ಕಾಂಗ್ರೆಸ್ ಭ್ರಷ್ಟ, ಗೂಂಡಾ ಪಕ್ಷ: ಅಶೋಕ್, ಸುಧಾಕರ್
ಭ್ರಷ್ಟಾಚಾರ, ಕೋಮುವಾದ ಮತ್ತು ಗೂಂಡಾಗಿರಿಗೆ ಒಂದು ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಆಡಳಿತಾರೂಢ ಬಿಜೆಪಿ ಸರ್ಕಾರದ ಹಿರಿಯ ಸಚಿವರು ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು (ಅ.31): ಭ್ರಷ್ಟಾಚಾರ, ಕೋಮುವಾದ ಮತ್ತು ಗೂಂಡಾಗಿರಿಗೆ ಒಂದು ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಆಡಳಿತಾರೂಢ ಬಿಜೆಪಿ ಸರ್ಕಾರದ ಹಿರಿಯ ಸಚಿವರು ತಿರುಗೇಟು ಕೊಟ್ಟಿದ್ದಾರೆ. ಭಾನುವಾರ ಪಕ್ಷದ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಚಾತಕಪಕ್ಷಿಯಂತೆ ಹವಣಿಸುತ್ತಿದೆ. ಕರ್ನಾಟಕವನ್ನು ದೆಹಲಿಯ ನಾಯಕರಿಗೆ ಎಟಿಎಂ ಮಾಡಲು ಮತ್ತು ವೈಯಕ್ತಿಕವಾಗಿ ಜೇಬು ತುಂಬಿಸಲು ಇಲ್ಲಿ ಅಧಿಕಾರ ಪಡೆಯುವ ಹವಣಿಕೆ ಕಾಂಗ್ರೆಸ್ಸಿಗರದು. ಕರ್ನಾಟಕದ ಮೇಲೆ ಕಾಂಗ್ರೆಸ್ಸಿಗರ ವಕ್ರದೃಷ್ಟಿ ಬಿದ್ದಿದೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರಿಗೆ ನಮ್ಮ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ಅಹಿಂದ ಸಮುದಾಯದಲ್ಲಿ ಅತ್ಯಂತ ಎತ್ತರದ ನಾಯಕರಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾರೆ. ಕಲ್ಬುರ್ಗಿಯ ಒಬಿಸಿ ಸಮಾವೇಶ ಲಕ್ಷಾಂತರ ಜನ ಸೇರಿ ಅತ್ಯಂತ ಯಶಸ್ವಿ ಎನಿಸಿದೆ. ಅದನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ವೈದ್ಯರ ಹಾಜರಾತಿ ಮೇಲೆ ನಿಗಾಕ್ಕೆ ಬಯೋಮೆಟ್ರಿಕ್: ಸಚಿವ ಸುಧಾಕರ್
ಕಾಂಗ್ರೆಸ್‌ನ 2 ಜಿ ಹಗರಣ, ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣಗಳಿಂದ ಹಲವರು ಜೈಲಿನಲ್ಲಿದ್ದಾರೆ. ಉಳಿದವರು ಜಾಮೀನಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ-ರಾಹುಲ ಗಾಂಧಿ ಅವರು ಕೂಡ ಹಗರಣದಲ್ಲಿ ಭಾಗಿಯಾಗಿ ಜಾಮೀನಿನಡಿ ಹೊರಗಿದ್ದಾರೆ. ಬೆಂಗಳೂರಿನ ಸ್ಟೀಲ್ ಬ್ರಿಡ್ಜ್‌ನಲ್ಲಿ 65 ಕೋಟಿ ಲೂಟಿ ಮಾಡಲು ಟೆಂಡರ್ ಮಾಡಿದ್ದರು. ಜನರ ಹೋರಾಟದ ಪರಿಣಾಮವಾಗಿ ರಾತ್ರೋರಾತ್ರಿ ಅದನ್ನು ವಾಪಸ್ ಪಡೆದರು. ಇವರು ಸತ್ಯ ಹರಿಶ್ಚಂದ್ರರಾಗಿದ್ದರೆ, ಭ್ರಷ್ಟಾಚಾರ ಇಲ್ಲದಿದ್ದರೆ ಆ ಯೋಜನೆಯನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಇನ್‌ಸ್ಪೆಕ್ಟರ್ ನಂದೀಶ್ ಅವರದ್ದು ಸಹಜ ಸಾವು. