ನಾನು ಪಕ್ಷಾಂತರಿಯಲ್ಲ. ನನಗೆ ಒಳಗೊಂದು ಹೊರಗೊಂದು ನೀತಿಯಿಲ್ಲ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಸಚಿವ ಕೆ.ಸಿ.ನಾರಾಯಣಗೌಡರಿಗೆ ತಿರುಗೇಟು ನೀಡಿದರು.

ಕೆ.ಆರ್‌.ಪೇಟೆ (ಏ.04): ನಾನು ಪಕ್ಷಾಂತರಿಯಲ್ಲ. ನನಗೆ ಒಳಗೊಂದು ಹೊರಗೊಂದು ನೀತಿಯಿಲ್ಲ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಸಚಿವ ಕೆ.ಸಿ.ನಾರಾಯಣಗೌಡರಿಗೆ ತಿರುಗೇಟು ನೀಡಿದರು. ಪಟ್ಟಣದ ಅಗ್ರಹಾರದ ಮಾರುಗುಡಿ ಆವರಣದಲ್ಲಿ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ವರಿಷ್ಠರು ಒಬ್ಬರನ್ನು ಮಟ್ಟಹಾಕಲು ಮತ್ತೊಬ್ಬರನ್ನು ಹುಟ್ಟು ಹಾಕುತ್ತಾರೆ. ಬೇಕಾದರೆ ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು ಅವರ ಅಂತರಾಳವನ್ನು ಕೇಳಿ ಎನ್ನುವ ಸಚಿವ ಕೆ.ಸಿ.ನಾರಾಯಣಗೌಡರ ಹೇಳಿಕೆಗೆ ತೀಕ್ಷ್ಣ ಪತ್ರಿಕ್ರಿಯೆ ನೀಡಿದರು.

ನನಗೆ ಗೊತ್ತಿರುವುದು ದೇವೇಗೌಡರ ಮನೆ ಮಾತ್ರ. ಜೆಡಿಎಸ್‌ ಹೊರತು ಪಡಿಸಿ ಬೇರೆ ಪಕ್ಷದ ಚಿಹ್ನೆ ನನಗೆ ಗೊತ್ತಿಲ್ಲ. ನನ್ನ ರಾಜಕೀಯ ಆರಂಭ ಜೆಡಿಎಸ್‌ನಿಂದ ಆಗಿದೆ. ಅಂತ್ಯವೂ ಇದೇ ಪಕ್ಷದಲ್ಲಿ ಆಗಲಿದೆ. ನಾರಾಯಣಗೌಡರಂತೆ ನಾನು ಪಕ್ಷಾಂತರಿಯಲ್ಲ. ನಾನು ಒಳಗೊಂದು ಹೊರಗೊಂದು ಮಾತನಾಡಲ್ಲ ಎಂದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್‌ ಪಕ್ಷದಲ್ಲಿ ಕೆಲಸ ಮಾಡುವುದು ಒಂದು ಪುಣ್ಯದ ಕೆಲಸ. ಸಚಿವ ನಾರಾಯಣಗೌಡ ಆ ಪುಣ್ಯವನ್ನು ಕಳೆದುಕೊಂಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜುಗೆ ಆ ಪುಣ್ಯ ಒದಗಿ ಬಂದಿದೆ ಎಂದರು.

