ಬೆಂಗಳೂರು, (ಆ.09): ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆ, ಜನನಾಯಕರಿಗೆ ಐಷಾರಾಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ತಾರತಮ್ಯದ ಬಗ್ಗೆ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಆರೋಗ್ಯ ಸಚಿವ ಶ್ರೀರಾಮುಲು ಮಾದರಿಯಾಗಿದ್ದಾರೆ.

ಹೌದು... ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿದೆ. 

ಸಚಿವ ಶ್ರೀರಾಮುಲುಗೂ ಕೊರೋನಾ: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗೆ ದಾಖಲು

ರಾಜ್ಯದಲ್ಲಿ ಬಡವರು, ಜನಸಾಮಾನ್ಯರು ಕೋವಿಡ್‌ ಚಿಕಿತ್ಸೆಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಈ ಇಬ್ಬರು ಜನನಾಯಕರು ಪ್ರತಿಷ್ಠಿತ ಐಷಾರಾಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಇದೀಗ ಶ್ರೀರಾಮುಲು ಮಾದರಿ ಜನನಾಯಕ ಎನಿಸಿಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ರಾಮುಲು ಚಿಕಿತ್ಸೆ
ಇಂದು ಮಧ್ಯಾಹ್ನದ ವೇಳೆಗೆ ಶ್ರೀರಾಮುಲು ಅವರಿಗೆ ಕೊರೋನಾ ಇರೋದು ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ಸರ್ಕಾರಿ ಆಸ್ಪತ್ರೆ ಬೌರಿಂಗ್​ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೈಫೈ ವಾರ್ಡ್​​ಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಬರುತ್ತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಬೌರಿಂಗ್ ಆಸ್ಪತ್ರೆಯ ಸಾಮಾನ್ಯ ವಾರ್ಡಿನಲ್ಲಿಯೇ ದಾಖಲಾಗಿದ್ದಾರೆ.

ತುಕ್ಕು ಹಿಡಿದಿರುವ ಕಾಟ್​ನಲ್ಲಿರುವ ಬೆಡ್​ ಮೇಲೆ ರಾಮುಲು ಕುಳಿತುಕೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿರುವ ಫೋಟೋವೊಂದನ್ನು ಶ್ರೀರಾಮುಲು ಹಂಚಿಕೊಂಡಿದ್ದಾರೆ. ಆದ್ರೆ, ಇದರು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

 ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ತಪ್ಪು ಸಂದೇಶ ಕೊಡುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಕೇವಲ ಬಡವರಿಗೆ ಸೀಮಿತವೇ? ಇವರುಗಳೇ ನಿರ್ಮಿಸಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಇವರಿಗೆ ನಂಬಿಕೆ ಇಲ್ಲವೇ ಎಂಬ ಪ್ರಶ್ನೆಗಳನ್ನು ಜನರು ಮುಂದಿಟ್ಟಿದ್ದಾರೆ.