2028ರವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ಬ್ಯಾಡಗಿ (ನ.05): ಹೈಕಮಾಂಡ್ ಎದುರು ಯಾವುದೇ ಒಪ್ಪಂದವಾಗಿಲ್ಲ. ಬರುವ 2028ರವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ನಿಗಮ ಮಂಡಳಿಗಳ ಅಧ್ಯಕ್ಷರಾಗಲಿ, ಯಾರು ಇರಬೇಕೆಂಬುದನ್ನು ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಲಿದ್ದಾರೆ. ಅಲ್ಲಿಯವರೆಗೂ ಸದರಿ ವಿಷಯ ಚರ್ಚೆಗೆ ಬರುವುದು ಬೇಡ ಎಂದರು.
ತ್ಯಾಗಕ್ಕೆ ಸಿದ್ಧ: ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದಲ್ಲಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲೂ ಸಿದ್ಧನಿದ್ದೇನೆ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಇದ್ಯಾವುದೂ ಇಲ್ಲವೆಂದರೂ ಕೇವಲ ಕಾರ್ಯಕರ್ತನಾಗಿ ಪಕ್ಷದ ಕೆಲಸವನ್ನು ಮಾಡಲು ಸಿದ್ಧನಿರುವುದಾಗಿ ತಿಳಿಸಿದರು.
ಕ್ರಾಂತಿ ಮಾಧ್ಯಮಗಳ ಸೃಷ್ಟಿ: ನ. 26ರಂದು ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲವೂ ಮಾಧ್ಯಮಗಳ ಸೃಷ್ಟಿಯೇ ಹೊರತು ವಾಸ್ತವ ಸಂಗತಿಗಳಲ್ಲ. ತಾಳ್ಮೆಯಿಂದ ಕಾಯ್ದು ನೋಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಬಸವರಾಜ ಶಿವಣ್ಣನವರ, ಯಾಸೀರಖಾನ್ ಪಠಾಣ ಸೇರಿದಂತೆ ಇನ್ನಿತರರಿದ್ದರು.
ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗುತ್ತಾರೆ: ಸಚಿವ ಸತೀಶ್ ಜಾರಕಿಹೊಳಿ ಆಗಾಗ ದೆಹಲಿಗೆ ಹೋಗುತ್ತಾರೆ. ಅವರು ಇಲಾಖೆ ಹಾಗೂ ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಹೋಗುತ್ತಾರೆ. ದಲಿತ ಸಿಎಂ ಕೂಗಿನ ಮಧ್ಯೆ ಜಾರಕಿಹೊಳಿ ದೆಹಲಿ ಭೇಟಿ ಎನ್ನುವುದು ವದಂತಿ ಮಾತ್ರ. ಈಗ ಸಿಎಂ ಹುದ್ದೆ ಖಾಲಿ ಇಲ್ಲ. ನಮ್ಮದು ಹೈಕಮಾಂಡ್ ತೀರ್ಮಾನದ ಪಕ್ಷ. ಇದೇ ತಿಂಗಳು ಡಿ.ಕೆ.ಶಿವಕುಮಾರ್ ಸಿಎಂ ಅನ್ನೋದು ಬಿಜೆಪಿಯವರ ಅಭಿಪ್ರಾಯವಷ್ಟೇ. ಸಿಎಂ ಖುರ್ಚಿ ಖಾಲಿ ಇಲ್ಲ, ಹಾಗೇ ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ ಎಂದರು.
ಹೈಕಮಾಂಡ್ ನಿರ್ಧಾರವೇ ಅಂತಿಮ
ಮುಂದಿನ ಚುನಾವಣೆಗೂ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋಗುತ್ತೇವೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎಂಬುದರ ಬಗ್ಗೆ ಗೊತ್ತಿಲ್ಲ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು. ನನಗೆ ಸಿಎಂ ಆಗುವ ಆಸೆ ಇಲ್ಲ. ಸಚಿವ ಸ್ಥಾನ ಬೇಡ, ಪಕ್ಷದ ಕೆಲಸ ಮಾಡಿ ಎಂದು ಹೈಕಮಾಂಡ್ ಹೇಳಿದರೆ ಅದಕ್ಕೂ ಒಪ್ಪಿಕೊಳ್ಳುತ್ತೇನೆ ಎಂದರು.
