಿಜ್ಞೆ: ಬಿಎಸ್‌ವೈ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅದರ ಸದುಪಯೋಗ ಆಗಬೇಕು. ದುರುಪಯೋಗ ಆಗದಿರಲಿ. ಯುವಕರು ಮತ್ತು ಮಹಿಳೆಯರು ಮೋರ್ಚಾಗಳನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ಚುನಾವಣೆಗಳಲ್ಲೂ ನಾವು ಅಭೂತಪೂರ್ವ ಗೆಲುವು ಸಾಧಿಸಬೇಕು. ವಿಧಾನಸಭಾ ಚುನಾವಣೆಯಲ್ಲೂ 140ರಿಂದ 150 ಸ್ಥಾನಗಳನ್ನು ಗೆಲ್ಲುವ ಪ್ರತಿಜ್ಞೆ ನಮ್ಮದಾಗಲಿ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ್‌, ಸುರೇಶ್‌ ಕುಮಾರ್‌, ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌, ಅರವಿಂದ ಲಿಂಬಾವಳಿ, ಸಂಸದರಾದ ಪಿ.ಸಿ.ಮೋಹನ್‌, ಪ್ರತಾಪ್‌ ಸಿಂಹ, ಪಕ್ಷ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮುಖಂಡರು, ಶಾಸಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ಸಿಗೆ ಗೋಮಾತೆ ಶಾಪ: ಕಟೀಲ್‌

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ 45 ಸಾವಿರ ಜನ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಗ್ರಾಮ ಸ್ವರಾಜ್ಯ ಪರಿಕಲ್ಪನೆಯಡಿ ಮೋದಿ ಹಾಗೂ ಯಡಿಯೂರಪ್ಪ ಅವರ ಅತ್ಯುತ್ತಮ ಕಾರ್ಯವೈಖರಿಯೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಸ್ವಕ್ಷೇತ್ರ ಕನಕಪುರದಲ್ಲೂ ಬಿಜೆಪಿ ಗೆದ್ದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಿದೆ. ಹಾಸನ ಮತ್ತು ಮಂಡ್ಯದಲ್ಲೂ ಕೇಸರಿ ಧ್ವಜ ಹಾರಾಡುತ್ತಿದೆ. ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮ ಮತ್ತು ಯಡಿಯೂರಪ್ಪ ಅವರು ಸಾಧನಾಶೀಲತೆಯೇ ಇದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ಗೆ ಗೋಮಾತೆಯ ಶಾಪ ತಟ್ಟಿದೆ. ಹಸು ಮತ್ತು ಕರುವಿನ ಚಿಹ್ನೆಯಡಿ ಅಧಿಕಾರ ಪಡೆದಿದ್ದ ಕಾಂಗ್ರೆಸ್ಸಿಗರು ಗೋಹಂತಕರ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್‌ನ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಮಾಂಸ ತಿನ್ನುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
 

Latest Videos
Follow Us:
Download App:
  • android
  • ios