'ಗಾಂಧಿ ಕುಟುಂಬಕ್ಕಿದೆ ಗೋಪಾಷ್ಟಮಿ ಶಾಪ..' ಅನಂತ್ ಕುಮಾರ್ ಹೆಗಡೆ ಮಾತಿನ ಅಸಲಿಯತ್ತೇನು?
ಕುಮಟಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿಯ ಶಾಪ ಇದೆ ಎಂದಿದ್ದಾರೆ.
ಕಾರವಾರ (ಜ.13): ಲೋಕಸಭಾ ಚುನಾವಣೆ ಸಮೀಪವಾಗುತ್ತಿರುವಂತೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಭರಾಟೆ ಆರಂಭಿಸಿದ್ದಾರೆ. ಬಾಬ್ರಿ ಮಸೀದಿ ಒಡೆದಂತೆ ದೇಶದ ಇತರ ಮಸೀದಿಗಳನ್ನು ಒಡೆದುಹಾಕುವ ಸುಳಿವು ನೀಡಿರುವ ಸಂಸದರು, ಇದೇ ವೇಳೆ ದೇಶದ ಅತ್ಯಂತ ಪುರಾತನ ಪಕ್ಷವಾದ ಕಾಂಗ್ರೆಸ್‌ನ ಗಾಂಧಿ ಕುಟುಂಬಕ್ಕೆ ಇರುವ ಶಾಪದ ಬಗ್ಗೆ ಕುತೂಹಲದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅವರು ಹೇಳಿರುವ ಮಾತು ಎಷ್ಟು ಸತ್ಯವೋ ಎನ್ನುವುದು ತಿಳಿಯದು. ಆದರೆ, ಗೋಪಾಷ್ಟಮಿಯ ಶಾಪ ಗಾಂಧಿ ಕುಟುಂಬಕ್ಕೆ ಯಾವ ರೀತಿ ತಟ್ಟಿದೆ ಎನ್ನುವುದನ್ನು ಕುಮಟಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. 'ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಗೋಹತ್ಯಾ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತ. ಆ ಆಂದೋಲನದಲ್ಲಿ ಸಾವಿರಾರು ಸಂತರು ಭಾಗವಹಿಸಿದ್ದರು. ಇಂದಿರಾ ಗಾಂಧಿಯ ಸಮ್ಮುಖದಲ್ಲೇ ಗೋಲಿಬಾರ್ ನಡೆದಿತ್ತು. ಈ ವೇಳೆ ಹತ್ತಾರು ಮಂದಿ ಸಂತರು ಸತ್ತಿದ್ದಲ್ಲದೆ, ನೂರಾರು ಗೋವುಗಳನ್ನು ಗುಂಡಿಟ್ಟು ಕೊಲ್ಲಲಾಗಿತ್ತು' ಎಂದು ಅವರು ಹೇಳಿದ್ದಾರೆ.
ಈ ವೇಳೆ ಸ್ವಾಮೀಜಿಯೊಬ್ಬರು, ಸಂತೋಂಕಾತೋ ಖೂನ್ ಬಹ್ ಗಯಾ ಹಮ್ ಮಾಫ್ ಕರೆಂಗೆ, ಜಿನೋನೆ ಗೋ ವಧ್ ಕಿಯಾ ಉನ್ಹೆ ಮಾಫ್ ನಹೀ ಕರೆಂಗೆ, ಭಗವಾನ್ ಭೀ ಮಾಫ್ ನಹೀ ಕರ್ ಸಕ್ತಾ ಎಂದಿದ್ದರು (ಸಂತರ ರಕ್ತ ಹರಿದಿದೆ ಅದನ್ನು ಬೇಕಾದರೆ ಕ್ಷಮಿಸ್ತೇವೆ. ಆದರೆ, ಇವರು ಗೋವಿನ ವಧೆ ಮಾಡಿದ್ದಾರೆ ಅದನ್ನ ಕ್ಷಮಿಸೋದು ಸಾಧ್ಯವಿಲ್ಲ, ದೇವರು ಕೂಡ ಇದನ್ನು ಕ್ಷಮಿಸಲು ಸಾಧ್ಯವಿಲ್ಲ). ತುಮಾರ ಕುಲ್ ಗೋಪಾಷ್ಟಮಿಕೆ ದಿನ್ ಅಂತ್ ಹೋಗಾ (ನಿಮ್ಮ ಕುಲ ಗೋಪಾಷ್ಟಮಿ ದಿನವೇ ಅಂತ್ಯವಾಗುತ್ತದೆ) ಎಂದು ಇಂದಿರಾ ಗಾಂಧಿಗೆ ಶಾಪ ಕೊಟ್ಟಿದ್ದರು. ಅದರಂತೆ ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ಸತ್ತಿದ್ದು ಗೋಪಾಷ್ಟಮಿಯ ದಿನ. ಇಂದಿರಾ ಗಾಂಧಿಗೆ ಗುಂಡಿಟ್ಟು ಕೊಂದ ದಿನವೂ ಗೋಪಾಷ್ಟಮಿ. ರಾಜೀವ್ ಗಾಂಧಿ ಬಾಂಬ್ ಬ್ಲಾಸ್ಟ್‌ನಲ್ಲಿ ಸತ್ತಿದ್ದು ಗೋಪಾಷ್ಟಮಿಯ ದಿನ ಎಂದು ಹೇಳಿದ್ದಾರೆ. ರಾಜೀವ ಗಾಂಧಿ ಹೇಳುವ ಬದಲು ರಾಹುಲ್ ಗಾಂಧಿ ಎಂದು ಅನಂತರ ಕುಮಾರ್ ಹೆಗಡೆ ಹೇಳಿದ್ದರು. ಬಳಿಕ ರಾಹುಲ್ ಗಾಂಧಿಯಲ್ಲ, ರಾಜೀವ ಗಾಂಧಿ ಎಂದು ಸರಿಪಡಿಸಿ ಹೇಳಿದ್ದಾರೆ.
