ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತು ಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ!
ಕೋವಿಡ್ ಮಹಾಮಾರಿ ಸೃಷ್ಠಿಸಿರುವ ಬಿಕ್ಕಟ್ಟಿನಿಂದ ಜನ ಸಂಕಷ್ಟದಲ್ಲಿದ್ದರೆ ಆಹಾರ ಸಚಿವ ಉಮೇಶ್ ಕತ್ತಿ ಮಾತ್ರ ಉಡಾಫೆ ಉತ್ತರ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬೆಳಗಾವಿ, (ಏ.28): ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಸತ್ತು ಹೋಗು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
"
ಸಚಿವರ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಹಾರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರೈತರ ಆತ್ಮಹತ್ಯೆ ಬಗ್ಗೆ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಸಚಿವ
ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತಿವಿ. ಲಾಕ್ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ರು.
ಲಾಕ್ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ? ಎಂದು ಈಶ್ವರ್ ಪ್ರಶ್ನಿಸಿದಕ್ಕೆ ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಅಹಂಕಾರದ ಮಾತುಗಳನ್ನಾಡಿದ್ದಾರೆ. ಆಹಾರ ಸಚಿವರ ಈ ಆಡಿಯೋ ವೈರಲ್ ಆಗಿದೆ.
ಹೇಳಿಕೆಗೆ ಸಮರ್ಥನೆ:
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಉಮೇಶ್ ಕತ್ತಿ, ಯೋಜನೆ ಏನು ಇದೆಯೋ ಅದನ್ನೇ ಹೇಳಿದ್ದೇನೆ. ಕರೆ ಮಾಡಿ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ ಅದಕ್ಕೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಅದಕ್ಕಿಂತ ಬೇರೆ ಇನ್ನೇನು ಹೇಳಲಿ. ಬೇಡ ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದಲ್ಲಿ ಊಟ ಸಿಗದೆ ಯಾರೂ ಸಾಯಬಾರದು. ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಎಂದು ಬೆಳಗಾವಿಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಇದು ಬಿಜೆಪಿ ಸಂಸ್ಕೃತಿ. ಸರ್ಕಾರದ ಯಾವ ಮಂತ್ರಿಗಳು ಇದರ ಬಗ್ಗೆ ಮಾತಾಡಿ ಎಂದು ಹೇಳುವುದಿಲ್ಲ. ಮಂತ್ರಿಗಳ ಈ ಧೋರಣೆಗಳಿಂದ ಈ ರೀತಿ ನಡೆಯುತ್ತಿದೆ. ಇದರಲ್ಲಿ ಯಾರು ಹೆಚ್ಚಿಲ್ಲ, ಯಾರು ಕಡಿಮೆಯಿಲ್ಲ. ಇದಕ್ಕೆ ಸಿಎಂ ಉತ್ತರ ಕೊಡಬೇಕು. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು. ಬಿಜೆಪಿ ನಾಯಕರು ಉತ್ತರ ಕೊಡಬೇಕು. ರೈತರು ಅಧಿಕಾರದಲ್ಲಿ ಇದ್ದವರಿಗೆ ಕೇಳ್ತಾರೆ ಎಂದರು.