ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥಿಕವನ್ನಾಗಿ ಮಾಡುವ ಎಲ್ಲ ಪ್ರಯತ್ನ ಮಾಡಲಾಗಿತ್ತು. ಪ್ರತಿ ಕಾಮಗಾರಿಗೂ 60ರಿಂದ 70 ಪರ್ಸೆಂಟ್‌ ಕಮಿಷನ್‌ ಪಡೆಯುವ ಪರಿಪಾಠವಿತ್ತು ಎಂದು ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಆರೋಪಿಸಿದರು. 

ವಿಧಾನಸಭೆ (ಜು.06): ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥಿಕವನ್ನಾಗಿ ಮಾಡುವ ಎಲ್ಲ ಪ್ರಯತ್ನ ಮಾಡಲಾಗಿತ್ತು. ಪ್ರತಿ ಕಾಮಗಾರಿಗೂ 60ರಿಂದ 70 ಪರ್ಸೆಂಟ್‌ ಕಮಿಷನ್‌ ಪಡೆಯುವ ಪರಿಪಾಠವಿತ್ತು ಎಂದು ಕಾಂಗ್ರೆಸ್‌ ಶಾಸಕ ಟಿ.ಬಿ.ಜಯಚಂದ್ರ ಆರೋಪಿಸಿದರು. ರಾಜ್ಯಪಾರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾಪದ ಮೇಲೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ನೈತಿಕತೆ ಬಿಜೆಪಿ ಕಳೆದುಕೊಂಡಿದೆ. 2013-18ರವರೆಗಿನ ಕಾಂಗ್ರೆಸ್‌ ಸರ್ಕಾರ ತನ್ನ ಪ್ರಣಾಳಿಕೆಯ ಬಹುತೇಕ ಭರವಸೆಗಳನ್ನು ಈಡೇರಿಸಿತ್ತು. 

ಆದರೆ, ಕಳೆದ ಅವಧಿಯ ಬಿಜೆಪಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿತ್ತು. ಈಗ ನಾವು ಅನುಷ್ಠಾನಗೊಳಿಸಿದ ಯೋಜನೆಗಳ ಬಗ್ಗೆ ಮಾತನಾಡುತ್ತಿದೆ. ಕಳೆದ ಅವಧಿಯಲ್ಲಿ ಭ್ರಷ್ಟಾಚಾರ ಕಾನೂನಾತ್ಮಕವಾಗಿಯೇ ಮಾಡಲಾಗುತ್ತಿತ್ತು. ಗುತ್ತಿಗೆದಾರರ ಸಂಘ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಆರೋಪಿಸಿತ್ತು. ಆದರೆ, ನನಗೆ ಬಂದ ಮಾಹಿತಿ ಪ್ರಕಾರ 60 ರಿಂದ 70 ಪರ್ಸೆಂಟ್‌ ಕಮಿಷನ್‌ ಪಡೆಯಲಾಗುತ್ತಿತ್ತು ಎಂದು ದೂರಿದರು.

ಶಕ್ತಿ ಯೋಜನೆಯಿಂದ ನಷ್ಟವಾದ ಆಟೋ ಚಾಲಕರಿಗೆ ನೆರವು: ಸಚಿವ ರಾಮಲಿಂಗಾರೆಡ್ಡಿ

ಭೂ ಸುಧಾರಣಾ ಕಾಯ್ದೆಯಲ್ಲಿ ತಿದ್ದುಪಡಿ ತಂದು ಭೂಗಳ್ಳರಿಗೆ ಸಹಕಾರ ಮಾಡಿಕೊಡಲಾಯಿತು. ಎಪಿಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ಅದಾನಿ, ಅಂಬಾನಿಯಂತಹ ಉದ್ಯಮಪತಿಗಳಿಗೆ ನೆರವಾಗಲಾಯಿತು. ಕಾಯ್ದೆ ಬದಲಾವಣೆ ನಂತರ ವಾರ್ಷಿಕ 690 ಕೋಟಿ ರು.ನಷ್ಟಿದ್ದ ಎಪಿಎಂಸಿಗಳ ವಹಿವಾಟು 110 ಕೋಟಿ ರು.ಗೆ ಇಳಿಕೆಯಾಗಿದೆ. ಹೀಗೆ ಹಲವು ಕಾಯ್ದೆಗಳನ್ನು ಬದಲಿಸಿ ಸಾಕಷ್ಟುನಷ್ಟವನ್ನುಂಟು ಮಾಡಲಾಗಿದೆ. ಬ್ರಿಟೀಷರ ವಿರುದ್ಧ ಹೋರಾಡಿದಂತೆ ಕಾರ್ಪೋರೇಟ್‌ ಲಾಬಿ ವಿರುದ್ಧ ಹೋರಾಡಬೇಕಾದ ಅವಶ್ಯಕತೆಯಿದೆ ಎಂದರು.

ಯಾವುದೇ ಕಾರಣಕ್ಕೂ ನಾನು ನೋಟಿಸ್‌ಗೆ ಉತ್ತರ ಕೊಡಲ್ಲ: ರೇಣುಕಾಚಾರ್ಯ ಮತ್ತೆ ಕಿಡಿ

ಹಿಂದಿನಿಂದಲೂ ಕಾಮಗಾರಿಗಳನ್ನು ವಿಳಂಬ ಮಾಡುತ್ತಾ, ಯೋಜನಾ ವೆಚ್ಚ ಹೆಚ್ಚುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಈಗಿನ ಸರ್ಕಾರ ಗಮನಹರಿಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಆರಂಭದಲಿ 2,814 ಕೋಟಿ ರು. ಯೋಜನಾ ವೆಚ್ಚ ನಿಗದಿ ಮಾಡಲಾಗಿತ್ತು. ನಂತರ ಅದು 22 ಸಾವಿರ ಕೋಟಿ ರು. ಏರಿಕೆಯಾಯಿತು. ಆದರೂ, ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಅದೇ ರೀತಿ ಎತ್ತಿನಹೊಳೆ ಯೋಜನೆಗೆ ಆರಂಭದಲ್ಲಿ 6,500 ಕೋಟಿ ರು. ನಿಗದಿ ಮಾಡಲಾಗಿತ್ತು. ಈಗ ಆ ಮೊತ್ತ 24 ಸಾವಿರ ಕೋಟಿ ರು.ಗೆ ಹೆಚ್ಚಳವಾಗಿದೆ. ಈ ರೀತಿಯ ಹಲವು ಉದಾಹರಣೆಗಳು ದೊರೆಯುತ್ತವೆ. ಎಲ್ಲ ಸರ್ಕಾರಗಳು ಇದಕ್ಕೆ ಕಾರಣ. ಹೀಗಾಗಿ ಈಗಿನ ಸರ್ಕಾರ ಈ ಬಗ್ಗೆ ಎಚ್ಚರವಹಿಸಬೇಕು ಎಂದು ತಿಳಿಸಿದರು.