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ನಿಮ್ಮ ಕಾಲದಲ್ಲಿ ಎಷ್ಟುಇಂಥ ಸಮಸ್ಯೆಗಳಾಗಿವೆ? ಗಣಪತಿ ಆತ್ಮಹತ್ಯೆ ಮಾಡಿಕೊಂಡರು; ಡಿವೈಎಸ್ಪಿ ಸ್ವಯಂ ನಿವೃತ್ತಿ ಪಡೆಯುವ ಪರಿಸ್ಥಿತಿ ತಂದಿಟ್ಟಿದ್ದೀರಲ್ಲವೇ? ಅನುಪಮಾ ಶೆಣೈ ಆರೋಪಕ್ಕೆ ಸಚಿವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ಕಲ್ಲಪ್ಪ ಬಸಪ್ಪ ಹಂಡಿಭಾಗ್ ಸಾವಾಯಿತು. ಸಚಿವರ ವಿರುದ್ಧ ಆಪಾದನೆ ಮಾಡಿ ಇಷ್ಟೆಲ್ಲ ಪ್ರಕರಣ ನಡೆದರೂ ನೀವೇನು ಮಾಡಿದ್ದೀರಿ? ನಂದೀಶ್ ಅವರ ಕುಟುಂಬದವರು ಸರಕಾರದ ಮೇಲೆ ಆರೋಪ ಮಾಡಿ ಹೇಳಿಕೆ ಕೊಟ್ಟಿಲ್ಲ. ನೀವು ರಾಜಕೀಯದ ಬಣ್ಣ ಬೆರೆಸುತ್ತಿದ್ದೀರಿ ಎಂದು ಸಚಿವರು ಆಪಾದಿಸಿದರು.
ವರ್ಷಾಂತ್ಯಕ್ಕೆ 25 ಕೋಟಿ ರು. ವೆಚ್ಚದ ಸಾರ್ವಜನಿಕ ಆಸ್ಪತ್ರೆ ಕಾರ್ಯಾರಂಭ: ಸಚಿವ ಸುಧಾಕರ್
ಸಿದ್ದು, ಡಿಕೆಶಿ ಸದಾ ಉತ್ತರ-ದಕ್ಷಿಣ ಧ್ರುವ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವಾಗಲೂ ಉತ್ತರ-ದಕ್ಷಿಣ ಧ್ರುವಗಳಿದ್ದಂತೆ. ಆದ್ದರಿಂದ ಒಬೊಬ್ಬರು ಒಂದೊಂದು ದಿಕ್ಕಿಗೆ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟುವರ್ಷ ನೆನಪಿಗೆ ಬಾರದ ಜನರ ಸಂಕಷ್ಟಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗೆ ನೆನಪಾಗುತ್ತಿದೆ. ಚುನಾವಣೆ ಹತ್ತಿರ ಬಂದಾಗ ಪಾದಯಾತ್ರೆ ನಡೆಸುವುದು ಸಾಮಾನ್ಯ. ಕಾಂಗ್ರೆಸ್‌ನವರ ಯಾತ್ರೆಗೆ ಅಷ್ಟೊಂದು ಮಹತ್ವ ಕೊಡಬೇಕಿಲ್ಲ ಎಂದರು. ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಶಾಸಕರಲ್ಲಿ ಯಾರೂ ವಾಪಸ್ ಹೋಗುವುದಿಲ್ಲ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕೂಡ ಮತ್ತೆ ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.