ಡಿ.ಕೆ.ಶಿವಕುಮಾರ್‌ಗೆ ಸಿದ್ದು ಬಣ ತರಾಟೆ|ಮೈಸೂರು ಮೇಯರ್‌ ಪಟ್ಟಜೆಡಿಎಸ್‌ಗೆ ನೀಡಿದ್ದಕ್ಕೆ ಕಿಡಿ| ಸಿದ್ದು ಹೇಳದೆ ನಿರ್ಧರಿಸಿದವರ ವಿರುದ್ಧ ಕ್ರಮಕ್ಕೆ ಪಟ್ಟು| ಸ್ಥಳೀಯ ನಾಯಕರ ನಿರ್ಧಾರ, ನನ್ನ ಪಾತ್ರವಿಲ್ಲ ಎಂದು ಶಿವಕುಮಾರ್‌| ತನ್ವೀರ್‌ ಸೇಠ್‌ ಸೂಚನೆ ಇತ್ತು ಎಂದ ಕಾರ್ಪೊರೇಟರ್‌ಗಳು| ಪರಿಶೀಲಿಸಿ ವರದಿ ಸಲ್ಲಿಸಲು ಧ್ರುವನಾರಾಯಣಗೆ ಸೂಚನೆ| ವರದಿ ಬಂದ ಬಳಿಕ ವಿಪ್‌ ಬದಲಾಯಿಸಿದವರ ವಿರುದ್ಧ ಕ್ರಮಕ್ಕೆ ನಿರ್ಧಾರ

ಬೆಂಗಳೂರು(ಫೆ.26): ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತರದೆ ಮೈಸೂರು ಮೇಯರ್‌ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟವಿಚಾರ ಗಂಭೀರ ಸ್ವರೂಪ ಪಡೆದಿದ್ದು, ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ನೇರಾನೇರ ಹರಿಹಾಯ್ದ ಘಟನೆ ಗುರುವಾರ ನಡೆದಿದೆ.

ಹೊಸಕೋಟೆ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ನೀಡುವ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಬಣ ಹಾಗೂ ಡಿ.ಕೆ. ಶಿವಕುಮಾರ್‌ ಬಣದ ನಡುವೆ ಜಂಗೀ ಕುಸ್ತಿ ನಡೆದಿದೆ. ಹಿರಿಯ ನಾಯಕರಾದ ರಮೇಶ್‌ ಕುಮಾರ್‌ ಸೇರಿದಂತೆ ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರು ಮೈಸೂರು ಮೇಯರ್‌ ಚುನಾವಣೆಯ ವಿಪ್‌ ಬದಲಾವಣೆಗೆ ಕಾರಣರಾದವರ ಮೇಲೆ ಶಿಸ್ತು ಕ್ರಮಕ್ಕೆ ತೀವ್ರ ಒತ್ತಾಯ ಮಾಡಿದ್ದಾರೆ.

ಇದರ ಪರಿಣಾಮ ಈ ಇಡೀ ಘಟನೆ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಕಾಂಗ್ರೆಸ್‌ ನೂತನ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಅವರಿಗೆ ಸೂಚನೆ ನೀಡಲಾಗಿದ್ದು, ವರದಿ ಆಧಾರದ ಮೇಲೆ ಯಾರೇ ವಿಪ್‌ ಬದಲಾಯಿಸಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಮೂಲಗಳ ಪ್ರಕಾರ, ಮೈಸೂರು ಮೇಯರ್‌ ಚುನಾವಣೆ ವೇಳೆ ಕಾಂಗ್ರೆಸ್‌ ಮೇಯರ್‌ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಇಲ್ಲದಿದ್ದರೆ ಪಕ್ಷದ ಕಾರ್ಪೊರೇಟರ್‌ಗಳು ಸಭಾತ್ಯಾಗ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ಸಮ್ಮುಖ ತೀರ್ಮಾನವಾಗಿತ್ತು. ಆದರೆ, ಕಡೆ ಕ್ಷಣದಲ್ಲಿ ಈ ವಿಪ್‌ ಬದಲಾಗಿ ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಇದು ಸಿದ್ದರಾಮಯ್ಯ ಅವರ ಬಣವನ್ನು ಕೆರಳಿಸಿದೆ ಮತ್ತು ಈ ಘಟನೆಯ ಹಿಂದೆ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಾತ್ರವಿದೆ ಎಂದು ಬಣ ಆರೋಪಿಸಿದೆ.

