ಬೆಂಗಳೂರು(ನ.20): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಅವರು ತಮ್ಮ ಪರಮಾಪ್ತ ಶಾಸಕ ಮಹೇಶ್ ಕುಮಟಳ್ಳಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ತಮ್ಮ ನೆಚ್ಚಿನ ಆಪ್ತನ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ಕಸರತ್ತು ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬಿಡು ಬಿಟ್ಟಿರುವ ಸಚಿವ ಜಾರಕಿಹೊಳಿ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಿಸಲು ಸಾಹುಕಾರ್ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ತಮ್ಮೊಂದಿಗೆ ರಾಜೀನಾಮೆ ಕೊಟ್ಟು ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ್ದ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್‌ನಲ್ಲಿ ಲಾಬಿ ನಡೆಸುತ್ತಿದ್ದಾರೆ. ಸಿಎಂ ದೆಹಲಿಗೆ ತೆರಳುವ ಮುನ್ನಾ ದಿನವೇ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದರು. 

ಸಂಪುಟ ವಿಸ್ತರಣೆ ಸರ್ಕಸ್: ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ?

ಸಂಪುಟ ವಿಸ್ತರಣೆ ವೇಳೆ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಪಡೆಯಲು ಜಾರಕಿಹೊಳಿ ರಣತಂತ್ರ ಹೆಣೆದಿದ್ದಾರೆ. ಈ ವೇಳೆ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾರ್ಡ್ ಪ್ರಯೋಗಿಸಿದ್ದಾರೆ. ಲಿಂಗಾಯತ ಸಮುದಾಯ ಸೆಳೆಯಲು ಮಹೇಶ್ ಕುಮಟಳ್ಳಿಗೆ ಅವಕಾಶ ನೀಡಲು ಲಾಭಿ ಆರಂಭಿಸಿದ್ದಾರೆ. 

ಈ ಸಂಬಂಧ ಕೇಂದ್ರದ ಪ್ರಭಾವಿ ಸಚಿವರನ್ನು ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.