ಇನ್ನು ಅನಂತ್ ಕುಮಾರ್ ಹೆಗಡೆ ಮಾತಿಗೆ ಆಧಾರವಿದೆಯೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ಆದರೆ, ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿಯ ಶಾಪವಿದೆ ಎಂದು ಅವರು ಹೇಳಿರುವುದು ಕುತೂಹಲದ ಚರ್ಚೆಗೆ ಕಾರಣವಾಗಿದೆ. ಇದೇ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ದೇಶದ ಮಸೀದಿಗಳನ್ನು ಒಡೆದು ಹಾಕುವ ಸುಳಿವು ನೀಡಿದ್ದು ಮಾತ್ರವಲ್ಲದೆ, ಬಾಬ್ರಿ ಮಸೀದಿ ಒಡೆದಿದ್ದು ಆರಂಭ ಮಾತ್ರ ಎಂದು ಹೇಳಿದ್ದಾರೆ.
ಚುನಾವಣಾ ಸಂಗ್ರಾಮಕ್ಕೆ ನಮ್ಮ ಟೀಂ ಈಗಿನಿಂದಲೇ ಸಿದ್ಧ: ಸಂಸದ ಅನಂತಕುಮಾರ ಹೆಗಡೆ
ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿಯ ಶಾಪ ನಿಜವೇ: ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಈ ಮೂವರು ಸಾವು ಕಂಡ ದಿನ ಗೋಪಾಷ್ಟಮಿಯ ದಿನವಾಗಿತ್ತೇ ಎನ್ನುವುದನ್ನು ಹುಡುಕಿದರೆ, ಉತ್ತರ ಇಲ್ಲ. 1980ರ ಜೂನ್ 23 ರಂದು ಸಂಜಯ್ ಗಾಂಧಿ ಸಾವು ಕಂಡಿದ್ದರು. ಆ ದಿನ ದಶಮಿಯಾಗಿತ್ತು. ರಾಜೀವ್ ಗಾಂಧಿ 1991ರ ಮೇ 21 ರಂದು ನಿಧನರಾಗಿದ್ದರು. ಆ ದಿನ ಅಷ್ಟಮಿಯಾಗಿತ್ತು. ಗೋಪಾಷ್ಟಮಿಯಾಗಿರಲಿಲ್ಲ. 1991ರ ಗೋಪಾಷ್ಟಮಿ ನವೆಂಬರ್ 14ಕ್ಕೆ ಬಿದ್ದಿತ್ತು. ಈ ಮೂವರ ಪೈಕಿ ಇಂದಿರಾ ಗಾಂಧಿ ಸಾವು ಕಂಡ ದಿನವಾದ 1984ರ ಅಕ್ಟೋಬರ್ 31 ಗೋಪಾಷ್ಟಮಿಯ ದಿನವಾಗಿತ್ತು. ಆದರೆ, ಅಂದು ಗಾಂಧಿ ಕುಟುಂಬಕ್ಕೆ ಕರ್ಪಾತ್ರಿ ಮಹಾರಾಜ್ ನೀಡಿದ್ದ ಶಾಪ ಬೇರೆಯದೇ ಅರ್ಥದಲ್ಲಿ ನಿಜವಾಗಿತ್ತು. ರಾಜೀವ್ ಗಾಂಧಿ ನಿಧನದೊಂದಿಗೆ ಇಂದಿರಾಗಾಂಧಿಯವರ ಗಂಡು ಸಂತಾನದ ರಾಜಕೀಯ ಅಂತ್ಯವಾಗಿ, ಸೊಸೆಯರಾದ ಸೋನಿಯಾ ಗಾಂಧಿ ಹಾಗೂ ಮನೇಕಾ ಗಾಂಧಿ ಕೈಸೇರಿತ್ತು. ಆದರೆ, ಇನ್ನೂ ಕೆಲವರು ಕರ್ಪಾತ್ರಿ ಮಹಾರಾಜ್ ನೀಡಿದ್ದ ಶಾಪ ಇಂದಿರಾ ಗಾಂಧಿಗೆ ಮಾತ್ರವೇ ಆಗಿತ್ತು ಎಂದು ವಾದಿಸುವವರಿದ್ದಾರೆ.
ಲೋಕಸಭೆ ಚುನಾವಣೆ 2024: ಟಿಕೆಟ್ ಕೈತಪ್ಪುವ ಭೀತಿ, ನಾಗಸಾಧು ಭೇಟಿಯಾದ ಅನಂತ್ ಕುಮಾರ್ ಹೆಗಡೆ..!