ತನ್ವೀರ್‌ ಸೇಠ್‌ ಕಾರಣ?:

ಈ ವಿಚಾರ ಗುರುವಾರದ ಸಭೆಯಲ್ಲಿ ಪ್ರಸ್ತಾಪವಾಗಿದೆ. ‘ಡಿ.ಕೆ. ಶಿವಕುಮಾರ್‌ ಅವರೇ ಕರೆ ಮಾಡಿ ಮೈತ್ರಿಯಾಗಬೇಕು ಎಂದು ಮನವಿ ಮಾಡಿದ್ದರು ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮೈತ್ರಿ ಇಷ್ಟವಿರಲಿಲ್ಲ ಎಂದೂ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ನೇರವಾಗಿ ಶಿವಕುಮಾರ್‌ ಅವರನ್ನು ಸಿದ್ದು ಬಣದ ನಾಯಕರು ಆಗ್ರಹಿಸಿದ್ದಾರೆ.

ಈ ವೇಳೆ ಶಿವಕುಮಾರ್‌ ಅವರು ಈ ನಿರ್ಧಾರವನ್ನು ಸಂಪೂರ್ಣವಾಗಿ ಸ್ಥಳೀಯ ನಾಯಕರು ಕೈಗೊಂಡಿದ್ದು, ಇದರಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ವೇಳೆ ಮೈಸೂರಿನ ಕೆಲ ಕಾರ್ಪೊರೇಟರ್‌ಗಳನ್ನು ಸಭೆಗೆ ಕರೆಸಿ ಘಟನೆಯ ವಿವರವನ್ನು ಪಡೆಯಲಾಗಿದೆ. ಈ ವೇಳೆ ಕಾರ್ಪೊರೇಟರ್‌ಗಳು ತನ್ವೀರ್‌ ಸೇಠ್‌ ನಿರ್ದೇಶನದ ಮೇರೆಗೆ ಜೆಡಿಎಸ್‌ ಮೇಯರ್‌ ಆಯ್ಕೆಗೆ ಮತ ಹಾಕಲಾಯಿತು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ತನ್ವೀರ್‌ ಸೇಠ್‌ ತಾವಾಗೇ ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಅವರಿಗೆ ಹೀಗೆ ಮಾಡಲು ಸೂಚನೆ ನೀಡಿದ್ದು ಯಾರು? ಈ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಯಬೇಕು ಎಂದು ಸಿದ್ದರಾಮಯ್ಯ ಬಣ ಆಗ್ರಹಿಸಿದೆ ಎನ್ನಲಾಗಿದೆ. ಹೀಗಾಗಿ, ಇಡೀ ಘಟನೆ ಬಗ್ಗೆ ಪರಿಶೀಲನೆ ನಡೆಸಲು ಧ್ರುವನಾರಾಯಣ್‌ ಅವರಿಗೆ ಸೂಚಿಸಲಾಗಿದ್ದು, ಅವರು ನೀಡುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಏನಿದು ವಿವಾದ?

ಪಾಲಿಕೆ ಚುನಾವಣೆಯಲ್ಲಿ ಹಿಂದಿನ ಒಪ್ಪಂದದಂತೆ ಈ ಬಾರಿ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಡಬೇಕಾಗಿತ್ತು. ಆದರೆ ಜೆಡಿಎಸ್‌ ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಎಚ್‌.ಎಂ. ಶಾಂತಕುಮಾರಿ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದರೂ ಗೆಲುವು ಸಾಧ್ಯವಿಲ್ಲದಿದ್ದರೆ ಚುನಾವಣೆ ಬಹಿಷ್ಕರಿಸಲು ಸದಸ್ಯರಿಗೆ ವಿಪ್‌ ಜಾರಿ ಮಾಡಿತ್ತು. ಆದರೆ ಕೊನೆ ಕ್ಷಣ ವಿಪ್‌ ಬದಲಿಸಿ ಜೆಡಿಎಸ್‌ ಮೇಯರ್‌ ಪರವಾಗಿ ಮತ ಚಲಾಯಿಸಲು ಕಾರ್ಪೊರೇಟರ್‌ಗಳಿಗೆ ಸೂಚನೆ ಹೋಗಿದೆ. ಇದರಿಂದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಹಾಗೂ ಕಾಂಗ್ರೆಸ್‌ನ ಅನ್ವರ್‌ ಬೇಗ್‌ ಮೇಯರ್‌, ಉಪಮೇಯರ್‌ ಆಗಿ ಆಯ್ಕೆಯಾಗಿದ್ದರು. ಇದೆಲ್ಲವೂ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ ನಡೆದಿದ್ದು ಇದೀಗ ವಿವಾದವಾಗಿದೆ.