ಬಿಜೆಪಿ ಶಾಸಕರೋರ್ವರ ಉಚ್ಛಾಟನೆಗೆ ವರಿಷ್ಠರಿಗೆ ಶೀಘ್ರ ದೂರು
- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿರುವ ಶಾಸಕ
- ಮೊದಲು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
- ಶೀಘ್ರದಲ್ಲೇ ಶಾಸಕರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವವರನ್ನು ಉಚ್ಚಾಟಿಸುವಂತೆ ಆಗ್ರಹ
ಬೆಂಗಳೂರು (ಜು.09): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶೀಘ್ರದಲ್ಲೇ ಶಾಸಕರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವವರನ್ನು ಉಚ್ಚಾಟಿಸುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷ ಕಟ್ಟಿಬೆಳೆಸಿದವರು. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಒಪ್ಪುವುದಿಲ್ಲ. ಮಾತನಾಡುವವರು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದು ಒಂದೇ, ಪಕ್ಷದ ವಿರುದ್ಧ ಮಾತನಾಡುವುದು ಒಂದೇ. ಮೈಸೂರಿನಲ್ಲಿ ಯಾರೋ ಒಬ್ಬರು ಮಾತನಾಡಿದ್ದಾರೆ. ದೆಹಲಿಗೆ ತೆರಳಿ ವರಿಷ್ಠರಿಗೆ ಈ ಬಗ್ಗೆ ದೂರು ನೀಡುತ್ತೇವೆ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ : ಯತ್ನಾಳ್ .
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರೂ ಪದೇ ಪದೇ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಯತ್ನಾಳ್ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಆಮೇಲೆ ಮಾತನಾಡಲಿ. ರಾಜಕಾರಣದ ಬಗ್ಗೆ ಅಸಹ್ಯವಾಗುತ್ತಿದೆ. ನಮ್ಮ ಜೊತೆ 120 ಶಾಸಕರಿದ್ದು, ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ವಿರೋಧಿ ಶಾಸಕರನ್ನು ಉಚ್ಚಾಟನೆ ಮಾಡುವಂತೆ ಒತ್ತಡ ಹಾಕುತ್ತೇವೆ. ಪಕ್ಷದಲ್ಲಿ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಶಾಸಕರೆಲ್ಲ ಸಭೆ ಮಾಡಿ, ಚರ್ಚಿಸಿ ದೆಹಲಿಗೆ ಹೋಗುವ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ನಮ್ಮ ಹೈಕಮಾಂಡ್ ಬಹಳ ಗಟ್ಟಿಇದೆ. ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆ, ವಿಭಾಗವಾರು ಶಾಸಕರ ಸಭೆಯನ್ನೂ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಬಳಿ ಹೋಗಿದ್ದು ಅನುದಾನ ಕೇಳಲು ಅಷ್ಟೇ. ಬೆಂಗಳೂರಿಗೆ ಬಂದಾಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೋವಿಡ್ ಪರಿಸ್ಥಿತಿ, ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡುತ್ತೇವೆ. ದೆಹಲಿಗೆ ಹೋಗುವ ಬಗ್ಗೆಯೂ ನಾವು ಮಾತನಾಡಿದ್ದೇವೆ ಎಂದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರು ಅವರಿದ್ದರೆ ಮಾತ್ರ ಗೆದ್ದು ಬರುತ್ತೇವೆ. ಈಗ ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಗೆದ್ದು ಬರಲಿ ಎಂದು ವಿರೋಧಿ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.