ಬೆಂಗಳೂರು, (ಮಾ.02): ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿ ದಂಗಲ್​​ ಕಾಂಗ್ರೆಸ್​​ನಲ್ಲಿ ಮುಂದುವರಿದಿದೆ.

ಹೌದು...ಈ ಮೈಸೂರು ಮಲ್ಲಯುದ್ಧದ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿಕೊಟ್ಟಿದ್ದು, ವಿದ್ಯಾಮನಗಳ ಬಗ್ಗೆ ತನಿಖೆ ನಡೆಸಿದೆ. ಅಲ್ಲದೇ ಮೇಯರ್ ಸ್ಥಾನವನ್ನು ಜೆಡಿಎಸ್‌ ಬಿಟ್ಟ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದರ ಮಧ್ಯೆ   ಕೆಪಿಸಿಸಿ ಕಚೇರಿಗೆ ಶಾಸಕ ತನ್ವೀರ್ ಸೇಠ್ ತೆರಳಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ಮೈಸೂರು ಮೇಯರ್ ಚುನಾವಣೆ ವಿಚಾರ ಕುರಿತಂತೆ ಅಧ್ಯಕ್ಷರಿಗೆ ವರದಿ ನೀಡಿದ್ದಾರೆ. 

ಹಠಕ್ಕೆ ಬಿದ್ದ ಸಿದ್ದರಾಮಯ್ಯ: ಹೈಕಮಾಂಡ್‌ ಪ್ರತಿನಿಧಿ ಎದುರು ಟಗರು ಗುಟುರು

ಕಾಂಗ್ರೆಸ್ ಪಾಲಿಕೆ ಸದಸ್ಯರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಬೆಂಬಲ ನೀಡಿದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಸೂಚನೆ ಏನಾಗಿತ್ತು? ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಲು ತಮಗೆ ಸೂಚನೆ ನೀಡಿದ್ಯಾರು? ಮೈಸೂರು ಮೇಯರ್, ಉಪ ಮೇಯರ್ ಸ್ಥಾನ ಹಂಚಿಕೆ ವಿಚಾರದಲ್ಲಿ ತಮಗೆ ಯಾರು ಸೂಚನೆ ನೀಡಿದ್ರು ಎಂಬ ವಿಚಾರಗಳ ಬಗ್ಗೆ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ತನ್ವೀರ್ ಸೇಠ್ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಡಿಕೆಶಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್,  ಎಐಸಿಸಿಯಿಂದ ಕಾರಣ ಕೇಳಿ‌ ನೊಟಿಸ್ ಕೊಟ್ಟಿದ್ದಾರೆ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಜೊತೆ ಸಮಾಲೋಚಿಸಿದ್ದೇನೆ.ಇನ್ನು ಎಐಸಿಸಿ ಕಾರ್ಯದರ್ಶಿಗಳು ಪೂರ್ಣ ವಿವರಣೆ ಪಡೆಯಲು ಬಂದಿದ್ದಾರೆ. ಅವರಿಗೆ ನಾನು ಎಲ್ಲಾ ವಿವರಣೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ- ಡಿಕೆಶಿ ನಡುವಿನ ಶೀತಲ ಸಮರದ ಮಧ್ಯೆ ಹೈಕಮಾಂಡ್ ಎಂಟ್ರಿ

ಎಐಸಿಸಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನನಗೆ ನೊಟೀಸ್ ಕೊಟ್ಟಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡ್ತೇನೆ. ಇದರ ಜೊತೆ ಇನ್ನಷ್ಟು ಕಾರಣಗಳನ್ನ ವಿವರಿಸುತ್ತೇನೆ. ಮೈತ್ರಿಯ ಕಾರಣ,ಫಲ,ನಷ್ಟದ ಬಗ್ಗೆಯೂ ಎರಡ್ಮೂರು ದಿನಗಳಲ್ಲಿ ವಿವರ ಕೊಡುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯನವರನ್ನು ಏಕೆ ಭೇಟಿ ಮಾಡಲಿಲ್ಲವೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೇಠ್, ನಾನು ಯಾರನ್ನ ಭೇಟಿ ಮಾಡಬೇಕು,ಯಾರನ್ನ ಭೇಟಿ ಮಾಡಬಾರದು ಅಂತ ಹೇಳೋಕೆ ಆಗಲ್ಲ. ನಾನು ಯಾವ ಸಂದರ್ಭ ಭೇಟಿಯಾಗಬೇಕೋ ಆಗ ಆಗ್ತೇನೆ ಎಂದು ತಿಳಿಸಿದರು.

ಮೈತ್ರಿಗೆ ಸೂಚನೆ ಕೊಟ್ಟಿದ್ದೇ ಸಿಎಲ್‌ಪಿ ನಾಯಕರು. ಅಲ್ಲಿನ ವಾತಾವರಣ ನೋಡಿ ಮಾಡಿಕೊಳ್ಳುವಂತೆ ತಿಳಿಸಿದ್ದರು. ಮೇಯರ್ ಆಗಬೇಕು ಅಂತ ಸಿಎಲ್ ಪಿ ನಾಯಕರ ಹೇಳಿದ್ರು. ಅದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಹಾಗಾಗಿ ಉಪಮೇಯರ್ ಸ್ಥಾನಕ್ಕೆ ಒಪ್ಪಿಕೊಳ್ಳಬೇಕಾಯ್ತು ಎಂದು ಸಮಜಾಯಿಷಿ ನೀಡಿದರು.