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

ನನ್ನ ರಾಜಕೀಯದ ಆರಂಭದಲ್ಲಿ ನಾವೆಲ್ಲ ಜೋಳಿಗೆ ಹಿಡಿದು ಜನರಿಂದ ಹಣ ಪಡೆದು ರಾಜಕಾರಣ ಮಾಡುತ್ತಿದ್ದೆವು. ಇಂದು ಹಣ ಬಲ ಮುಂಚೂಣಿಗೆ ಬಂದಿದೆ. ಕೆ.ಆರ್‌.ಪೇಟೆ ಕ್ಷೇತ್ರದ ಜನ ಹಣ ಬಲದ ರಾಜಕಾರಣಿಗಳಿಗೆ ಮೇ 10ರ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಜೆಡಿಎಸ್‌ ಕಾರ್ಯಕರ್ತರ ಪಕ್ಷ ನಿಷ್ಠೆಯ ಮುಂದೆ ಯಾವುದೇ ರಾಜಕಾರಣಿಯ ಹಣ ಬಲದ ಆಟ ನಡೆಯುವುದಿಲ್ಲ ಎಂದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಮಗೆ ಸಿಕ್ಕ ಅಧಿಕಾರದ ಅಲ್ಪ ಅವಧಿಯಲ್ಲಿಯೇ ಹೇಮಾವತಿ ಯೋಜನೆಯನ್ನು ಪೂರ್ಣಗೊಳಿಸಿ ಇಲ್ಲಿನ ರೈತರ ಬದುಕಿಗೆ ಶಾಶ್ವತ ಅಸರೆ ನೀಡಿದರು. 

ಕಾವೇರಿ ಜಲ ವಿವಾದದ ನಡುವೆಯೂ ಹೇಮಾವತಿ ನೀರನ್ನು ಸದ್ಬಳಕೆ ಮಾಡಲು ಕ್ರಮ ವಹಿಸಿದ ದೂರದೃಷ್ಟಿಯ ನಾಯಕ ಎಚ್‌.ಡಿ.ದೇವೇಗೌಡರು ಎಂದು ಬಣ್ಣಿಸಿದರು. ಪಕ್ಷದ ಅಭ್ಯರ್ಥಿ ಎಚ್‌.ಟಿ.ಮಂಜು ಮಾತನಾಡಿ, ಜೆಡಿಎಸ್‌ ಕಾರ್ಯಕರ್ತರ ಬಲದಿಂದ ಎರಡು ಸಲ ಶಾಸಕರಾದ ಸಚಿವ ಕೆ.ಸಿ.ನಾರಾಯಣಗೌಡ ಪಕ್ಷ ದ್ರೋಹ ಮಾಡಿ ಬಿಜೆಪಿ ಸೇರಿದರು. ಅಭಿವೃದ್ಧಿಗಾಗಿ ಬಿಜೆಪಿ ಸೇರಿದೆ ಎನ್ನುವ ನಾರಾಯಣಗೌಡರ ಕೆಲಸಗಳು ಗುದ್ದಲಿ ಪೂಜೆ ಸಚಿವರಾಗಿಯೇ ಉಳಿದಿದ್ದಾರೆ ಎಂದು ಟೀಕಿಸಿದರು.

ಸಾಗರ, ಸೊರಬ ಕ್ಷೇತ್ರ​ ಅಭ್ಯ​ರ್ಥಿ​ಗಳ ಕ್ಷೇತ್ರ ಬದ​ಲಾ​ವಣೆ?: ಕುಮಾರ್‌ ಬಂಗಾ​ರಪ್ಪ ವಿರುದ್ಧ ತೊಡೆ ತಟ್ಟಿ​ರುವ ಬಿಜೆಪಿ ಮುಖಂಡರು

ಕ್ಷೇತ್ರದಲ್ಲಿ ಭ್ರಷ್ಟಾಚಾರವನ್ನು ಬೆಳೆಸಿದ ನಾರಾಯಣಗೌಡರಿಗೆ ಜನ ಮೇ 10 ರಂದು ಉತ್ತರ ಕೊಡಲಿದ್ದಾರೆ. ಸಚಿವರ ಹಣಬಲದ ರಾಜಕಾರಣಕ್ಕೆ ಜೆಡಿಎಸ್‌ ಕಾರ್ಯಕರ್ತರು ಬಲಿಯಾಗುವುದಿಲ್ಲ. ಜೆಡಿಎಸ್‌ ಕಾರ್ಯಕರ್ತರು ಪ್ರೀತಿ, ಗೌರವ ಮತ್ತು ವಿಶ್ವಾಸಕ್ಕೆ ಬಗ್ಗಿ ನಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.